ADVERTISEMENT

ಇಂಗ್ಲೆಂಡ್ ಸರಣಿಗೆ ಏಕೈಕ ಕನ್ನಡತಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

ಬೆಂಗಳೂರು: ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಕರ್ನಾಟಕದ ಏಕೈಕ ಆಟಗಾರ್ತಿ ವೇದ ಕೃಷ್ಣಮೂರ್ತಿ ಅವರು ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿರುವ ಭಾರತ ತಂಡವನ್ನು ಇದೇ ಮೊದಲ ಬಾರಿಗೆ ಪ್ರತಿನಿಧಿಸುತ್ತಿರುವ ಅವರು ದೇಶಿಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದ್ದರಿಂದಲೇ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ. 23.00 ಸರಾಸರಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿರುವ ವೇದ ಅವರ ವೈಯಕ್ತಿಕ ಗರಿಷ್ಠ ರನ್ ಗಳಿಕೆ 107 ಆಗಿದೆ. ಸ್ಪಿನ್ ಬೌಲರ್ ಅಗಿರುವ ಅವರು ಚಿಕ್ಕ ಮಗಳೂರು ಜಿಲ್ಲೆಯ ಬೀರೂರಿನವರು. ಅವರೊಂದಿಗೆ `ಪ್ರಜಾವಾಣಿ ನಡೆಸಿದ ಮಾತುಕತೆಯ ಸಾರ ಇಲ್ಲಿದೆ.

* ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಲಭಿಸಿದೆ. ಏನೆನಿಸುತ್ತಿದೆ?
ನಿಜಕ್ಕೂ ಖುಷಿಯಾಗಿದೆ. ದೇಶಿಯ ಕ್ರಿಕೆಟ್‌ನಲ್ಲಿ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ನನ್ನ ಶ್ರಮಕ್ಕೆ ಈಗ ಫಲ ದೊರೆಯುತ್ತಿದೆ.

ADVERTISEMENT

* ಈ ಪ್ರವಾಸಕ್ಕೆ ಹೇಗೆ ಸಜ್ಜುಗೊಂಡಿದ್ದೀರಿ?
ನಮ್ಮ ಕೋಚ್ ಮಾರ್ಗದರ್ಶನದಲ್ಲಿ ತಯಾರಿ ನಡೆಸಿದ್ದೇನೆ. ಸಾಕಷ್ಟು ಕಠಿಣ ಅಭ್ಯಾಸ ನಡೆಸಿದ್ದೇನೆ. ಉತ್ತಮ ಪ್ರದರ್ಶನ ನೀಡುತ್ತೇನೆ ಎನ್ನುವ ವಿಶ್ವಾಸವಿದೆ.

* ಇಂಗ್ಲೆಂಡ್‌ನ ವಾತವಾರಣ, ಅಲ್ಲಿನ ಪಿಚ್ ಬಗ್ಗೆ?
ವಾತವಾರಣ ಯಾವುದೇ ಇದ್ದರೂ ಆತಂಕವಿಲ್ಲ. ಎಲ್ಲಿಯೇ ಹೋದರೂ ಮೊದಲು ಅಲ್ಲಿನ ಪಿಚ್‌ಗೆ ಹೊಂದಿಕೊಂಡು ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಲು ಪ್ರಯತ್ನಿಸುತ್ತೇನೆ.

* ಅಲ್ಲಿನ ಪಿಚ್‌ಗಳು ವೇಗದ ಬೌಲರ್‌ಗಳಿಗೆ ನೆರವು ನೀಡುತ್ತವಲ್ಲಾ?
ಖಂಡಿತಾ. ವೇಗದ ಬೌಲರ್‌ಗಳಿಗೆ ಪಿಚ್‌ಗಳು ನೆರವು ನೀಡುತ್ತಿದ್ದರೂ, ಹೊಂದಾಣಿಕೆ ಮಾಡಿಕೊಂಡು ಆಡುತ್ತೇನೆ. ಇಂಗ್ಲೆಂಡ್‌ನ ಪಿಚ್‌ಗಳು ಕೆಲ ಸಲ ಸ್ಪಿನ್ ಬೌಲರ್‌ಗಳಿಗೂ ನೆರವಾದ ಉದಾಹರಣೆಗಳಿವೆ.

* ಭಾರತ ತಂಡ ನಿಮ್ಮಿಂದ ಏನನ್ನು ನಿರೀಕ್ಷಿಸಬಹುದು?
ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ. ಸಿಕ್ಕ ಅವಕಾಶವನ್ನು ಖಂಡಿತವಾಗಿಯೂ ಬಳಸಿಕೊಳ್ಳುತ್ತೇನೆ. ಭಾರತ ಈ ಸರಣಿಯಲ್ಲಿ ಜಯಿಸಲು ನೆರವಾಗುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.