ADVERTISEMENT

ಇಂಗ್ಲೆಂಡ್‌ ಸವಾಲು ಮೀರಿದ ಭಾರತ ತಂಡ

ಪಿಟಿಐ
Published 11 ಏಪ್ರಿಲ್ 2018, 19:40 IST
Last Updated 11 ಏಪ್ರಿಲ್ 2018, 19:40 IST
ಭಾರತದ ಮನದೀಪ್‌ ಸಿಂಗ್ ಮತ್ತು ಮನ್‌ಪ್ರೀತ್‌ ಸಿಂಗ್‌ (ಬಲ) ಸಂಭ್ರಮಿಸಿದರು ಎಎಫ್‌ಪಿ ಚಿತ್ರ
ಭಾರತದ ಮನದೀಪ್‌ ಸಿಂಗ್ ಮತ್ತು ಮನ್‌ಪ್ರೀತ್‌ ಸಿಂಗ್‌ (ಬಲ) ಸಂಭ್ರಮಿಸಿದರು ಎಎಫ್‌ಪಿ ಚಿತ್ರ   

ಗೋಲ್ಡ್‌ ಕೋಸ್ಟ್‌: ವರುಣ್‌ ಕುಮಾರ್‌ ಮತ್ತು ಮನದೀಪ್‌ ಸಿಂಗ್‌ ಅವರ ಕೈಚಳಕದಲ್ಲಿ ಅರಳಿದ ತಲಾ ಒಂದು ಗೋಲುಗಳ ಬಲದಿಂದ ಭಾರತ ತಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದ ಹಾಕಿ ಪಂದ್ಯದಲ್ಲಿ ಗೆದ್ದಿತು.

ಗೋಲ್ಡ್‌ ಕೋಸ್ಟ್‌ ಹಾಕಿ ಕೇಂದ್ರದಲ್ಲಿ ಬುಧವಾರ ನಡೆದ ‘ಬಿ’ ಗುಂಪಿನ ಅಂತಿಮ ಹೋರಾಟದಲ್ಲಿ ಮನ್‌ಪ್ರೀತ್‌ ಸಿಂಗ್ ಬಳಗ 4–3 ಗೋಲುಗಳಿಂದ ಬಲಿಷ್ಠ ಇಂಗ್ಲೆಂಡ್‌ ತಂಡಕ್ಕೆ ಆಘಾತ ನೀಡಿತು.

ಇದರೊಂದಿಗೆ ಭಾರತ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ADVERTISEMENT

ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಮನ್‌ಪ್ರೀತ್‌ ಪಡೆ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಮತ್ತು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

ಭಾರತ ಮತ್ತು ಇಂಗ್ಲೆಂಡ್‌ ತಂಡದ ಆಟಗಾರರು ಮೊದಲ ಕ್ವಾರ್ಟರ್‌ನ ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾದರು. ಹೀಗಾಗಿ ಆರಂಭದ 16 ನಿಮಿಷಗಳ ಅವಧಿಯಲ್ಲಿ ಯಾವ ತಂಡಕ್ಕೂ ಗೋಲು ಗಳಿಸಲು ಆಗಲಿಲ್ಲ. 17ನೇ ನಿಮಿಷದಲ್ಲಿ ಡೇವಿಡ್‌ ಕೊಂಡೊನ್‌ ಆಂಗ್ಲರ ನಾಡಿನ ತಂಡದ ಖಾತೆ ತೆರೆದರು. ಆ್ಯಡಮ್‌ ಡಿಕ್ಸನ್‌ ಬಾರಿಸಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಡೇವಿಡ್‌, ಅದನ್ನು ಗುರಿ ಮುಟ್ಟಿಸಿದ ರೀತಿ ಸೊಗಸಾಗಿತ್ತು.

ಇದರ ಬೆನ್ನಲ್ಲೆ ಇಂಗ್ಲೆಂಡ್‌ಗೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಎದುರಾಳಿ ಆಟಗಾರ ಬಾರಿಸಿದ ಚೆಂಡನ್ನು ಭಾರತದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ತಡೆದರು.

33ನೇ ನಿಮಿಷದಲ್ಲಿ ನಾಯಕ ಮನ್‌ಪ್ರೀತ್‌ ಗೋಲು ಬಾರಿಸಿ 1–1ರ ಸಮಬಲಕ್ಕೆ ಕಾರಣರಾದರು.

ಮನದೀಪ್‌ ಸಿಂಗ್‌ ಚೆಂಡನ್ನು ಡ್ರಿಬಲ್‌ ಮಾಡುತ್ತಾ ಆವರಣ ಪ್ರವೇಶಿಸುವುದನ್ನು ತಡೆಯಲು ಇಂಗ್ಲೆಂಡ್‌ನ ರಕ್ಷಣಾ ವಿಭಾಗದ ಆಟಗಾರರು ಮುಂದಾದರು. ಇದನ್ನು ಗಮನಿಸಿದ ಮನದೀಪ್‌ ಚೆಂಡನ್ನು ಮನ್‌ಪ್ರೀತ್‌ ಅವರತ್ತ ತಳ್ಳಿದರು.

ಚೆಂಡನ್ನು ನಿಯಂತ್ರಣಕ್ಕೆ ಪಡೆದ ಮನ್‌ಪ್ರೀತ್‌ ಅದನ್ನು 30 ಗಜ ದೂರದಿಂದ ಗುರಿ ಮುಟ್ಟಿಸಿ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ಮೂರನೆ ಕ್ವಾರ್ಟರ್‌ನಲ್ಲಿ ಭಾರತ ಪ್ರಾಬಲ್ಯ ಮೆರೆಯಿತು. 51 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ರೂಪಿಂದರ್‌ ಪಾಲ್‌ ಸಿಂಗ್‌ ಗೋಲು ಹೊಡೆದರು.

ಭಾರತದ ಪಾಳಯದಲ್ಲಿ ಈ ಖುಷಿ ಹೆಚ್ಚು ಕಾಲ ಉಳಿಯಲು ಇಂಗ್ಲೆಂಡ್‌ ತಂಡದ ಲಿಯಾಮ್‌ ಆ್ಯನ್‌ಸೆಲ್‌ ಅವಕಾಶ ನೀಡಲಿಲ್ಲ.

52ನೇ ನಿಮಿಷದಲ್ಲಿ ಲಿಯಾಮ್‌ ಗೋಲು ದಾಖಲಿಸಿದರು. ಹೀಗಾಗಿ ಆಂಗ್ಲರ ನಾಡಿನ ತಂಡ 2–2ರಲ್ಲಿ ಸಮಬಲ ಸಾಧಿಸಿತು.

56ನೇ ನಿಮಿಷದಲ್ಲಿ ಸ್ಯಾಮ್‌ ವಾರ್ಡ್‌ ಚೆಂಡನ್ನು ಗುರಿ ತಲುಪಿಸಿ ಇಂಗ್ಲೆಂಡ್‌ಗೆ 3–2ರ ಮುನ್ನಡೆ ತಂದುಕೊಟ್ಟರು. 59ನೇ ನಿಮಿಷದಲ್ಲಿ ವರುಣ್‌ ಕುಮಾರ್‌ ಗೋಲು ಬಾರಿಸಿದ್ದರಿಂದ ಭಾರತ 3–3ರಲ್ಲಿ ಸಮಬಲ ಮಾಡಿಕೊಂಡಿತು. ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು.

60ನೇ ನಿಮಿಷದಲ್ಲಿ ಮನದೀಪ್‌ ಸಿಂಗ್‌ ಮೋಡಿ ಮಾಡಿದರು. ಮಿಡ್‌ ಫೀಲ್ಡ್‌ ವಿಭಾಗದಿಂದ ಮನ್‌ಪ್ರೀತ್‌ ಬಾರಿಸಿದ ಚೆಂಡನ್ನು ಎದುರಾಳಿ ಆವರಣದ ಸನಿಹ ನಿಂತಿದ್ದ ಮನದೀಪ್‌ ‘ಫ್ಲಿಕ್‌’ ಮಾಡಿ ಗುರಿ ಸೇರಿಸಿದರು.

ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ

60ನೇ ನಿಮಿಷದಲ್ಲಿ ಗೋಲು ಬಾರಿಸಿದ ಮನದೀಪ್‌ ಸಿಂಗ್‌

ರಾಣಿ ಬಳಗಕ್ಕೆ ಆಸ್ಟ್ರೇಲಿಯಾ ಸವಾಲು

ಗೋಲ್ಡ್‌ ಕೋಸ್ಟ್‌: ಈ ಬಾರಿಯ ಕಾಮನ್‌ವೆಲ್ತ್‌ ಕೂಟದಲ್ಲಿ ಅಮೋಘ ಆಟ ಆಡಿ ಗಮನ ಸೆಳೆದಿರುವ ಭಾರತದ ಮಹಿಳಾ ಹಾಕಿ ತಂಡದವರು ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದ್ದಾರೆ.

ಗುರುವಾರ ನಡೆಯುವ ಸೆಮಿಫೈನಲ್‌ನಲ್ಲಿ ರಾಣಿ ರಾಂಪಾಲ್‌ ಬಳಗ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಗುಂಪು ಹಂತದ ಮೊದಲ ಪಂದ್ಯದಲ್ಲಿ ವೇಲ್ಸ್‌ ವಿರುದ್ಧ ಸೋತಿದ್ದ ತಂಡ ನಂತರದ ಪಂದ್ಯಗಳಲ್ಲಿ ಗುಣಮಟ್ಟದ ಆಟ ಆಡಿ ಜಯದ ತೋರಣ ಕಟ್ಟಿತ್ತು.

ಹಿಂದಿನ ಗೆಲುವುಗಳಿಂದ ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತದ ವನಿತೆಯರು ಕಾಂಗರೂಗಳ ನಾಡಿನ ತಂಡದ ವಿರುದ್ಧವೂ ಜಯದ ಸಿಹಿ ಸವಿಯುವ ಹುಮ್ಮಸ್ಸಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.