ADVERTISEMENT

ಇಂದು ಭಾರತ–ಲಂಕಾ ಪೈಪೋಟಿ

ಮಹಿಳಾ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ಸಿಲ್ಹೆಟ್‌, ಬಾಂಗ್ಲಾದೇಶ (ಪಿಟಿಐ): ಭಾರತ ತಂಡದವರು ಸೋಮವಾರ ಇಲ್ಲಿ ನಡೆಯಲಿರುವ ಮಹಿಳಾ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದ್ದಾರೆ.

ಮಿಥಾಲಿ ರಾಜ್‌ ಸಾರಥ್ಯದ ಭಾರತ ತಂಡ ಇತ್ತೀಚಿನ ದಿನಗಳಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿಲ್ಲ. ಈ ಟೂರ್ನಿಗೆ ಸಿದ್ಧರಾಗಲು ನಡೆದ ಅಭ್ಯಾಸ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ಮೂಡಿಬಂದಿರಲಿಲ್ಲ. ನ್ಯೂಜಿಲೆಂಡ್‌ ಎದುರು ಸೋತಿದ್ದರೆ, ದುರ್ಬಲ ಐರ್ಲೆಂಡ್‌ ಎದುರು ಗೆದ್ದಿದ್ದರು.

ಈ ವರ್ಷದ ಆರಂಭದಲ್ಲಿ ಸ್ವದೇಶದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟ್ವೆಂಟಿ–20 ಸರಣಿಯಲ್ಲಿ ಭಾರತ ಸೋಲು ಕಂಡಿತ್ತು. ಹಾಗಾಗಿ ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಈಗ ಅವಕಾಶ ಸಿಕ್ಕಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಹಲವು ಬದಲಾವಣೆ ಮಾಡಿದೆ. ನಾಯಕಿ ಮಿಥಾಲಿ ಮೂರನೇ ಕ್ರಮಾಂಕಕ್ಕೆ ಬದಲಾಗಿ ಇನಿಂಗ್ಸ್‌ ಆರಂಭಿಸಲಿದ್ದಾರೆ. ಅವರು ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್‌ ಎದುರು 43 ರನ್‌ ಹಾಗೂ ನ್ಯೂಜಿಲೆಂಡ್‌ ವಿರುದ್ಧ 53 ರನ್‌ ಗಳಿಸಿ ಮಿಂಚಿದ್ದರು.

ಪೂನಮ್‌ ರಾವತ್‌ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಹಿರಿಯ ಹಾಗೂ ಅನುಭವಿ ವೇಗಿ ಜೂಲನ್‌ ಗೋಸ್ವಾಮಿ ಬೌಲಿಂಗ್‌ ವಿಭಾಗದ ಸಾರಥ್ಯ ವಹಿಸಲಿದ್ದಾರೆ. ಜೂಲನ್‌ ಕೂಡ ಅಭ್ಯಾಸ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಶ್ರಾವಂತಿ ನಾಯ್ಡು, ಪೂನಮ್‌ ರಾವತ್‌, ಗೌಹರ್‌ ಸುಲ್ತಾನಾ ಹಾಗೂ ಅರ್ಚನಾ ದಾಸ್‌ ಅವರಂಥ ಸ್ಪಿನ್ನರ್‌ಗಳಿದ್ದಾರೆ. ಗೋಸ್ವಾಮಿ ಬ್ಯಾಟಿಂಗ್‌ನಲ್ಲೂ ಗಮನ ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ.

ಆದರೆ ಭಾರತದವರು ಇತ್ತೀಚಿನ ದಿನಗಳಲ್ಲಿ ಬಲಿಷ್ಠ ತಂಡಗಳ ಎದುರು ಹೆಚ್ಚು ಪಂದ್ಯ ಆಡಿಲ್ಲ. ಹಾಗಾಗಿ ಲಂಕಾ ಎದುರಿನ ಪಂದ್ಯ ಸವಾಲಿನಿಂದ ಕೂಡಿದೆ. 2012ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತ ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಕಂಡಿತ್ತು. 2009 ಹಾಗೂ 2010ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿತ್ತು.

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡದವರು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಈ ಗುಂಪಿನಲ್ಲಿ ಇಂಗ್ಲೆಂಡ್‌, ಶ್ರೀಲಂಕಾ, ವೆಸ್ಟ್‌ಇಂಡೀಸ್‌, ಬಾಂಗ್ಲಾದೇಶ ತಂಡಗಳಿವೆ. ಭಾರತ ತಂಡದವರು ಟೂರ್ನಿಯ ಇನ್ನುಳಿದ ಪಂದ್ಯಗಳಲ್ಲಿ ಮಾರ್ಚ್‌ 26ರಂದು ಇಂಗ್ಲೆಂಡ್‌ ಎದುರು, ಮಾ.30ರಂದು ಬಾಂಗ್ಲಾದೇಶ ವಿರುದ್ಧ, ಏಪ್ರಿಲ್‌ 1ರಂದು ವೆಸ್ಟ್‌ಇಂಡೀಸ್‌ ಎದುರು ಆಡಲಿದ್ದಾರೆ.
ಪಂದ್ಯ ಆರಂಭ: ರಾತ್ರಿ 7 ಗಂಟೆಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.