ADVERTISEMENT

ಇಂದು ಮುಂಬೈ ಇಂಡಿಯನ್ಸ್- ಲಯನ್ಸ್ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 19:30 IST
Last Updated 13 ಅಕ್ಟೋಬರ್ 2012, 19:30 IST

ಜೋಹಾನ್ಸ್‌ಬರ್ಗ್ (ಪಿಟಿಐ): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಲಯನ್ಸ್ ತಂಡವನ್ನು ಎದುರಿಸಲಿದ್ದು, ಸಚಿನ್ ತೆಂಡೂಲ್ಕರ್ ಹಾಗೂ ನಾಯಕ ಹರಭಜನ್ ಸಿಂಗ್ ಮೇಲೆ ಎಲ್ಲರ ಚಿತ್ತ ಹರಿದಿದೆ.

ಭಾನುವಾರ ನಡೆಯುವ ಪಂದ್ಯದಲ್ಲಿ ಮುಂಬೈ    ಇಂಡಿಯನ್ಸ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಆದರೆ ಸ್ಥಳೀಯ ತಂಡ ಲಯನ್ಸ್ ಕೂಡಾ ಅಚ್ಚರಿ ಫಲಿತಾಂಶ ನೀಡುವ ತಾಕತ್ತು ಹೊಂದಿದೆ. ಸಚಿನ್ ತೆಂಡೂಲ್ಕರ್ ನಿವೃತ್ತಿಯಾಗಬೇಕೇ, ಬೇಡವೇ ಎಂಬ ವಿಷಯ ಈಗ ಚರ್ಚೆಯಲ್ಲಿದೆ. ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ತವರಿನಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ವೇಳೆ ಸಚಿನ್ ಮೂರು ಸಲ ಕ್ಲೀನ್‌ಬೌಲ್ಡ್ ಆಗಿದ್ದರು. ಇದರಿಂದ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದರು.

ಚಾಂಪಿಯನ್ಸ್  ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಕಾಕಾರರಿಗೆ ಪ್ರತ್ಯುತ್ತರ ನೀಡುವ ಅವಕಾಶ ಸಚಿನ್‌ಗೆ ದೊರೆತಿದೆ. ಅದೇ ರೀತಿ ಇಂಗ್ಲೆಂಡ್ ವಿರುದ್ಧದ  ಟೆಸ್ಟ್ ಸರಣಿಗೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು ಅವರ ಗುರಿ.

ನಾಯಕ ಹರಭಜನ್ ಸಿಂಗ್ ಅವರಿಗೂ ಈ ಟೂರ್ನಿ ಮಹತ್ವದ್ದಾಗಿದೆ. ಸುಮಾರು ಒಂದು ವರ್ಷ ಕಾಲ ಭಾರತ ತಂಡದಿಂದ ಹೊರಗಿದ್ದ ಪಂಜಾಬ್‌ನ ಈ ಸ್ಪಿನ್ನರ್ ಇತ್ತೀಚೆಗಷ್ಟೇ ತಂಡಕ್ಕೆ ಮರಳಿದ್ದರು.  ಸಚಿನ್ ಮತ್ತು ರಿಚರ್ಡ್ ಲೆವಿ ತಂಡದ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ರೋಹಿತ್ ಶರ್ಮ,  ಅಂಬಟಿ ರಾಯುಡು, ಕೀರನ್ ಪೊಲಾರ್ಡ್ ಎದುರಾಳಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರೆ     ಮುಂಬೈಗೆ ಬೃಹತ್ ಮೊತ್ತ ಪೇರಿಸುವುದು ಕಷ್ಟವಾಗದು.

ಲಯನ್ಸ್ ತಂಡದಲ್ಲಿರುವ ಪಾಕ್‌ನ ಸೊಹೇಲ್ ತನ್ವೀರ್ ಹಾಗೂ ಆಸ್ಟ್ರೇಲಿಯದ ಡಿರ್ಕ್ ನಾನೆಸ್ ಎದುರಾಳಿ   ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವರೇ ಎಂಬುದನ್ನು ನೋಡಬೇಕು. ಮುಂಬೈ ತಂಡದ ಬೌಲಿಂಗ್ ಕೂಡಾ ಬಲಿಷ್ಠವಾಗಿದೆ. ಲಸಿತ್ ಮಾಲಿಂಗ, ಮಿಷೆಲ್ ಜಾನ್ಸನ್ ಮತ್ತು ಮುನಾಫ್ ಪಟೇಲ್ ತಮ್ಮ ವೈವಿಧ್ಯಮಯ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ಪಂದ್ಯದ ಆರಂಭ: ರಾತ್ರಿ 9.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT