ADVERTISEMENT

ಇಂದು ಲಂಕಾ- ವಿಂಡೀಸ್ ಪೈಪೋಟಿ

ಫೈನಲ್ ಮೇಲೆ ಆತಿಥೇಯರ ಕಣ್ಣು

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:59 IST
Last Updated 6 ಜುಲೈ 2013, 19:59 IST

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾನುವಾರ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲುವು ಪಡೆದರೆ, ಆತಿಥೇಯರು ಫೈನಲ್ ಪ್ರವೇಶಿಸಲಿದ್ದಾರೆ.

ಮೊದಲ ಎರಡೂ ಪಂದ್ಯಗಳಲ್ಲಿ ಜಯ ಪಡೆದಿರುವ ವಿಂಡೀಸ್ ಶುಕ್ರವಾರ ಭಾರತದ ಎದುರು ಸೋಲು ಕಂಡಿತ್ತು. ಲಂಕಾ ಎದುರಿನ ಪಂದ್ಯದಲ್ಲಿ ಗೆಲುವು ಪಡೆದು ಆತಿಥೇಯರು ಅಗ್ರಸ್ಥಾನದಲ್ಲಿ ಗಟ್ಟಿಯಾಗುವುದರ ಜೊತೆಗೆ ಫೈನಲ್ ಪ್ರವೇಶವನ್ನೂ ಖಚಿತಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಡ್ವೇನ್ ಬ್ರಾವೊ  ಒಂದು ಪಂದ್ಯದ ಮಟ್ಟಿಗೆ ಅಮಾನತು ಆಗಿರುವ ಕಾರಣ ಕೀರನ್ ಪೊಲಾರ್ಡ್ ತಂಡವನ್ನು ಮುನ್ನಡೆಸಲಿದ್ದಾರೆ.

ಮೂರು ಪಂದ್ಯಗಳನ್ನು ಆಡಿರುವ ವಿಂಡೀಸ್ ಎರಡರಲ್ಲಿ ಗೆಲುವು ಪಡೆದು 9 ಪಾಯಿಂಟ್‌ಗಳನ್ನು ಹೊಂದಿದೆ. ಲಂಕಾ ಎರಡು ಪಂದ್ಯ ಆಡಿದ್ದು ಒಂದರಲ್ಲಿ ಸೋಲು ಕಂಡು, ಮತ್ತೊಂದರಲ್ಲಿ ಜಯ ಪಡೆದಿದೆ. ಆದ್ದರಿಂದ ಏಂಜಲೊ ಮ್ಯಾಥ್ಯೂಸ್ ಸಾರಥ್ಯದ ಲಂಕಾ ಫೈನಲ್ ಪ್ರವೇಶಿಸಬೇಕಾದರೆ, ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಲೇಬೇಕು.

ಮೊದಲೆರೆಡು ಪಂದ್ಯಗಳಲ್ಲಿ ಪಡೆದ ಗೆಲುವಿನಿಂದ ಉತ್ಸಾಹ ಹೆಚ್ಚಿಸಿಕೊಂಡಿದ್ದ ಕೆರಿಬಿಯನ್ ನಾಡಿನ ಆಟಗಾರರಿಗೆ ಭಾರತದ ಎದುರಿನ ಸೋಲು ನಿರಾಸೆ ಮೂಡಿಸಿದೆ. ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಚಿಂತೆಗೆ ಕಾರಣವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ವಿಂಡೀಸ್ ಹಾಗೂ ಲಂಕಾ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಆತಿಥೇಯರು ಆರು ವಿಕೆಟ್‌ಗಳ ಗೆಲುವು ಸಾಧಿಸಿದ್ದರು. ಆದ್ದರಿಂದ ಹಿಂದಿನ ಪಂದ್ಯದ ಸೋಲಿಗೆ ತಿರುಗೇಟು ನೀಡುವ ಲೆಕ್ಕಾಚಾರ ಸಿಂಹಳೀಯನಾಡಿನ ಆಟಗಾರರ ಮನದಲ್ಲಿದೆ.

ಬ್ರಾವೊ ಅಮಾನತು
ಭಾರತ ಎದುರಿನ ಪಂದ್ಯದ ವೇಳೆ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕಾಗಿ ವೆಸ್ಟ್ ಇಂಡೀಸ್ ತಂಡದ ನಾಯಕ ಡ್ವೇನ್ ಬ್ರಾವೊ ಅವರನ್ನು ಒಂದು ಪಂದ್ಯದ ಮಟ್ಟಿಗೆ ಅಮಾನತು ಮಾಡಲಾಗಿದೆ.

ಒಂದು ವರ್ಷದಲ್ಲಿ ಬ್ರಾವೊ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದು ಇದು ಎರಡನೇ ಬಾರಿ. ಆದ್ದರಿಂದ ಐಸಿಸಿ ಈ ನಿರ್ಧಾರ ಕೈಗೊಂಡಿದೆ. ಇದರ ಜೊತೆಗೆ ಪಂದ್ಯದ ಸಂಭಾವನೆಯ ಶೇ. 20ರಷ್ಟನ್ನು ಉಳಿದ ಆಟಗಾರರನಿಗೆ ಶೇ. 10ರಷ್ಟನ್ನು ದಂಡ ಹಾಕಲಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದ ವೇಳೆಯೂ ಬ್ರಾವೊ ಇದೇ ರೀತಿಯ ತಪ್ಪು ಮಾಡಿದ್ದರು.

  ಪಂದ್ಯ ಆರಂಭ: ರಾತ್ರಿ 7 ಗಂಟೆಗೆ. (ಭಾರತೀಯ ಕಾಲಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.