ADVERTISEMENT

ಇನ್ ದಿ ಸ್ಪಾಟ್‌ಲೈಟ್ ಶ್ರೀಮಂತ ಕುದುರೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ಬೆಂಗಳೂರು: ನಿರೀಕ್ಷೆ ಮಾಡಿದಂತೆ `ಇನ್ ದಿ ಸ್ಪಾಟ್‌ಲೈಟ್~ ಭಾನುವಾರ ನಡೆದ ಸುವರ್ಣ ಮಹೋತ್ಸವದ `ಏಕೆಕೆ ಎಂಟರ್‌ಟೈನ್‌ಮೆಂಟ್ ಗೋಲ್ಡನ್ ಜುಬಿಲಿ ಇಂಡಿಯನ್ ಟರ್ಫ್ ಇನ್ವಿಟೇಶನ್ ಕಪ್~ನಲ್ಲಿ ನಿರಾಯಾಸ ಗೆಲುವು ಪಡೆಯಿತು. 

  ಈ ಗೆಲುವಿನೊಂದಿಗೆ 2011-12 ಸಾಲಿನ `ಶ್ರೇಷ್ಠ ಕುದುರೆ~ಯ ಪಟ್ಟ ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲ ತನ್ನ ಮಾಲೀಕನಿಗೆ 3 ಲಕ್ಷ ರೂ. ಮೌಲ್ಯದ ಟ್ರೋಫಿ ಮತ್ತು ಮೊದಲನೇ ಬಹುಮಾನ 60 ಲಕ್ಷ ರೂ.ಗಳನ್ನು ದೊರಕಿಸಿಕೊಟ್ಟಿತು.

ಕಣದಲ್ಲಿ ಒಟ್ಟು 9 ಸ್ಪರ್ಧಿಗಳು ಭಾಗವಹಿಸಿದ್ದವು. 2400 ಮೀಟರ್ ದೂರದ ಈ ರೇಸ್‌ಗೆ ಚಾಲನೆ ದೊರೆತ ಕೂಡಲೆ `ಸದರ್ನ್ ಬೇ~ ಮೂಂಚೂಣಿಯಲ್ಲಿತ್ತು. `ಇನ್ ದಿ ಸ್ಪಾಟ್‌ಲೈಟ್~ ಎರಡನೇ ಮತ್ತು `ಸ್ಮಾಶಿಂಗ್~ ಮೂರನೇ ಸ್ಥಾನದಲ್ಲಿ ತಮ್ಮ ಅವಕಾಶಕ್ಕಾಗಿ ಕಾಯತೊಡಗಿದವು. ಆದರೇ 1400 ಮೀಟರ್ ದಾಟುತ್ತಿದ್ದಂತೆ, ``ಇನ್ ದಿ ಸ್ಪಾಟ್‌ಲೈಟ್~ ಮುನ್ನಡೆ ಸಾಧಿಸಿತು.  ನಂತರ 55 ಪೈಸೆಯ ಫೇವರಿಟ್ ಆಗಿದ್ದ ಈ ನಾಲ್ಕು ವರ್ಷದ ಹೆಣ್ಣು ಕುದುರೆ ಹಿಂತಿರುಗಿ ನೋಡದೇ ಗೆಲುವಿನ ಹಾದಿಯಲ್ಲಿ ತನ್ನ ಓಟ ಮುಂದುವರಿಸಿತು.

ಕುದುರೆ ಗೆಲುವಿನ ಗೆರೆ ದಾಟುತ್ತಿದ್ದಂತೆಯೆ, ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ಕಿಕ್ಕಿರಿದು ತುಂಬಿದ್ದ ರೇಸ್ ಪ್ರಿಯರು ಒಕ್ಕೊರಲಿನಿಂದ `ಇನ್ ದಿ ಸ್ಪಾಟ್‌ಲೈಟ್~ಗೆ ಪ್ರಶಂಸಿದರು.

ಕೊನೆಯ ಫರ್ಲಾಂಗ್‌ನಲ್ಲಿ `ಸ್ಮಾಶಿಂಗ್~ ಮುನ್ನುಗಿ ಎರಡನೇ ಸ್ಥಾನ ಪಡೆಯಿತು. `ಸದರ್ನ್ ಬೇ~ ಮೂರನೇ ಹಾಗೂ `ಟೊರೊಲೊಕೊ~ ನಾಲ್ಕನೇ ಸ್ಥಾನ ಪಡೆದವು. ಈ ರೇಸ್ ಕ್ರಮಿಸಲು `ಇನ್ ದಿ ಸ್ಪಾಟ್‌ಲೈಟ್~ ತೆಗೆದುಕೊಂಡ ಸಮಯ 2 ನಿಮಿಷ 32.10 ಸೆಕೆಂಡ್ ಮಾತ್ರ.

ಈ ರೇಸ್ ಪ್ರಾರಂಭಕ್ಕೆ ಮುನ್ನ ಏಕೆಕೆ ಎಂಟರ್‌ಪ್ರೈಸಸ್ ಮನರಂಜನೆ ಕಾರ್ಯಕ್ರಮ ಆಯೋಜಿಸಿತ್ತು. ಇದಕ್ಕೆ ಸ್ಯಾಂಡಲ್‌ವುಡ್‌ನ ತಾರಾ ಬಳಗದವರು ರಂಗು ತುಂಬಿದರು.

ಸುದೀಪ್, ಐಂದ್ರಿತಾ ರೇ, ಮಾಧುರಿ ಭಟ್ಟಾಚಾರ್ಯ, ಹಿರಿಯ ನಟ ಅಂಬರೀಶ್ ಹಾಗೂ ಸುಮಲತಾ ಸೇರಿದಂತೆ ಇತರ ನಟ ನಟಿಯರು ರೇಸ್‌ನ ರಂಗು ಹೆಚ್ಚಿಸಿದರು. ಇದು ರೇಸ್ ಪ್ರಿಯರ ಉತ್ಸಾಹವನ್ನು ಇಮ್ಮಡಿಸಿತು.

ಆಕರ್ಷಕ ನೃತ್ಯ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ `ಕರ್ನಾಟಕ ಬುಲ್ಡೋಜರ್ಸ್‌~ ತಂಡದ ಟೈಟಲ್ ಹಾಡನ್ನು ಭರ್ಜರಿಯಾಗಿ ಗ್ರ್ಯಾಂಡ್ ಸ್ಟ್ಯಾಂಡ್ ಎದುರಿನ ದೊಡ್ಡ ವೇದಿಕೆಯಲ್ಲಿ ಏರ್ಪಡಿಸಲಾಗಿತ್ತು. ಈ ಕ್ರಿಕೆಟ್ ತಂಡದ ಆಟಗಾರರು ಕಾರ್ಯಕ್ರಮಕ್ಕೆ ಆಗಮಿಸಿ ಅಭಿಮಾನಿಗಳ ಸಂಭ್ರಮಕ್ಕೆ ಇಂಬು ನೀಡಿದರು.

`ಇನ್ವಿಟೇಶನ್ ಕಪ್~ ಯಾವುದೇ ತೊಂದರೆಯಿಲ್ಲದೆ ಮುಕ್ತಾಯವಾಯಿತು. ಇದಕ್ಕಾಗಿ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಅಧ್ಯಕ್ಷ ಡಾ.ಕೆ.ಎಂ.ಶ್ರೀನಿವಾಸ ಗೌಡ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ರೇಸ್‌ಪ್ರಿಯರಿಗೆ, ಮಾಲೀಕರಿಗೆ, ಟ್ರೈನರ್ಸ್‌, ಜಾಕಿಗಳಿಗೆ ಮತ್ತು ಎಲ್ಲಾ ಕಾರ್ಮಿಕರಿಗೆ ಧನ್ಯವಾದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.