ADVERTISEMENT

ಈಜು : ಆಸ್ಟ್ರೇಲಿಯಾ ವನಿತೆಯರ ತಂಡದ ದಾಖಲೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2016, 19:30 IST
Last Updated 7 ಆಗಸ್ಟ್ 2016, 19:30 IST
ಕೊಸುಕ್ ಹಾಗಿನೊ
ಕೊಸುಕ್ ಹಾಗಿನೊ   

ರಿಯೊ ಡಿ ಜನೈರೊ (ಎಎಫ್‌ಪಿ);  ರಿಯೊ ಒಲಿಂಪಿಕ್ಸ್‌ ಈಜುಕೊಳದಲ್ಲಿ ಶನಿವಾರ ಆಸ್ಟ್ರೇಲಿಯಾದ ಈಜುಪಟುಗಳು  ಪಾರಮ್ಯ ಮೆರೆದರು.

ಆಸ್ಟ್ರೇಲಿಯಾದ ಮ್ಯಾಕ್ ಹಾರ್ಟನ್  ಪುರುಷರ 400 ಮೀಟರ್ಸ್‌ ಈಜು ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು.  ಮಹಿಳೆಯರ ವಿಭಾಗದಲ್ಲಿ  ಮಹಿಳೆಯರ 4X100 ಮೀಟರ್ಸ್ ರಿಲೆಯಲ್ಲಿ ಆಸ್ಟ್ರೇಲಿಯಾ ತಂಡವು ದಾಖಲೆ ಚಿನ್ನ ಜಯಿಸಿತು.

ಪುರುಷರ 400 ಮೀಟರ್ಸ್ ಈಜಿನಲ್ಲಿ ತಮ್ಮ ಕಟ್ಟಾ ಎದುರಾಳಿ ಚೀನಾದ ಸನ್ ಯಾಂಗ್ ಅವರನ್ನು ಹಿಂದಿಕ್ಕಿದ ಅವರು ಮೊದಲಿಗರಾಗಿ ಗುರಿ ಮುಟ್ಟಿದರು.  3 ನಿಮಿಷ, 41.55ಸೆಕೆಂಡುಗಳಲ್ಲಿ ಮ್ಯಾಕ್ ಅವರು ಗುರಿ ಮುಟ್ಟಿದರು.

2012ರ ಒಲಿಂಪಿಕ್ಸ್‌ನಲ್ಲಿ ಸನ್ ಯಾಂಗ್ ಅವರು ಚಿನ್ನ ಜಯಿಸಿದ್ದರು. ಇಲ್ಲಿ ಅವರು 3 ನಿಮಿಷಗಳು, 41.68 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪಡೆದರು.  ಸನ್  ಅವರು 2014ರಲ್ಲಿ ಉದ್ದೀಪನ ಮದ್ದು ಸೇವನೆ ಮಾಡಿ ಮೂರು ತಿಂಗಳ ನಿಷೇಧ ಶಿಕ್ಷೆ ಅನುಭವಿಸಿದ್ದರು.

ಸ್ಪರ್ಧೆಯ ಕೊನೆಯ 50 ಮೀಟರ್ಸ್ ಹಂತದಲ್ಲಿ ಅಮೋಘ ಹೋರಾಟ ಮಾಡಿದ ಇಟಲಿಯ ಗ್ಯಾಬ್ರಿಯಲ್ ಡೆಟ್ಟಿ (ಕಾಲ: 3ನಿ, 43.49ಸೆ) ಕಂಚಿನ ಪದಕ ಪಡೆದರು. 
ವನಿತೆಯರ ದಾಖಲೆ

ಎಮ್ಮಾ ಮಕಾನ್, ಬ್ರಿಟನಿ ಎಲ್ಮೆಸ್ಲೀ, ಬ್ರಾಂಟಿ ಕ್ಯಾಂಪ್‌ಬೆಲ್ ಮತ್ತು ಕೇಟ್ ಕ್ಯಾಂಪ್‌ಬೆಲ್ ಅವರಿದ್ದ ಆಸ್ಟ್ರೇಲಿಯಾದ ವನಿತೆಯರ ತಂಡವು 4X100 ಮೀಟರ್ಸ್ ರಿಲೆಯಲ್ಲಿ ವಿಶ್ವದಾಖಲೆ ಯನ್ನು ಉತ್ತಮಪಡಿಸಿತು.

ತಂಡವು ಮೂರು ನಿಮಿಷ, 30.65 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಇದರೊಂದಿಗೆ  2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು(ಕಾಲ: 3ನಿ, 30.98ಸೆ) ವಿಶ್ವದಾಖಲೆ ಬರೆದಿತ್ತು.

ಅಮೆರಿಕದ ಸಿಮೊನ್ ಮ್ಯಾನುವೆಲ್, ಅಬೆ ವೀಜೀಲ್, ದಾನಾ ವೂಲ್ಮರ್ ಮತ್ತು ಕ್ಯಾಟಿ ಲೆಡೆಕಿ ಅವರಿದ್ದ ತಂಡವು (ಕಾಲ: 3ನಿ,31.89ಸೆ) ಬೆಳ್ಳಿ ಪದಕ ಪಡೆಯಿತು. ಕೆನಡಾ ತಂಡವು ಕಂಚು ಪಡೆಯಿತು.

ಕಾಟಿಂಕಾಗೆ ಚಿನ್ನ
ಹಂಗೆರಿಯ ‘ಐರನ್ ಲೇಡಿ’ ಕಾಟಿಂಕಾ ಹೊಸಜು ವನಿತೆಯರ 400 ಮೀಟರ್ಸ್ ವೈಯಕ್ತಿ ಕ ಮೆಡ್ಲೆಯಲ್ಲಿ  (ಕಾಲ: 4ನಿ,26.36ಸೆ) ಚಿನ್ನದ ಪದಕ ಪಡೆದರು.   ಅಮೆರಿಕದ ಮಾಯಾ ಡಿರಾಡೊ (4ನಿ,31.15ಸೆ) ಮತ್ತು ಸ್ಪೇನ್‌ ದೇಶದ ಮಿರಿಯಾ ಬೆಲ್‌ಮಾಂಟೆ (4ನಿ,32.39ಸೆ)  ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು.

ಹಾಗಿನೊ ಪ್ರಥಮ
ಪುರುಷರ 400 ಮೀಟರ್ಸ್‌ ಮೆಡ್ಲೆಯಲ್ಲಿ ಜಪಾನಿನ ಕೊಸುಕ್ ಹಾಗಿನೊ (ಕಾಲ:4ನಿ, 06.05ಸೆ)   ಮೊದಲಿಗರಾಗಿ ಗುರಿ ಮುಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.