ADVERTISEMENT

ಈಜು: ಚೀನಾದ ವು, ಶಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST

ಬಾರ್ಸಿಲೋನಾ (ರಾಯಿಟರ್ಸ್): ಚೀನಾದ ವು ಮಿಂಕ್ಸಿಯಾ ಹಾಗೂ ಶಿ ಟಿಂಗ್ಮಾವೊ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್‌ಷಿಪ್‌ನ ಮೂರು ಮೀಟರ್ ಸ್ಪ್ರಿಂಗ್‌ಬೋರ್ಡ್ ಸಿಂಕ್ರೊ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಭಾನುವಾರ ವು ಹಾಗೂ ಶಿ ಅತ್ಯುತ್ತಮ ಪ್ರದರ್ಶನದ ಮೂಲಕ ಒಟ್ಟು 338.4 ಪಾಯಿಂಟ್ ಕಲೆಹಾಕಿದರು. ಬೆಳ್ಳಿ ಪದಕ ಜಯಿಸಿದ ಇಟಲಿಯ ತಾನಿಯಾ ಕಾಗ್ನೊಟೊ ಹಾಗೂ ಫ್ರಾನ್ಸೆಸ್ಕಾ ಡಲಾಪೆ 307.8 ಪಾಯಿಂಟ್ ಸಂಗ್ರಹಿಸಿದರು. ಕಂಚಿನ ಪದಕ ಕೆನಡಾದ ಸ್ಪರ್ಧಿಗಳ ಪಾಲಾಯಿತು.

ವಿಶ್ವ ಈಜು ಸ್ಪರ್ಧೆಗಳಲ್ಲಿ ವು ಅವರಿಗೆ ಲಭಿಸುತ್ತಿರುವ ಆರನೇ ಚಿನ್ನದ ಪದಕ ಇದಾಗಿದೆ. ಅವರು 2003ರಲ್ಲಿ ಇಲ್ಲಿಯೇ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಬಳಿಕ ಅಥೆನ್ಸ್ ಒಲಿಂಪಿಕ್ಸ್ (2004), ಬೀಜಿಂಗ್ ಒಲಿಂಪಿಕ್ಸ್ (2008) ಹಾಗೂ ಲಂಡನ್ ಒಲಿಂಪಿಕ್ಸ್‌ನಲ್ಲಿ (2012) ಚಿನ್ನ ಗೆದ್ದಿದ್ದರು.

`ಖಂಡಿತ ಇದು ನನ್ನ ಕೊನೆಯ ಪದಕ ಅಲ್ಲ. ನನ್ನಿಂದ ಇನ್ನೂ ಉತ್ತಮ ಸಾಧನೆ ಮೂಡಿಬರಬೇಕಾಗಿದೆ. ಆ ಸಾಧನೆಗಾಗಿ ಇನ್ನಷ್ಟು ಕಠಿಣ ಪ್ರಯತ್ನ ಹಾಕುತ್ತೇನೆ' ಎಂದು ವು ಪ್ರತಿಕ್ರಿಯಿಸಿದ್ದಾರೆ.

ರಷ್ಯಾದ ಸ್ವೆಟ್ಲಾನಾ ರೊಮಾಶಿಯಾ ಸೋಲೊ ಸಿಂಕ್ರೋನೈಸ್ಡ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು. ಚೀನಾ ಹಾಗೂ ಸ್ಪೇನ್ ಸ್ಪರ್ಧಿಗಳನ್ನು ಸುಲಭವಾಗಿ ಮಣಿಸಿ ಈ ಸಾಧನೆ ಮಾಡಿದರು. 24 ವರ್ಷ ವಯಸ್ಸಿನ ರೊಮಾಶಿಯಾ ಒಟ್ಟು 96.8 ಪಾಯಿಂಟ್ ಗಳಿಸಿದರು.

ಅಮೆರಿಕದ ಹಲಿ ಡನಿಟಾ ಆ್ಯಂಡರ್ಸನ್ ಹಾಗೂ ಟ್ಯುನಿಸಿಯಾದ ಉಸಾಮಾ ಮೆಲೌಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ಐದು ಕಿ.ಮೀ. ಓಪನ್ ವಾಟರ್ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.