ADVERTISEMENT

`ಈ ಶ್ರೇಯ ಬೌಲರ್‌ಗಳಿಗೆ ಸಲ್ಲಬೇಕು'

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಬೌಲರ್‌ಗಳು ತೋರಿದ ಸಮರ್ಥ ದಾಳಿಯ ನೆರವಿನಿಂದ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಗೆಲುವು ಪಡೆಯಲು ಸಾಧ್ಯವಾಗಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆ್ಯಡಮ್ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

`ನಾವು ಸತತ ನಾಲ್ಕು ಪಂದ್ಯಗಳನ್ನು ಇತರ ನಗರಗಳಲ್ಲಿ ಆಡಬೇಕಿದೆ. ಅದರಲ್ಲಿ ಮೊದಲ ಪಂದ್ಯದಲ್ಲಿ ಯಶಸ್ಸು ಸಾಧಿಸಿರುವುದು ಸಂತಸದ ವಿಚಾರ. ಮುಂದಿನ ಪಂದ್ಯಗಳಲ್ಲಿ ಕೋಲ್ಕತ್ತ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಬೇಕಿದೆ. ನಾವು ನಮ್ಮ ಪ್ರವಾಸವನ್ನು ಸರಿಯಾದ ರೀತಿಯಲ್ಲೇ ಆರಂಭಿಸಿದ್ದೇವೆ' ಎಂದು ಗಿಲ್‌ಕ್ರಿಸ್ಟ್ ಪ್ರತಿಕ್ರಿಯಿಸಿದ್ದಾರೆ.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ತಂಡ ಡೇರ್‌ಡೆವಿಲ್ಸ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತ್ತು. ಗಿಲ್‌ಕ್ರಿಸ್ಟ್ ಬಳಗ ಗೆಲುವಿಗೆ ಅಗತ್ಯವಿದ್ದ 121 ರನ್‌ಗಳನ್ನು 17 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ತಲುಪಿತ್ತು. ಡೇವಿಡ್ ಮಿಲ್ಲರ್ (ಅಜೇಯ 34) ಮತ್ತು ಮನ್‌ದೀಪ್ ಸಿಂಗ್ (24) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಡೇರ್‌ಡೆವಿಲ್ಸ್ ತಂಡವನ್ನು 120 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ನಮ್ಮ ಬೌಲರ್‌ಗಳು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಗಿಲ್‌ಕ್ರಿಸ್ಟ್ ನುಡಿದಿದ್ದಾರೆ. `ಮತ್ತೊಂದು ಗೆಲುವು ಸಾಧ್ಯವಾಗಿರುವುದು ಖುಷಿಯ ಸಂಗತಿ. ಹರ್ಮೀತ್ ಸಿಂಗ್ ತಮ್ಮ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದರು. ಸತತ ಎರಡು ಗೆಲುವು ಲಭಿಸಿರುವ ಕಾರಣ ಆಟಗಾರರ ಆತ್ಮವಿಶ್ವಾಸ ಹೆಚ್ಚಿದೆ' ಎಂದು ಹೇಳಿದ್ದಾರೆ.

ತಂಡಕ್ಕೆ ಉತ್ತಮ ಆರಂಭ ನೀಡಿದ ಮನ್‌ದೀಪ್ ಸಿಂಗ್ ಬಗ್ಗೆಯೂ ಗಿಲ್‌ಕ್ರಿಸ್ಟ್ ಮೆಚ್ಚಗೆಯ ಮಾತನ್ನಾಡಿದ್ದಾರೆ. `ನಾನು ಬೇಗನೇ ಔಟಾಗಿ ಅವರನ್ನು ಒತ್ತಡಕ್ಕೆ ಸಿಲುಕಿಸುತ್ತಿದ್ದೇನೆ. ಆದರೆ ಬಳಿಕ ಬರುವ ಆಟಗಾರನ ಜೊತೆ ಸೇರಿಕೊಂಡು ಮನ್‌ದೀಪ್ ತಂಡವನ್ನು ಕುಸಿತದಿಂದ ಪಾರು ಮಾಡುವರು' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.