ADVERTISEMENT

ಈ ಸಾಧನೆ ತೃಪ್ತಿ ನೀಡಿದೆ: ಮೇರಿ ಕೋಮ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 19:30 IST
Last Updated 8 ಆಗಸ್ಟ್ 2012, 19:30 IST

ಲಂಡನ್: ಒಲಿಂಪಿಕ್ಸ್‌ನಲ್ಲಿ ಮೂಡಿಬಂದ ಕಂಚಿನ ಪದಕದ ಸಾಧನೆ ತೃಪ್ತಿ ನೀಡಿದೆ ಎಂದು ಅವಳಿ ಮಕ್ಕಳ ತಾಯಿ ಮೇರಿ ಕೋಮ್ ನುಡಿದಿದ್ದಾರೆ.

`ಇದೊಂದು ಸುದೀರ್ಘ ಪಯಣ. ಈ ಪಯಣದಲ್ಲಿ ಕುಟುಂಬ ಹಾಗೂ ಜನರು ತುಂಬಾ ಸಹಕಾರ ನೀಡಿದ್ದಾರೆ. ಸೆಮಿಫೈನಲ್ ಸೋಲು ಕಂಡರೂ ಕಂಚಿನ ಪದಕ ಸಾಧನೆ ನನ್ನಲ್ಲಿ ತೃಪಿ ತಂದಿದೆ. ನನ್ನ ಪ್ರದರ್ಶನ ಕೂಡ ಖುಷಿ ನೀಡಿದೆ~ ಎಂದಿದ್ದಾರೆ.

`ಇಂಗ್ಲೆಂಡ್‌ನ ನಿಕೋಲಾ ಆ್ಯಡಮ್ಸ ಚಾಣಾಕ್ಷ ಬಾಕ್ಸರ್. ಬಲಿಷ್ಠ ಪಂಚ್‌ಗಳ ಮೂಲಕ ಅವರು ಮೇಲುಗೈ ಸಾಧಿಸಿದರು. ಅವರಿಗೆ ಸ್ವದೇಶದ ಅಭಿಮಾನಿಗಳ ಬೆಂಬಲವೂ ದೊರೆಯಿತು. ಆದರೆ ನನ್ನ ಸಾಧನೆ ಬಗ್ಗೆ ಹೆಮ್ಮೆ ಇದೆ. ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್‌ಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ ನಾನು ಯಶಸ್ವಿಯಾಗಿದ್ದೇನೆ~ ಎಂದು ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ತಿಳಿಸಿದರು.

`ಭಾರತದ ಜನರು ನನ್ನ ಮೇಲೆ ಇದಕ್ಕಿಂತ ಉತ್ತಮ ಪದಕದ ಭರವಸೆ ಇಟ್ಟಿದ್ದರು. ಅದಕ್ಕಾಗಿ ಪ್ರಾರ್ಥಿಸಿದ್ದರು. ಆದರೆ ಅವರ ನಿರೀಕ್ಷೆಯನ್ನು ಪೂರೈಸಲು ನನ್ನಿಂದ ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ಆದರೆ ಕ್ರೀಡೆಯಲ್ಲಿ ನೀವು ಕೆಲವೊಮ್ಮೆ ಗೆಲ್ಲುತ್ತೀರಿ, ಕೆಲವೊಮ್ಮೆ ಸೋಲುತ್ತೀರಿ~ ಎಂದರು.

`ಇಷ್ಟಕ್ಕೆ ನಾನು ಬಾಕ್ಸಿಂಗ್ ತೊರೆಯುವುದಿಲ್ಲ. ಈ ಸ್ಪರ್ಧೆಯಲ್ಲಿ ಇನ್ನಷ್ಟು ದಿನ ನಾನು ಮುಂದುವರಿಯುತ್ತೇನೆ. ಮಹಿಳೆಯರು ಕೂಡ ದೊಡ್ಡ ವೇದಿಕೆಯಲ್ಲಿ ಬಾಕ್ಸಿಂಗ್ ಮಾಡಬಲ್ಲರು ಎಂಬುದನ್ನು ತೋರಿಸಿದ್ದೇನೆ. ಮದುವೆ ಆದ ಮೇಲೆ ನಾನು ಬಾಕ್ಸಿಂಗ್ ತೊರೆಯಬಹುದು ಎಂದು ಹೆಚ್ಚಿನವರು ಯೋಚಿಸಿದ್ದರು. ಆದರೆ ಬಾಕ್ಸಿಂಗ್‌ನಲ್ಲಿ ಮುಂದುವರಿಸಿದೆ. ಉತ್ತಮ ಪ್ರದರ್ಶನ ನೀಡಿದೆ~ ಎಂದು 29 ವರ್ಷ ವಯಸ್ಸಿನ ಮೇರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.