ADVERTISEMENT

ಉದ್ದೀಪನ ಮದ್ದು ಪರೀಕ್ಷೆಗೆ ಒಳಗಾದ ಅಖ್ತರ್

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 18:40 IST
Last Updated 17 ಫೆಬ್ರುವರಿ 2011, 18:40 IST

ಢಾಕಾ (ಎಎಫ್‌ಪಿ): ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಪಾಕಿಸ್ತಾನ ತಂಡದ ವೇಗದ ಬೌಲರ್ ಶೋಯಬ್ ಅಖ್ತರ್ ಅವರನ್ನು ನಿಷೇಧಿತ ಉದ್ದೀಪನ ಮದ್ದು ಸೇವನೆ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಕೆಟ್ ಕೀಪರ್ ಕಮ್ರನ್ ಅಕ್ಮಲ್, ವೇಗಿ ಉಮರ್ ಗುಲ್ ಕೂಡ ಬುಧವಾರ ಅಭ್ಯಾಸದ ಬಳಿಕ ಐಚ್ಛಿಕವಾಗಿ ನಡೆದ ಈ ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ತಂಡದ ಮ್ಯಾನೇಜರ್ ಇಂತಿಖಾಬ್ ಅಲಾಮ್ ದೃಢಪಡಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮದ್ದು ಪರಿಶೀಲನಾ ಅಧಿಕಾರಿ ಗಳ ತಂಡ ಈ ಕಾರ್ಯ ಕೈಗೊಂಡಿದೆ.

‘ಇಂತಹ ಟೂರ್ನಿ ವೇಳೆ ಮದ್ದು ಸೇವನೆ ಪತ್ತೆ ಪರೀಕ್ಷೆ ನಡೆಸುವುದು ಸಾಮಾನ್ಯ. ಉಳಿದ ತಂಡಗಳ ಆಟಗಾರರನ್ನು ಕೂಡ ಇದಕ್ಕೆ ಒಳಪಡಿಸಲಾಗುತ್ತದೆ’ ಎಂದು ಅಲಾಮ್ ನುಡಿದಿದ್ದಾರೆ.

ಅಖ್ತರ್ 2006ರಲ್ಲಿ ನಂಡ್ರೊ ಲೋನ್ ಎಂಬ ನಿಷೇಧಿತ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಹಾಗಾಗಿ ಅವರ ಮೇಲೆ ನಿಷೇಧ ವಿಧಿಸಲಾಗಿತ್ತು.

ಈ ಮಧ್ಯೆ, ‘ರಾವಲ್ಪಿಂಡಿ ಎಕ್ಸ್ ಪ್ರೆಸ್’ ಖ್ಯಾತಿಯ ವೇಗಿ ಅಖ್ತರ್ ಮತ್ತೊಂದು ಸಮಸ್ಯೆಗೆ ಸಿಲುಕಿಕೊಂಡಿ ದ್ದಾರೆ. ಸಹ ಆಟಗಾರ ವಹಾಬ್ ರಿಯಾಜ್ ಜೊತೆಗೂಡಿ ಬುಧವಾರ ರಾತ್ರಿ ಖಾಸಗಿ ಔತಣಕೂಟವೊಂದರಲ್ಲಿ ಪಾಲ್ಗೊಂಡು ಹೋಟೆಲ್‌ಗೆ ತಡ ರಾತ್ರಿ ಆಗಮಿಸಿದ್ದರು. ಈ ಕಾರಣ ಅವರ ಮೇಲೆ ತಲಾ ಎರಡು ಸಾವಿರ ದಂಡ ವಿಧಿಸಲಾಗಿದೆ. ‘ತಂಡದ ನಿಯಮವನ್ನು ಪ್ರತಿ ಆಟಗಾರರು ಪಾಲಿಸಬೇಕು’ ಎಂದು ತಂಡದ ಮ್ಯಾನೇಜರ್ ಅಲಾಮ್ ತಿಳಿಸಿದ್ದಾರೆ. ಮತ್ತೊಮ್ಮೆ ಈ ಘಟನೆ ಸಂಭವಿಸದಂತೆ ಎಚ್ಚರಿಕೆ ನೀಡ ಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT