ADVERTISEMENT

ಉಸೇನ್ ಬೋಲ್ಟ್ ವಿಶ್ವದಾಖಲೆ

ವಿಶ್ವ ಅಥ್ಲೆಟಿಕ್ಸ್: ರಿಲೇಯಲ್ಲಿ ಜಮೈಕಾಕ್ಕೆ ಅಗ್ರಸ್ಥಾನ

ಕೆ.ರಾಜೀವ
Published 18 ಆಗಸ್ಟ್ 2013, 19:59 IST
Last Updated 18 ಆಗಸ್ಟ್ 2013, 19:59 IST

ಮಾಸ್ಕೊ: ವೇಗದ ಓಟಗಾರರಾದ ಜಮೈಕಾದ ಉಸೇನ್ ಬೋಲ್ಟ್ ಹಾಗೂ ಶೆಲ್ಲಿ ಆ್ಯನ್ ಫ್ರೇಸರ್-ಪ್ರೈಸ್ 14ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ತಲಾ ಮೂರು ಚಿನ್ನದ ಪದಕ ಗೆದ್ದು ಅಮೋಘ ಸಾಧನೆಗೆ ಕಾರಣರಾಗಿದ್ದಾರೆ.

ಕಿಕ್ಕಿರಿದು ತುಂಬಿದ್ದ ಲುಜ್ನಿಕಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ 4x100 ಮೀಟರ್ ರಿಲೇಯಲ್ಲಿ ಜಮೈಕಾ ತಂಡ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಮೊದಲ ಸ್ಥಾನ ಪಡೆಯುತ್ತಿದ್ದಂತೆ ಬೋಲ್ಟ್ ಮತ್ತು ಪ್ರೈಸ್ ಈ ಗೌರವಕ್ಕೆ ಪಾತ್ರರಾದರು.
ಬೋಲ್ಟ್ ಹಾಗೂ ಪ್ರೈಸ್ ಈ ಚಾಂಪಿಯನ್‌ಷಿಪ್‌ನ 100 ಮೀ. ಹಾಗೂ 200 ಮೀ. ಓಟದಲ್ಲೂ ಚಿನ್ನದ ಪದಕ ಗೆದ್ದಿದ್ದರು. ಪುರುಷರ ವಿಭಾಗದ ರಿಲೇ ಸ್ಪರ್ಧೆಯಲ್ಲಿ ನೆಸ್ಟಾ ಕಾರ್ಟರ್, ಕೆಮರ್ ಬೇಲಿ-ಕೋಲ್ ಹಾಗೂ ನಿಕೆಲ್ ಅಶ್ಮಿಡ್ ಕ್ರಮವಾಗಿ ಮೊದಲ ಮೂರು ಹಂತದಲ್ಲಿ ಓಡಿ ಬೋಲ್ಟ್‌ಗೆ ಬೇಟನ್ ತಲುಪಿಸಿದರು. ಕೊನೆಯ ಹಂತದಲ್ಲಿ ಓಡಿದ ಬೋಲ್ಟ್ ಅಮೆರಿಕದ ಜಸ್ಟಿನ್ ಗ್ಯಾಟ್ಲಿನ್ ಅವರನ್ನು ಹಿಂದಿಕ್ಕಿ ಗುರಿ ಮುಟ್ಟಿದರು.

ಜಮೈಕಾದ ಓಟಗಾರರು ಈ ದೂರ ತಲುಪಲು ಒಟ್ಟು 37.36 ಸೆಕೆಂಡ್ ತೆಗೆದುಕೊಂಡರು. ಎರಡನೇ ಸ್ಥಾನ ಪಡೆದ ಗ್ಯಾಟ್ಲಿನ್ ಸಾರಥ್ಯದ ಅಮೆರಿಕದ ಓಟಗಾರರು 37.66 ಸೆಕೆಂಡ್‌ಗಳಲ್ಲಿ ಈ ಗುರಿ ಮುಟ್ಟಿದರು. ಬ್ರಿಟನ್ ತಂಡ ಅನರ್ಹಗೊಂಡ ಕಾರಣ ಕಂಚಿನ ಪದಕ ಕೆನಡಾ (37.92 ಸೆ.) ತಂಡದ ಪಾಲಾಯಿತು.

ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಬೋಲ್ಟ್ ಅತೀ ಯಶಸ್ವಿ ಅಥ್ಲೀಟ್ ಎನಿಸಿದರು. ಏಕೆಂದರೆ ಹಿಂದಿನ ಚಾಂಪಿಯನ್‌ಷಿಪ್‌ಗಳು ಸೇರಿದಂತೆ ಅವರು ಗೆದ್ದ ಒಟ್ಟು ಚಿನ್ನದ ಪದಕ ಎಂಟು. ಈ ಮೂಲಕ ಅಮೆರಿಕದ ಕಾರ್ಲ್ ಲೂಯಿಸ್ (8 ಚಿನ್ನ, 1 ಬೆಳ್ಳಿ, 1 ಕಂಚು), ಮೈಕಲ್ ಜಾನ್ಸನ್ (8 ಚಿನ್ನ) ಹಾಗೂ ಆ್ಯಲಿಸನ್ ಫೆಲಿಕ್ಸ್ (8 ಚಿನ್ನ, 1 ಬೆಳ್ಳಿ, 1 ಕಂಚು) ಅವರಂಥ ಅಥ್ಲೀಟ್‌ಗಳನ್ನು ಹಿಂದಿಕ್ಕಿದ ಶ್ರೇಯ ಪಡೆದರು. ಬೋಲ್ಟ್ 2007ರ ಕೂಟದಲ್ಲಿ ಎರಡು ಬೆಳ್ಳಿ ಪದಕ ಕೂಡ ಜಯಿಸಿದ್ದರು. ಹಾಗಾಗಿ ವಿಶ್ವದಾಖಲೆಗೆ ಕಾರಣರಾದರು.

ಮಹಿಳೆಯರ ವಿಭಾಗದ ರಿಲೇಯಲ್ಲಿ ಜಮೈಕಾದ ಕ್ಯಾರಿ ರಸೆಲ್, ಕೆರಾನ್ ಸ್ಟುವರ್ಟ್, ಶಿಲೋನಿ ಕಾಲ್ವರ್ಟ್ ಕ್ರಮವಾಗಿ ಮೊದಲ ಮೂರು ಹಂತದಲ್ಲಿ ಓಡಿದರು. ಕೊನೆಯ ಹಂತದಲ್ಲಿ ಓಡಿದ ಪ್ರೈಸ್ ಚಿನ್ನದ ಪದಕ ದೊರಕಿಸಿ ಕೊಟ್ಟರು. ಈ ತಂಡದವರು ಒಟ್ಟು 41.29 ಸೆಕೆಂಡ್ ತೆಗೆದುಕೊಂಡರು. ಇದು ಎರಡನೇ ಶ್ರೇಷ್ಠ ಸಾಧನೆಯಾಗಿದೆ.

ಫ್ರಾನ್ಸ್ (42.73 ಸೆ.) ತಂಡದವರು ಬೆಳ್ಳಿ ಪದಕ ಗೆದ್ದರು. ಮೂರನೇ ಸ್ಥಾನ ಅಮೆರಿಕ ತಂಡದ ಪಾಲಾಯಿತು. ಅಮೆರಿಕ ತಂಡದವರು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 40.82 ಸೆಕೆಂಡ್‌ಗಳಲ್ಲಿ ಓಡಿ ವಿಶ್ವದಾಖಲೆ ನಿರ್ಮಿಸಿದ್ದರು. ಆದರೆ ಅಲ್ಲಿ ಸ್ಪರ್ಧಿಸಿದ್ದ ಯಾರೂ ಈ ಕೂಟದಲ್ಲಿ ಕಣಕ್ಕಿಳಿದಿರಲಿಲ್ಲ. ಆ್ಯಲಿಸನ್ ಫೆಲಿಕ್ಸ್ ಈ ಕೂಟದ 200 ಮೀಟರ್ ಓಟದ ವೇಳೆ ಗಾಯಗೊಂಡಿದ್ದರು.

ಚಾಂಪಿಯನ್‌ಷಿಪ್‌ನ ಅಂತಿಮ ದಿನ ಮಧ್ಯಮ ದೂರದ ಓಟಗಾರ ಕೆನ್ಯಾದ ಅಸ್ಬೆಲ್ ಕಿಪ್ರೋಪ್ 1500 ಮೀಟರ್‌ನಲ್ಲಿ ಚಿನ್ನ ಜಯಿಸಿದರು. ಯೂನಿಸ್ ಸಮ್ ಮಹಿಳೆಯರ ವಿಭಾಗದ 800 ಮೀಟರ್‌ನಲ್ಲಿ ಬಂಗಾರದ ಪದಕ ಗೆದ್ದು ಅಚ್ಚರಿ ಫಲಿತಾಂಶಕ್ಕೆ ಕಾರಣರಾದರು. ಹ್ಯಾಟ್ರಿಕ್ ಚಿನ್ನದ ಕನಸಿನಲ್ಲಿದ್ದ ರಷ್ಯಾದ ಮರಿಯಾ ಸವಿನೊವಾ ಅವರ ಕನಸು ನುಚ್ಚುನೂರಾಯಿತು. ಪುರುಷರ ಟ್ರಿಪಲ್ ಜಂಪ್‌ನಲ್ಲಿ ಫ್ರಾನ್ಸ್‌ನ ಟೆಡ್ಡಿ ತಾಮ್ಗ (18.4 ಮೀ.) ಮೊದಲ ಸ್ಥಾನ ಗಳಿಸಿದರು.

ಏಳು ಚಿನ್ನ ಗೆದ್ದ ರಷ್ಯಾ ತಂಡದವರು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರು. ಅಮೆರಿಕ ಆರು ಚಿನ್ನದ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಜಮೈಕಾ (6 ಚಿನ್ನ) ಮೂರನೇ ಸ್ಥಾನ ಗಳಿಸಿತು. ಕೆನ್ಯಾ (5 ಚಿನ್ನ), ಜರ್ಮನಿ (4 ಚಿನ್ನ) ಹಾಗೂ ಇಥಿಯೋಪಿಯಾ ಮತ್ತು ಬ್ರಿಟನ್ (ತಲಾ 3 ಚಿನ್ನ) ನಂತರದ ಸ್ಥಾನ ಪಡೆದವು. ಆದರೆ ಭಾರತದ ಸ್ಪರ್ಧಿಗಳ ಸಾಧನೆ ಶೂನ್ಯ. ಡಿಸ್ಕಸ್ ಥ್ರೋನಲ್ಲಿ ವಿಕಾಸ್ ಗೌಡ ಏಳನೇ ಸ್ಥಾನ ಪಡೆದಿದ್ದೇ ದೊಡ್ಡ ಸಾಧನೆ. 2015ರ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಬೀಜಿಂಗ್‌ನಲ್ಲಿ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.