ADVERTISEMENT

ಎಟಿಪಿ: ಸೆಮಿಗೆ ಕಾರ್ಲೊವಿಚ್‌

ಏಜೆನ್ಸೀಸ್
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST

ಲಾಸ್‌ ಏಂಜಲೀಸ್‌: ಇಲ್ಲಿ ನಡೆಯುತ್ತಿರುವ ಎಟಿಪಿ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕ್ರೊವೇಷ್ಯಾದ ಇವೊ ಕಾರ್ಲೊವಿಚ್‌ ಅವರು ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಎಟಿಪಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಹಿರಿಯ ಆಟಗಾರ ಎಂಬ ಹಿರಿಮೆಯನ್ನು ಕಾರ್ಲೊವಿಚ್‌ (39) ಅವರು ತಮ್ಮದಾಗಿಸಿಕೊಂಡರು.

ಕಾರ್ಲೊವಿಚ್‌ ಅವರು 4ನೇ ಶ್ರೇಯಾಂಕದ ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ ಅವರನ್ನು 3–6, 6–2, 6–3 ಸೆಟ್‌ಗಳಿಂದ ಮಣಿಸಿದರು. ಪಂದ್ಯದುದ್ದಕ್ಕೂ ಬಿರುಸಿನ ಆಟವಾಡಿದ ಕಾರ್ಲೊವಿಚ್‌ ಅವರು 18 ಏಸ್‌ಗಳನ್ನು ಸಿಡಿಸಿ ಎದುರಾಳಿಯು ಕಕ್ಕಾಬಿಕ್ಕಿಯಾಗುವಂತೆ ಮಾಡಿದರು.

92 ನಿಮಿಷಗಳ ಕಾಲ ನಡೆದ ಪಂದ್ಯದ ಆರಂಭದಲ್ಲಿ ನಿಕ್‌ ಅವರು ಅಮೋಘ ಸರ್ವ್‌ಗಳಿಂದ ಕಾರ್ಲೊವಿಕ್‌ ಅವರನ್ನು ಕಟ್ಟಿಹಾಕಿ ಮೊದಲ ಸೆಟ್‌ ತಮ್ಮದಾಗಿಸಿಕೊಂಡರು. ಆದರೆ, ಇದರಿಂದ ಬೇಗನೆ ಎಚ್ಚೆತ್ತುಕೊಂಡ ಕಾರ್ಲೊ ವಿಚ್‌, ಎರಡನೇ ಸೆಟ್‌ನ ಮೊದಲ ನಿಮಿಷದಿಂದ ಎದುರಾಳಿಯ ಯೋಜನೆಗಳನ್ನು ತಲೆಕೆಳಗು ಮಾಡುವ ರೀತಿ ಸಾಮರ್ಥ್ಯ ಮೆರೆದರು.

ADVERTISEMENT

1993ರಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಹಿರಿಯ ಆಟಗಾರ ಎಂಬ ಹಿರಿಮೆಯನ್ನು ಅಮೆರಿಕದ ಜಿಮ್ಮಿ ಕಾನ್ನರ್ಸ್‌ ಹೊಂದಿದ್ದರು. ಈಗ, 25 ವರ್ಷಗಳ ನಂತರ ಕಾರ್ಲೊವಿಚ್‌ ಅವರು ಈ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.