ADVERTISEMENT

ಎನ್‌ಸಿಎ ನಿರ್ದೇಶಕ ಸ್ಥಾನದ ರೇಸ್‌ನಲ್ಲಿ ಕಿರಣ್ ಮೋರೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಬೆಂಗಳೂರು: ಉದ್ಯಾನನಗರಿಯಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ನಿರ್ದೇಶಕ ಸ್ಥಾನಕ್ಕೆ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಎನ್‌ಸಿಎಗೆ ಮೊದಲು ಸಂದೀಪ್ ಪಾಟೀಲ್ ನಿರ್ದೇಶಕರಾಗಿದ್ದರು.

ಕೆ. ಶ್ರೀಕಾಂತ್ ಬಿಸಿಸಿಐ ಆಯ್ಕೆ ಸಮಿತಿಯ ನೂತನ ಮಖ್ಯಸ್ಥರಾಗಿ ಇತ್ತೀಚಿಗಷ್ಟೇ ನೇಮಕವಾದರು. ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎನ್‌ಸಿಎಗೆ ಹೊಸ ನಿರ್ದೇಶಕರ ಹುಡುಕಾಟದಲ್ಲಿ ತೊಡಗಿದೆ.

ಕರ್ನಾಟಕದ ರಾಹುಲ್ ದ್ರಾವಿಡ್ ಅವರ ಹೆಸರು ಎನ್‌ಸಿಎ ನಿರ್ದೇಶಕ ಸ್ಥಾನಕ್ಕೆ ಕೇಳಿ ಬರುತ್ತಿದೆಯಾದರೂ, ಇದಕ್ಕೆ ದ್ರಾವಿಡ್ ಒಪ್ಪುತ್ತಿಲ್ಲ ಎನ್ನಲಾಗಿದೆ. ದ್ರಾವಿಡ್‌ಗೆ ಕೆಲವು ಹಿರಿಯ ಕ್ರಿಕೆಟಿಗರು ಒತ್ತಾಯಿಸುತ್ತಿದ್ದರೂ, ಅವರು ಈ ಬಗ್ಗೆ ಒಲವು ತೋರುತ್ತಿಲ್ಲ ಎನ್ನಲಾಗುತ್ತಿದೆ.
 
ಕೆಲ ತಿಂಗಳುಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿರುವ ದ್ರಾವಿಡ್ ಕುಟುಂಬದೊಂದಿಗೆ ಕಾಲ ಕಳೆಯಲು      ನಿರ್ಧರಿಸಿದ್ದು ಇದಕ್ಕೆ ಕಾರಣ         ಎನ್ನಲಾಗುತ್ತಿದೆ. ಆದಕಾರಣ ಕಿರಣ್ ಮೋರೆ ಅವರ ಹೆಸರೂ ನಿರ್ದೇಶಕ ಸ್ಥಾನಕ್ಕೆ ಪ್ರಸ್ತಾಪವಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್           ಸಂಸ್ಥೆ (ಕೆಎಸ್‌ಸಿಎ) ಮೂಲಗಳು ತಿಳಿಸಿವೆ.

`ಎನ್‌ಸಿಎ ಅಧ್ಯಕ್ಷರ ಆಯ್ಕೆ ಕುರಿತು ಅಂತಿಮ ತೀರ್ಮಾನವಾಗಿಲ್ಲ. ಹೆಚ್ಚಿನ ಮಾಹಿತಿ ನನಗೆ ತಿಳಿದಿಲ್ಲ~ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.