ADVERTISEMENT

ಏಕದಿನ ತಂಡದಲ್ಲಿ ಸ್ಥಾನದ ಗುರಿ: ಉನದ್ಕತ್‌

ಪಿಟಿಐ
Published 4 ಮಾರ್ಚ್ 2018, 19:30 IST
Last Updated 4 ಮಾರ್ಚ್ 2018, 19:30 IST
ಜಯದೇವ್‌ ಉನದ್ಕತ್‌
ಜಯದೇವ್‌ ಉನದ್ಕತ್‌   

ಮುಂಬೈ: ವೇಗದ ಬೌಲರ್‌ ಜಯದೇವ್‌ ಉನದ್ಕತ್‌ ಮುಂಬರುವ ನಿದಾಸ್ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಉತ್ತಮವಾಗಿ ಆಡುವ ಮೂಲಕ ಭಾರತ ಏಕದಿನ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ.

ಮಾರ್ಚ್ 6ರಿಂದ ಭಾರತ, ಬಾಂಗ್ಲಾ ದೇಶ ಹಾಗೂ ಶ್ರೀಲಂಕಾ ತಂಡಗಳು ಕೊಲಂಬೊದಲ್ಲಿ ತ್ರಿಕೋನ ಸರಣಿ ಆಡಲಿವೆ.

ಉನದ್ಕತ್‌ ಅವರು ಹರಾರೆಯಲ್ಲಿ 2016ರಲ್ಲಿ ಜಿಂಬಾಬ್ವೆ ಎದುರು ನಡೆದ ಪಂದ್ಯದಲ್ಲಿ ಟ್ವೆಂಟಿ–20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ಅವರಿಗೆ ಅವಕಾಶಗಳು ಸಿಗಲಿಲ್ಲ. ಡಿಸೆಂಬರ್‌ನಲ್ಲಿ ತವರಿನಲ್ಲಿ ನಡೆದ ಶ್ರೀಲಂಕಾ ಎದುರಿನ ಸರಣಿಯಲ್ಲಿ ಮತ್ತೆ ಸ್ಥಾನ ಪಡೆದುಕೊಂಡಿದ್ದರು.

ADVERTISEMENT

‘ಏಕದಿನ ವಿಶ್ವಕಪ್ ಹಾಗೂ ವಿಶ್ವ ಟ್ವೆಂಟಿ–20 ಟೂರ್ನಿಗಳಲ್ಲಿ ಆಡಬೇಕಾದರೆ ಆದಷ್ಟು ಬೇಗ ಭಾರತ ತಂಡದಲ್ಲಿ ಸ್ಥಾನ ಗಳಿಸಬೇಕು’ ಎಂದು ಉನದ್ಕತ್‌ ಅಭಿಪ್ರಾಯಪಟ್ಟಿದ್ದಾರೆ.

‘ಮತ್ತೊಮ್ಮೆ ಸಾಮರ್ಥ್ಯವನ್ನು ಸಾಬೀತುಮಾಡುವ ಅವಕಾಶ ನಿದಾಸ್ ಟ್ರೋಫಿಯಲ್ಲಿ ಸಿಕ್ಕಿದೆ. ಏಕದಿನ ಮಾದರಿ ಯಲ್ಲಿ ಅವಕಾಶದ ನಿರೀಕ್ಷೆಯಲ್ಲಿರುವ ನನಗೆ ಇದು ಮಹತ್ವದ ಟೂರ್ನಿ’ ಎಂದು ಹೇಳಿದ್ದಾರೆ.

‘ತವರಿನಲ್ಲಿ ಶ್ರೀಲಂಕಾ ಎದುರು ಆಡಿದ್ದಾಗ ಸರಣಿ ಶ್ರೇಷ್ಠಪ್ರಶಸ್ತಿ ಪಡೆದುಕೊಂಡಿದ್ದೆ. ಇದೇ ಮಾದರಿಯಲ್ಲಿ ಆಡುವ ವಿಶ್ವಾಸವಿದೆ. ಅನುಭವಿ ಬೌಲರ್‌ಗಳಾದ ಭುವನೇಶ್ವರ್ ಕುಮಾರ್‌, ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇದರಿಂದಾಗಿ ಸಿಕ್ಕ ಅಪೂರ್ವ ಅವಕಾಶವನ್ನು ನಾನು ಬಳಸಿಕೊಂಡು ಆಡಲಿದ್ದೇನೆ’ ಎಂದು 26 ವರ್ಷದ ಸೌರಾಷ್ಟ್ರದ ಬೌಲರ್‌ ಹೇಳಿದ್ದಾರೆ.

‘ತ್ರಿಕೋನ ಸರಣಿಯಲ್ಲಿ ಎರಡು ತಂಡಗಳ ಎದುರು ಆಡುವುದರಿಂದ ಬೌಲಿಂಗ್‌ನಲ್ಲಿ ಮಿಂಚಲು ಸಾಕಷ್ಟು ಅವಕಾಶಗಳು ಇವೆ. ಒಮ್ಮೆ ಭಾರತ ತಂಡದಲ್ಲಿ ಉಳಿದುಕೊಂಡರೆ ಬಳಿಕ ನಮ್ಮ ತಂತ್ರಗಳನ್ನು ಯಶಸ್ವಿಯಾಗಿ ಬಳಸಬಹುದು. ಆದ್ದರಿಂದ ಈಗ ಸಿಕ್ಕ ಅವಕಾಶ ನನಗೆ ಮಹತ್ವವಾದದ್ದು’ ಎಂದು ಉನದ್ಕತ್‌ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ–20 ಸರಣಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಉನದ್ಕತ್‌ ಮೂರು ವಿಕೆಟ್ ಪಡೆದುಕೊಂಡಿದ್ದರು. ಆಡಿದ ಆರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸಿದ್ದಾರೆ.

‘ದಕ್ಷಿಣ ಆಫ್ರಿಕಾ ನೆಲದಲ್ಲಿ ಸಾಕಷ್ಟು ಹೊಸ ಸಂಗತಿಗಳನ್ನು ಕಲಿಯಲು ಸಾಧ್ಯ ವಾಗಿದೆ. ಕ್ರೀಡಾಂಗಣದ ವಿಸ್ತ್ರೀರ್ಣ ಚಿಕ್ಕದು. ಆದರೆ ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು’ ಎಂದು ಉನದ್ಕತ್ ಹೇಳಿದ್ದಾರೆ.

ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ (ಮಾರ್ಚ್‌ 6) ಎದುರು ಆಡಲಿದೆ. ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇಲ್ಲಿಯೇ ಮಾರ್ಚ್‌ 18ರಂದು ಫೈನಲ್   ಆಯೋಜನೆಗೊಂಡಿವೆ.

ಮುಂಬೈನ ಶಾರ್ದೂಲ್ ಠಾಕೂರ್‌, ಮಹಮ್ಮದ್ ಸಿರಾಜ್‌ ಕೂಡ ಭಾರತ ತಂಡದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.