ADVERTISEMENT

ಏಷ್ಯಾಕಪ್: ಶ್ರೀಲಂಕಾ ಗೆದ್ದರೆ ಭಾರತ ಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಮೀರ್‌ಪುರ (ಪಿಟಿಐ): ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಮಂಗಳವಾರ ಎದುರಾಗುವ ಸಂದರ್ಭ ಭಾರತದ ಕೋಟ್ಯಂತರ ಅಭಿಮಾನಿಗಳು ಲಂಕಾ ತಂಡದ ಗೆಲುವಿಗಾಗಿ ಪ್ರಾರ್ಥಿಸಲಿದ್ದಾರೆ.

ಮಹೇಂದ್ರ ಸಿಂಗ್ ದೋನಿ ಬಳಗದ ಫೈನಲ್ ಪ್ರವೇಶದ ಸಾಧ್ಯತೆ ಈ ಪಂದ್ಯದ ಫಲಿತಾಂಶವನ್ನು ಅವಲಂಬಿಸಿದೆ. ಆದ್ದರಿಂದ ಮಂಗಳವಾರದ ಹಣಾಹಣಿ ಭಾರತದ ಪಾಲಿಗೂ ಮಹತ್ವದ್ದಾಗಿದೆ.

ಪಾಕಿಸ್ತಾನ ತಂಡ ಈಗಾಗಲೇ ಟೂರ್ನಿಯ ಫೈನಲ್ ಪ್ರವೇಶಿಸಿದ್ದರೆ, ಶ್ರೀಲಂಕಾದ ಫೈನಲ್ ಕನಸು ಅಸ್ತಮಿಸಿದೆ. ಇದೀಗ ಪೈಪೋಟಿ ಇರುವುದು ಬಾಂಗ್ಲಾ ಮತ್ತು ಭಾರತದ ನಡುವೆ. ಗುರುವಾರ ನಡೆಯುವ ಫೈನಲ್‌ನಲ್ಲಿ      ಪಾಕಿಸ್ತಾನದ ಎದುರಾಳಿ ಯಾರು ಎಂಬುದು ಇಂದು ನಿರ್ಧಾರವಾಗಲಿದೆ.

ಭಾರತದ ಬಳಿ ಎಂಟು ಪಾಯಿಂಟ್‌ಗಳಿವೆ. ಇಂದಿನ ಪಂದ್ಯದಲ್ಲಿ ಗೆಲುವು ಪಡೆದರೆ ಬಾಂಗ್ಲಾದ ಪಾಯಿಂಟ್ ಕೂಡಾ ಇಷ್ಟೇ ಆಗಲಿದೆ.

ಲೀಗ್ ಹಂತದಲ್ಲಿ ಆತಿಥೇಯರು ಭಾರತದ ವಿರುದ್ಧ ಜಯ ಪಡೆದಿದ್ದರು. ಆದ್ದರಿಂದ ಟೂರ್ನಿಯ ನಿಯಮದಂತೆ ಬಾಂಗ್ಲಾ ಫೈನಲ್‌ಗೇರಲಿದೆ. ಲಂಕಾ ಗೆದ್ದರೆ ಮಾತ್ರ ಫೈನಲ್ ಪ್ರವೇಶಿಸುವ `ಅದೃಷ್ಟ~ ಭಾರತದ್ದಾಗಲಿದೆ.

ಫೈನಲ್ ಸಾಧ್ಯತೆ ಕಳೆದುಕೊಂಡಿರುವ ಮಾಹೇಲ ಜಯವರ್ಧನೆ ಬಳಗ ಬಾಂಗ್ಲಾ ತಂಡದ ಫೈನಲ್ ಪ್ರವೇಶದ ಕನಸನ್ನು ನುಚ್ಚುನೂರು ಮಾಡುವುದೇ ಎಂಬುದನ್ನು ನೋಡಬೇಕು. ಭಾರತದ ವಿರುದ್ಧ ಅಚ್ಚರಿಯ ಜಯ ಪಡೆದು ಆತ್ಮವಿಶ್ವಾಸದಲ್ಲಿರುವ ಮುಷ್ಫೀಕುರ್ ರಹೀಮ್ ಬಳಗವನ್ನು ಕಡೆಗಣಿಸಲು ಲಂಕಾ ಸಿದ್ಧವಿಲ್ಲ.

ಬಾಂಗ್ಲಾ ಆಟಗಾರರು ಇದುವರೆಗೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸುವ ಮುನ್ನ ಪಾಕಿಸ್ತಾನಕ್ಕೆ ಬೆದರಿಕೆ ಹುಟ್ಟಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತ ನೀಡಿದ್ದ 289 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಸ್ಮರಣೀಯ ಗೆಲುವು ತನ್ನದಾಗಿಸಿಕೊಂಡಿತ್ತು.

ತಮೀಮ್ ಇಕ್ಬಾಲ್, ಜುಹೂರುಲ್ ಇಸ್ಲಾಮ್, ನಾಸಿರ್ ಹೊಸೇನ್, ಶಕೀಬ್ ಅಲ್ ಹಸನ್ ಮತ್ತು ನಾಯಕ ಮುಷ್ಫೀಕುರ್ ಭಾರತದ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಬೌಲಿಂಗ್ ವಿಭಾಗ   ದುರ್ಬಲವಾಗಿರುವ ಕಾರಣ ಬಾಂಗ್ಲಾ ತನ್ನ ಬ್ಯಾಟ್ಸ್‌ಮನ್‌ಗಳನ್ನೇ ನೆಚ್ಚಿಕೊಂಡಿದೆ. ಶಫೀವುಲ್ ಇಸ್ಲಾಮ್ ಮಂಗಳವಾರ ಕಣಕ್ಕಿಳಿಯವುದು ಅನುಮಾನ. ಇದರಿಂದ ಅನುಭವಿ ಬೌಲರ್ ಮಶ್ರಫೆ ಮೊರ್ತಜಾ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.

ಸ್ಪಿನ್ ಬೌಲರ್‌ಗಳು ಫಾರ್ಮ್ ಕಂಡುಕೊಳ್ಳದೇ ಇರುವುದು ಕೂಡಾ ಬಾಂಗ್ಲಾದ ಚಿಂತೆಗೆ ಕಾರಣ. ಶಕೀಬ್, ಅಬ್ದುರ್ ರಜಾಕ್ ಮತ್ತು ಮಹಮೂದುಲ್ಲಾ ಎಂದಿನ ಲಯದಲ್ಲಿ ಬೌಲಿಂಗ್ ಮಾಡುತ್ತಿಲ್ಲ.

ಮತ್ತೊಂದೆಡೆ ಶ್ರೀಲಂಕಾ ಗಾಯಗೊಂಡ ಹುಲಿಯಂತಾಗಿದೆ. ಭಾರತ ಮತ್ತು ಪಾಕಿಸ್ತಾನದ ಕೈಯಲ್ಲಿ ಸೋಲು ಎದುರಾಗಿರುವ ಕಾರಣ ಈ ತಂಡ ಮುಖಭಂಗ ಅನುಭವಿಸಿದೆ. ಕೊನೆಯ ಪಂದ್ಯದಲ್ಲಿ ಗೆಲುವು ಪಡೆದು ಘನತೆಯನ್ನು ಕಾಪಾಡಿಕೊಳ್ಳುವುದು ಜಯವರ್ಧನೆ ಬಳಗದ ಉದ್ದೇಶ.

ಮೊದಲ ಎರಡು ಪಂದ್ಯಗಳಲ್ಲಿ ಲಂಕಾ ಪೂರ್ಣ ವೈಫಲ್ಯ ಅನುಭವಿಸಿತ್ತು. ಇಬ್ಬರು ಪ್ರಮುಖ ಆಲ್‌ರೌಂಡರ್‌ಗಳಾದ ಏಂಜೆಲೊ ಮ್ಯಾಥ್ಯೂಸ್ ಮತ್ತು ತಿಸಾರ ಪೆರೇರಾ ಅವರ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಗಾಯದ ಸಮಸ್ಯೆಯಿಂದ ಇವರು ಟೂರ್ನಿಯಲ್ಲಿ ಪಾಲ್ಗೊಂಡಿಲ್ಲ.

ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೂ, ತಂಡಕ್ಕೆ ಸಂಘಟಿತ ಹೋರಾಟ ನೀಡಲು ಸಾಧ್ಯವಾಗಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ ಸೋಲಿಗೆ ಇದು ಪ್ರಮುಖ ಕಾರಣ. ಲಸಿತ್ ಮಾಲಿಂಗ ಮತ್ತು ನುವಾನ್ ಕುಲಶೇಖರ ಅವರನ್ನು ಹೊರತುಪಡಿಸಿದರೆ ಲಂಕಾ ಬೌಲಿಂಗ್ ವಿಭಾಗವೂ ದುರ್ಬಲವಾಗಿ ಕಾಣಿಸುತ್ತದೆ.

ತಂಡಗಳು

ಬಾಂಗ್ಲಾದೇಶ: ಮುಷ್ಫೀಕುರ್ ರಹೀಮ್ (ನಾಯಕ), ಅಬ್ದುರ್ ರಜಾಕ್, ಎನಾಮುಲ್ ಹಕ್, ಎಲಿಯಾಸ್ ಸನ್ನಿ, ಇಮ್ರುಲ್ ಕಯೇಸ್, ಜುಹೂರುಲ್ ಇಸ್ಲಾಮ್, ಮಹಮೂದುಲ್ಲಾ, ಮಶ್ರಫೆ ಮೊರ್ತಜಾ, ನಾಸಿರ್ ಹೊಸೇನ್, ನಜೀಮುದ್ದೀನ್, ನಜ್ಮುಲ್ ಹೊಸೇನ್, ಶಫೀವುಲ್ ಇಸ್ಲಾಮ್, ಶಹಾದತ್ ಹೊಸೇನ್, ಶಕೀಬ್ ಅಲ್ ಹಸನ್, ತಮೀಮ್ ಇಕ್ಬಾಲ್.

ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಂಡಿಮಾಲ, ತಿಲಕರತ್ನೆ ದಿಲ್ಶಾನ್, ನುವಾನ್ ಕುಲಶೇಖರ, ಸುರಂಗ ಲಕ್ಮಲ್, ಫರ್ವೀಜ್ ಮಹರೂಫ್, ಲಸಿತ್ ಮಾಲಿಂಗ, ತಿಸಾರ ಪೆರೇರಾ, ಸೀಕುಗೆ ಪ್ರಸನ್ನ, ಕುಮಾರ ಸಂಗಕ್ಕಾರ, ಸಚಿತ್ರ ಸೇನನಾಯಕೆ, ಉಪುಲ್ ತರಂಗ, ಲಹಿರು ತಿರಿಮನ್ನೆ.

ಪಂದ್ಯದ ಆರಂಭ: (ಭಾರತೀಯ ಕಾಲಮಾನ) ಮಧ್ಯಾಹ್ನ 1.30ಕ್ಕೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.