ADVERTISEMENT

ಏಷ್ಯಾದಲ್ಲಿ 50 ಶತಕೋಟಿ ಡಾಲರ್ ಬೆಟ್ಟಿಂಗ್!

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಲಂಡನ್ (ಪಿಟಿಐ): ಏಷ್ಯಾದಲ್ಲಿ ಕ್ರಿಕೆಟ್ ಆಟದ ಮೇಲೆ ಪ್ರತಿ ವರ್ಷ ಸುಮಾರು 50 ಶತಕೋಟಿ ಡಾಲರ್ ಮೊತ್ತದ ಬೆಟ್ಟಿಂಗ್ ನಡೆಯುತ್ತದೆ!

-ಇಂಥದೊಂದು ಅಚ್ಚರಿಯ ಅಂಶವನ್ನು ಲಂಡನ್ ನ್ಯಾಯಾಲಯದಲ್ಲಿ ವಕೀಲರು ಬಹಿರಂಗಗೊಳಿಸಿದರು. ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತನಿಖಾ ದಳದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲ ಆಫ್ತಾಬ್ ಜಫರ್ಜಿ ಅವರು ಕ್ರಿಕೆಟ್ ಪಂದ್ಯಗಳ ಮೇಲೆ ನಡೆಯುವ ಬೆಟ್ಟಿಂಗ್ ಬಗ್ಗೆ ಅನೇಕ ವಿಷಯಗಳನ್ನು ತಿಳಿಸಿದರು.

ಜೂಜು ಆಸಕ್ತರಿಗೆ ಏಷ್ಯಾದಲ್ಲಿ ಬೇರೆಲ್ಲ ಕ್ರೀಡೆಗಳಿಗಿಂತ ಹೆಚ್ಚಾಗಿ ಕ್ರಿಕೆಟ್ ಅಚ್ಚುಮೆಚ್ಚು. ಆದ್ದರಿಂದಲೇ ಈ ಆಟವು ವಿಶ್ವದ ಯಾವುದೇ ಮೂಲೆಯಲ್ಲಿ ನಡೆದರೂ ಹಣವನ್ನು ಪಣಕ್ಕಿಡಲು ಸಿದ್ಧರಿರುತ್ತಾರೆ. ಆದರೆ ನಿಯಂತ್ರಣ ಇರುವುದು ದುಬೈ, ಮುಂಬೈ, ಲಂಡನ್ ಹಾಗೂ ಕರಾಚಿಯಲ್ಲಿರುವ ಭೂಗತ ಜಗತ್ತಿನವರ ಕೈಯಲ್ಲಿ. ಅವರ ಮೇಲೆ ಕಡಿವಾಣ ಹಾಕಲು ಎಷ್ಟೇ ಪ್ರಯತ್ನ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎನ್ನುವ ಸತ್ಯವನ್ನೂ ನ್ಯಾಯಾಧೀಶರ ಮುಂದೆ ತೆರೆದಿಟ್ಟರು.

`ಸ್ಪಾಟ್ ಫಿಕ್ಸಿಂಗ್‌ನಂಥ ಕುತಂತ್ರದ ಬಲೆಯನ್ನು ಹೆಣೆಯುವುದು ಕೂಡ ಕಷ್ಟವೆನಿಸಿಲ್ಲ~ ಎಂದು ಜಫರ್ಜಿ ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಟ್ವೆಂಟಿ-20 ಕ್ರಿಕೆಟ್ ಪಂದ್ಯದ ಕೊನೆಯ ಹತ್ತು ಓವರುಗಳಲ್ಲಿ ಎಲ್ಲವೂ ಬುಕ್ಕಿ ಎಣಿಸಿದಂತೆ ನಡೆಯುವಂತೆ ಮಾಡಲು ಆಟಗಾರರಿಗೆ ನೀಡುವ ಮೊತ್ತ ನಾಲ್ಕು ಲಕ್ಷ ಪೌಂಡ್. ಅಷ್ಟೇ ಅಲ್ಲ 10ಓವರುಗಳ ನಡುವೆ ನಿಖರವಾಗಿ ಸ್ಕೋರಿಂಗ್ ನಿಗದಿಗೆ 50-80 ಸಾವಿರ ಪೌಂಡ್ ಅಗತ್ಯವೆಂದು ಇದೇ ಬುಕ್ಕಿ ಹೇಳಿದ್ದು ಕೂಡ ನ್ಯಾಯಾಲಯದಲ್ಲಿ ಪ್ರಸ್ತಾವಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.