ADVERTISEMENT

ಏಷ್ಯಾ ಕಪ್ ಹಾಕಿ ಟೂರ್ನಿ: ಫೈನಲ್‌ ಕನಸಿನಲ್ಲಿ ಮನ್‌ಪ್ರೀತ್ ಸಿಂಗ್‌ ಬಳಗ

ಭಾರತ–ಪಾಕ್ ಮುಖಾಮುಖಿ ಇಂದು

ಪಿಟಿಐ
Published 20 ಅಕ್ಟೋಬರ್ 2017, 18:54 IST
Last Updated 20 ಅಕ್ಟೋಬರ್ 2017, 18:54 IST
ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರೊಂದಿಗೆ ಚೆಂಡಿಗಾಗಿ ಪೈಪೋಟಿ ನಡೆಸಿದ ಭಾರತದ ಎಸ್‌.ವಿ ಸುನಿಲ್‌
ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರರೊಂದಿಗೆ ಚೆಂಡಿಗಾಗಿ ಪೈಪೋಟಿ ನಡೆಸಿದ ಭಾರತದ ಎಸ್‌.ವಿ ಸುನಿಲ್‌   

ಢಾಕಾ (ಪಿಟಿಐ): ಸತತ ಗೆಲುವಿನ ಸಾಧನೆಗಳಿಂದ ಆತ್ಮವಿಶ್ವಾಸದ ಹೊಳೆಯಲ್ಲಿ ತೇಲುತ್ತಿರುವ ಭಾರತ ತಂಡ ಏಷ್ಯಾ ಕಪ್ ಹಾಕಿ ಟೂರ್ನಿಯ ಸೂಪರ್‌ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಶನಿವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಮನ್‌ಪ್ರೀತ್ ಸಿಂಗ್ ಬಳಗ ಮೊದಲ ಪಂದ್ಯದಲ್ಲಿ ಜಪಾನ್ ಎದುರು 5–1 ಗೋಲುಗಳಲ್ಲಿ ಜಯಿಸಿತ್ತು. ಬಳಿಕ ಬಾಂಗ್ಲಾದೇಶವನ್ನು 7–0ಯಲ್ಲಿ ಮಣಿಸಿ ಬೀಗಿತು. ಪಾಕಿಸ್ತಾನ ಎದರು 3–1ರಲ್ಲಿ ಗೆದ್ದು ಬಳಿಕ ಕೊರಿಯಾ ತಂಡದ ಮೇಲೆ 1–1ರಲ್ಲಿ ಡ್ರಾ ಮಾಡಿಕೊಂಡಿತ್ತು.

ಗುರುವಾರ ನಡೆದ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಭಾರತದ ಆಟಗಾರರು ಮಿಂಚು ಹರಿಸಿದ್ದರು. 6–2 ಗೋಲುಗಳಿಂದ ಪಂದ್ಯ ಗೆಲ್ಲುವಲ್ಲಿ ಸಫಲರಾಗಿದ್ದರು.

ADVERTISEMENT

ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಭಾರತ ತಂಡ ಟೂರ್ನಿಯಲ್ಲಿ ಇದುವರೆಗೂ ಒಂದೂ ಪಂದ್ಯ ಸೋತಿಲ್ಲ. ಅಜೇಯ ಜಯದ ಓಟವನ್ನು ಮುಂದುವರಿಸುವ ವಿಶ್ವಾಸ ಹೊಂದಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಕೊರಿಯಾ ಎದುರು 1–1ರಲ್ಲಿ ಡ್ರಾ ಮಾಡಿಕೊಂಡಿದೆ.ಭಾರತದ ಆಟಗಾರರು ಟೂರ್ನಿಯಲ್ಲಿ ಅಪೂರ್ವ ಪಾಸ್‌ಗಳಿಂದ ಗಮನಸೆಳೆದಿದ್ದಾರೆ. ಆಕ್ರಮಣಕಾರಿ ಆಟ ಹಾಗೂ ಪೆನಾಲ್ಟಿ ಕಾರ್ನರ್‌ಗಳಲ್ಲಿ ಸೊಗಸಾಗಿ ಗೋಲುಗಳನ್ನು ದಾಖಲಿಸಿದ್ದಾರೆ.

ಆದರೆ ಕೊರಿಯಾ ವಿರುದ್ಧ ಆಡಿದ ರೀತಿಗೆ ಕೋಚ್ ಶೊರ್ಡ್ ಮ್ಯಾರಿಜ್‌ ಎಚ್ಚರಿಕೆ ನೀಡಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ ಸಾಕಷ್ಟು ಅವಕಾಶ ಕೈಚೆಲ್ಲಿತ್ತು. ಒತ್ತಡದಿಂದ ಆಡಿತ್ತು. ಸೂಪರ್ ಫೋರ್ ಹಂತದ ಎರಡನೇ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ನಿರಾಸೆ ಮರೆತು ಆಡಿತ್ತು. ಇದರಿಂದಾಗಿ ಭಾರತದ ಬಳಿ ನಾಲ್ಕು ಪಾಯಿಂಟ್ಸ್‌ಗಳು ಇವೆ.

ತಂಡಗಳ ಭವಿಷ್ಯ: ಶನಿವಾರದ ಪಂದ್ಯದಲ್ಲಿ ಭಾರತ ಡ್ರಾ ಮಾಡಿಕೊಂಡರೂ ಫೈನಲ್‌ಗೆ ಅರ್ಹತೆ ಗಿಟ್ಟಿಸಲಿದೆ. ಪಾಕ್‌ ತಂಡ ಭಾರತದ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಜೊತೆಗೆ ಉಳಿದ ಸೂಪರ್ ಫೋರ್ ಹಂತದ ಪಂದ್ಯಗಳ ಮೇಲೆ ಈ ತಂಡದ ಭವಿಷ್ಯ ನಿರ್ಧಾರವಾಗಲಿದೆ. ಪಾಕಿಸ್ತಾನವನ್ನು ಭಾರತ ಹಗುರವಾಗಿ ಪರಿಗಣಿಸುವಂತಿಲ್ಲ. ಈ ತಂಡ ಯಾವುದೇ ಸಮಯದಲ್ಲೂ ಮಿಂಚುವ ಸಾಧ್ಯತೆ ಇದೆ.

ಇದುವರೆಗಿನ ಪಂದ್ಯಗಳಲ್ಲಿ ಭಾರತದ ಫಾವರ್ಡ್‌ ವಿಭಾಗ ಮಿಂಚಿದೆ. ಆಕಾಶ್‌ದೀಪ್‌ ಸಿಂಗ್‌, ರಮಣ್‌ದೀಪ್‌ ಸಿಂಗ್‌, ಎಸ್‌.ವಿ ಸುನಿಲ್‌. ಲಲಿತ್‌ ಉಪಾಧ್ಯಾಯ ಮತ್ತು ಯುವ ಆಟಗಾರ ಗುರ್ಜಂತ್‌ ಸಿಂಗ್‌ ಪ್ರಬಲ ರಕ್ಷಣಾಕೋಟೆಯನ್ನೂ ಭೇದಿಸಿ ಪೀಲ್ಡ್‌ ಗೋಲು ದಾಖಲಿಸುವ ಸಾಮರ್ಥ್ಯ ಹೊಂದಿದ್ದಾರೆ.

ಮಿಡ್‌ಫೀಲ್ಡ್‌ನಲ್ಲಿ ನಾಯಕ ಮನ್‌ಪ್ರೀತ್‌, ಚಿಂಗ್ಲೆನ್‌ಸನಾ ಸಿಂಗ್‌ ಭರವಸೆಯಾಗಿದ್ದಾರೆ. ಹಿರಿಯ ಆಟಗಾರ ಸರ್ದಾರ್ ಸಿಂಗ್‌ ಸೆಂಟರ್‌ ಡಿಫೆಂಡರ್‌ ಆಗಿ ಮಿಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.