ADVERTISEMENT

ಐಪಿಎಲ್‌ ಪಂದ್ಯಗಳ ಸ್ಥಳಾಂತರ: ಆಟಗಾರರ ಅಸಮಾಧಾನ

ಪಿಟಿಐ
Published 12 ಏಪ್ರಿಲ್ 2018, 19:20 IST
Last Updated 12 ಏಪ್ರಿಲ್ 2018, 19:20 IST

ನವದೆಹಲಿ: ಚೆನ್ನೈನಲ್ಲಿ ನಡೆಯಬೇಕಿದ್ದ ಉಳಿದ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಿದ ಬಿಸಿಸಿಐ ನಿರ್ಧಾರಕ್ಕೆ ಸಂಬಂಧಪಟ್ಟಂತೆ ಚೆನ್ನೈ ಸೂಪರ್‌ಕಿಂಗ್ಸ್‌ (ಸಿಎಸ್‌ಕೆ) ತಂಡದ ಆಟಗಾರರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಸ್ವರೂಪ ತೀವ್ರಗೊಂಡ ನಂತರ ಬಿಸಿಸಿಐ ಬುಧವಾರ ಈ ತೀರ್ಮಾನ ಕೈಗೊಂಡಿತ್ತು.

‘ಉಳಿದ ಪಂದ್ಯಗಳನ್ನು ಚೆನ್ನೈನಲ್ಲಿ ಆಡಲು ಸಾಧ್ಯವಾಗದಿರುವುದು ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಬೇಸರ ತರಿಸಿದೆ. ಮಂಗಳವಾರ ಪಂದ್ಯ ನಡೆದ ವೇಳೆ ಪ್ರತಿಭಟನೆಯ ಕಾವು ತೀವ್ರವಾಗಿತ್ತು. ಈ ಪರಿಸ್ಥಿತಿಗೆ ತಮಿಳುನಾಡು ಸರ್ಕಾರ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲಿ’ ಎಂದು ಸಿಎಸ್‌ಕೆಯ ಶೇನ್‌ ವಾಟ್ಸನ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ತವರಿನ ಕ್ರೀಡಾಂಗಣದಲ್ಲಿ ಆಡುವ ಸಂತಸ ಕಳೆದುಕೊಳ್ಳಲಿದ್ದೇವೆ. ಅಭಿಮಾನಿಗಳನ್ನು ರಂಜಿಸುವ ಅವಕಾಶ ತಪ್ಪಿಹೋಯಿತು. ಸದ್ಯ ಪುಣೆಗೆ ನಮ್ಮ ಪಯಣ. ಅಭಿಮಾನಿಗಳೇ, ನೀವು ನಮ್ಮ ಹೃದಯದಲ್ಲಿದ್ದೀರಿ’ ಎಂದು ತಂಡದ ಬ್ಯಾಟ್ಸಮನ್‌ ಸುರೇಶ್‌ ರೈನಾ ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಚೆನ್ನೈಯಿಂದ ತೆರಳುವುದು ದುಃಖದ ಸಂಗತಿ. ಮತ್ತೆ ಇಲ್ಲಿಗೆ ಮರಳಿ ಜನರ ಅಭಿಮಾನವನ್ನು ಅನುಭವಿಸಲು ಕಾತರನಾಗಿದ್ದೇನೆ. ಈಗಿನ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವುದು ಸೂಕ್ತ’ ಎಂದು ತಂಡದ ಮುಖ್ಯ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.