ADVERTISEMENT

ಐರ್ಲೆಂಡ್‌ಗೆ ಎರಡು ಜಯದ ಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:40 IST
Last Updated 18 ಮಾರ್ಚ್ 2011, 19:40 IST

ಕೋಲ್ಕತ್ತ (ಪಿಟಿಐ): ನಿರೀಕ್ಷೆ ಹುಸಿಯಾಗಲಿಲ್ಲ; ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿದ್ದ ಐರ್ಲೆಂಡ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ವಿಜಯದ ಸಂಭ್ರಮದ ಅಲೆಯ ಮೇಲೆ ತೇಲಿತು. ಆದರೆ ಹಾಲೆಂಡ್‌ಗೆ ಭಾರಿ ನಿರಾಸೆ, ಒಂದೇ ಒಂದು ಜಯದ ಕನಸು ಕೂಡ ನುಚ್ಚುನೂರಾಯಿತು.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಒಟ್ಟಾರೆ ಆರನೂರಕ್ಕೂ ಹೆಚ್ಚು ರನ್‌ಗಳು ಹರಿದವು. ಆದರೆ ಮುನ್ನೂರಕ್ಕೂ ಅಧಿಕ ರನ್ ಮೊತ್ತ ಪೇರಿಸಿಟ್ಟು ಗೆಲುವು ಸಾಧ್ಯ ಎಂದುಕೊಂಡಿದ್ದ ಹಾಲೆಂಡ್ ನಿರೀಕ್ಷೆ ಮಾತ್ರ ಹುಸಿ ಆಯಿತು. ‘ಟಾಸ್’ ಗೆದ್ದ ತಕ್ಷಣ ಅನುಮಾನವಿಲ್ಲದೆಯೇ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡ ಹಾಲೆಂಡ್ ತಂಡದ ನಾಯಕ ಪೀಟರ್ ಬೊರೆನ್ ಅವರು ಲೆಕ್ಕಾಚಾರ ಮಾಡಿದಂತೆ ದೊಡ್ಡ ಸವಾಲನ್ನು ಐರ್ಲೆಂಡ್‌ಗೆ ನೀಡುವುದು ಸಾಧ್ಯವಾಯಿತು.

ಅಷ್ಟು ಮಾತ್ರ ಅವರ ಲೆಕ್ಕಾಚಾರ ಸರಿಯಾಗಿದ್ದು. ಬೌಲಿಂಗ್‌ನಲ್ಲಿ ಕೂಡ ಅಷ್ಟೇ ಪ್ರಭಾವಿ ಆಗದ ಹಾಲೆಂಡ್ ವಿಶ್ವಕಪ್ ಕ್ರಿಕೆಟ್ ‘ಬಿ’ ಗುಂಪಿನಲ್ಲಿ ಒಂದು ಗೆಲುವಿನ ಸಿಹಿಯನ್ನು ಸವಿಯಲೂ ಆಗಲಿಲ್ಲ. ಐವತ್ತು ಓವರುಗಳಲ್ಲಿ 306 ರನ್‌ಗಳನ್ನು ಪೇರಿಸಿಟ್ಟ ಬೊರೆನ್ ಬಳಗದವರು ಬಿಗುವಿನಿಂದ ಬೌಲಿಂಗ್ ದಾಳಿ ನಡೆಸಿದ್ದರೆ, ಇಂಥ ನಿರಾಸೆ ಕಾಡುತ್ತಿರಲಿಲ್ಲ. ಒಂದಾದರೂ ಜಯ ಪಡೆಯಬೇಕು ಎನ್ನುವ ಕನಸು ಕೂಡ ನನಸಾಗುತಿತ್ತು.

ಹಾಲೆಂಡ್‌ನಂತೆಯೇ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಹ ಸದಸ್ಯ ರಾಷ್ಟ್ರವಾಗಿರುವ ಐರ್ಲೆಂಡ್‌ನವರು ಬ್ಯಾಟಿಂಗ್‌ನಲ್ಲಿ ಬಲ ತೊರಿದರು. ಕ್ಷೇತ್ರರಕ್ಷಣೆಯಲ್ಲಿನ ಬಲದಿಂದ ಹಾಲೆಂಡ್‌ನ ನಾಲ್ವರು ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳನ್ನು ರನ್‌ಔಟ್ ಬಲೆಗೆ ಬೀಳಿಸಿದ ಐರ್ಲೆಂಡ್, ಗುರಿಯನ್ನು ಬೆನ್ನಟ್ಟುವಾಗ ಹೆಚ್ಚು ಕಷ್ಟಪಡಲೇ ಇಲ್ಲ. ಇನ್ನೂ ಹದಿನಾಲ್ಕು ಎಸೆತಗಳು ಬಾಕಿ ಇರುವಂತೆಯೇ ವಿಲಿಯಮ್ ಪೋರ್ಟರ್‌ಫೀಲ್ಡ್ ಪಡೆಯು ವಿಜಯೋತ್ಸವ ಆಚರಿಸಿತು.

ಇಂಗ್ಲೆಂಡ್ ವಿರುದ್ಧ ಅಚ್ಚರಿಯ ವಿಜಯ ಸಾಧಿಸಿದ್ದ ಐರ್ಲೆಂಡ್‌ಗೆ ಹಾಲೆಂಡ್ ಎದುರು ಪಡೆದ ಫಲಿತಾಂಶವು ನಿರೀಕ್ಷಿತ. ಪ್ರಭಾವಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಐರ್ಲೆಂಡ್‌ಗೆ ಪಾಲ್ ಸ್ಟಿರ್ಲಿಂಗ್ ಶತಕವು ಬಲವಾಯಿತು. ಗುರಿಯ ಕಡೆಗಿನ ಓಟಕ್ಕೂ ಅಪಾಯಕಾರಿ ಎನ್ನುವಂಥ ತೊಡಕುಗಳು ಎದುರಾಗಲಿಲ್ಲ. ಆದ್ದರಿಂದ 47.4 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 307 ರನ್ ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ಎರಡನೇ ಜಯ ಪಡೆದ ಸಂತಸ ಈ ತಂಡದ್ದಾಯಿತು. ಕ್ವಾರ್ಟರ್‌ಫೈನಲ್ ತಲುಪುವ ಮಹತ್ವಾಕಾಂಕ್ಷೆಯ ಆಸೆ ಈಡೇರದಿದ್ದರೂ, ಐರ್ಲೆಂಡ್ ಎರಡು ಗೆಲುವಾದರೂ ಸಿಕ್ಕಿತಲ್ಲಾ ಎಂದು ಸಮಾಧಾನದ ನಿಟ್ಟುಸಿರು ಬಿಟ್ಟಿತು.

ಐಸಿಸಿ ಕೃಪೆ ತೋರಿ ಮುಂದಿನ ವಿಶ್ವಕಪ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಸಹ ಸದಸ್ಯ ರಾಷ್ಟ್ರಗಳಿಗೆ ಅವಕಾಶ ನೀಡಿದಲ್ಲಿ ಮತ್ತೆ ಇಂಥ ದೊಡ್ಡ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತೇವೆ ಎಂದು ಹೇಳಿದ ಪೋರ್ಟರ್‌ಫೀಲ್ಡ್ ಅವರು ಇಲ್ಲಿಗೆ ನಮ್ಮ ಹೋರಾಟ ಮುಗಿಯಿತೆನ್ನುವ ನುಡಿಯೊಂದಿಗೆ ಆತಿಥೇಯ ರಾಷ್ಟ್ರದ ಕ್ರಿಕೆಟ್ ಪ್ರೇಮಿಗಳಿಗೆ ವಿದಾಯ ಹೇಳಿದರು.

ಬೊರೆನ್ ಪಡೆಯವರು ಅಷ್ಟೇ ಸಂತಸದಿಂದ ವಿದಾಯ ಹೇಳಲು ಆಗಲಿಲ್ಲ. ಕೊನೆಯ ಲೀಗ್ ಪಂದ್ಯದಲ್ಲಿ ರ್ಯಾಟ್ ಟೆನ್ ಡಾಶೆಟ್ (106; 166 ನಿ., 108 ಎ., 13 ಬೌಂ, 1 ಸಿಕ್ಸರ್) ಹಾಗೂ ನಾಯಕ ಬೊರೆನ್ (84; 108 ನಿ., 82 ಎ., 10 ಬೌಂಡರಿ) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಹುಮ್ಮಸ್ಸಿನಿಂದ ಬೆಳೆದು ನಿಂತಿತು. ಮುನ್ನೂರರ ಗಡಿಯನ್ನು ದಾಟಿದಾಗ ಹಾಲೆಂಡ್ ತಂಡದವರ ಮುಖದಲ್ಲಿ ಇದ್ದ ಅಂದದ ಮಂದಹಾಸವು ಪಂದ್ಯದ ಕೊನೆಯಲ್ಲಿ ಮಾಯ!

ಐರ್ಲೆಂಡ್‌ನವರು ಸಾಕಷ್ಟು ಉತ್ತಮ ಯೋಜನೆಯೊಂದಿಗೆ ಇನಿಂಗ್ಸ್ ಕಟ್ಟಿದರು. ನಾಯಕ ಪೋರ್ಟರ್‌ಫೀಲ್ಡ್ (68; 116 ನಿ., 93 ಎ., 10 ಬೌಂಡರಿ) ಹಾಗೂ ಪಾಲ್ ಸ್ಟಿರ್ಲಿಂಗ್ (101; 119 ನಿ., 72 ಎ., 14 ಬೌಂಡರಿ, 2 ಸಿಕ್ಸರ್) ಅವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಗೆಲುವಿನ ಗೋಪುರ ಕಟ್ಟಿ ಕಳಶ ಇಡುವ ಕೆಲಸ ಮಾಡಿದ್ದು ಅಜೇಯ ಆಟವಾಡಿದ ನೀಲ್ ಓಬ್ರಿಯನ್ (57; 83 ನಿ., 58 ಎ., 7 ಬೌಂಡರಿ) ಹಾಗೂ ಕೆವಿನ್ ಓಬ್ರಿಯನ್ (15; 13 ನಿ., 9 ಎ., 2 ಸಿಕ್ಸರ್) ಸಹೋದರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.