ADVERTISEMENT

ಐಸ್‌ಲ್ಯಾಂಡ್‌ಗೆ ತಟ್ಟುವುದೇ ಮೆಸ್ಸಿ ‘ಬಿಸಿ’

ಇಂದು ಐಸ್‌ಲ್ಯಾಂಡ್‌ ವಿರುದ್ಧ ಹಣಾಹಣಿ; ಸುಲಭ ಜಯದ ನಿರೀಕ್ಷೆಯಲ್ಲಿ ಅರ್ಜೆಂಟೀನಾ

ಏಜೆನ್ಸೀಸ್
Published 15 ಜೂನ್ 2018, 19:30 IST
Last Updated 15 ಜೂನ್ 2018, 19:30 IST
ಫುಟ್‌ಬಾಲ್‌ ಲೋಕದ ಮಿನುಗು ತಾರೆ ಲಯೊನೆಲ್‌ ಮೆಸ್ಸಿ
ಫುಟ್‌ಬಾಲ್‌ ಲೋಕದ ಮಿನುಗು ತಾರೆ ಲಯೊನೆಲ್‌ ಮೆಸ್ಸಿ   

ಮಾಸ್ಕೊ (ಎಎಫ್‌ಪಿ): ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ಅರ್ಜೆಂಟೀನಾ ತಂಡ ಈ ಬಾರಿಯ ಟೂರ್ನಿಯಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿದೆ.

ಸ್ಪಾರ್ಟಕ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆಯುವ ‘ಡಿ’ ಗುಂಪಿನ ಹಣಾಹಣಿಯಲ್ಲಿ ಎರಡು ಬಾರಿಯ ಚಾಂಪಿಯನ್‌ ಅರ್ಜೆಂಟೀನಾ ತಂಡ ಐಸ್‌ಲ್ಯಾಂಡ್‌ ವಿರುದ್ಧ ಆಡಲಿದೆ.

ಫುಟ್‌ಬಾಲ್‌ ಲೋಕದ ಮಿನುಗು ತಾರೆ ಲಯೊನೆಲ್‌ ಮೆಸ್ಸಿ ಈ ಪಂದ್ಯದ ಆಕರ್ಷಣೆಯಾಗಿದ್ದಾರೆ. ಅವರ ಕಾಲ್ಚಳಕದ ಸೊಬಗು ಸವಿಯಲು ಫುಟ್‌ಬಾಲ್‌ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.‌

ADVERTISEMENT

ಮುಂಚೂಣಿ ವಿಭಾಗದ ಆಟಗಾರ ಮೆಸ್ಸಿ ಪಾಲಿಗೆ ಇದು ಕೊನೆಯ ವಿಶ್ವಕಪ್‌ ಎಂದೇ ಹೇಳಲಾಗುತ್ತಿದೆ. 2014ರಲ್ಲಿ ಬ್ರೆಜಿಲ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮೆಸ್ಸಿ, ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ್ದರು. ಅವರ ಸಾರಥ್ಯದಲ್ಲಿ ತಂಡ ರನ್ನರ್ಸ್‌ ಅಪ್‌ ಆಗಿತ್ತು. ಫೈನಲ್‌ನಲ್ಲಿ 0–1 ಗೋಲಿನಿಂದ ಜರ್ಮನಿ ಎದುರು ನಿರಾಸೆ ಕಂಡಿತ್ತು.

2015 ಮತ್ತು 2016ರಲ್ಲಿ ನಡೆದಿದ್ದ ಕೊಪಾ ಅಮೆರಿಕ ಟೂರ್ನಿಗಳಲ್ಲೂ ಫೈನಲ್‌ ಪ್ರವೇಶಿಸಿದ್ದ ಮೆಸ್ಸಿ ಬಳಗ ಎರಡು ಬಾರಿಯೂ ಚಿಲಿ ಎದುರು ಸೋತಿತ್ತು.

ಐದು ಸಲ, ಬ್ಯಾಲನ್‌ ಡಿ ಓರ್‌ (ವಿಶ್ವದ ಶ್ರೇಷ್ಠ ಆಟಗಾರನಿಗೆ ನೀಡುವ ಪ್ರಶಸ್ತಿ) ಗೌರವಕ್ಕೆ ಭಾಜನರಾಗಿರುವ ಮೆಸ್ಸಿಗೆ ವಿಶ್ವಕಪ್‌ ಎತ್ತಿ ಹಿಡಿಯುವ ಅವಕಾಶ ಇನ್ನೂ ಸಿಕ್ಕಿಲ್ಲ.

ಅನುಭವಿ ಗೋಲ್‌ಕೀಪರ್‌ ಸರ್ಜಿಯೊ ರೊಮೆರೊ ಮತ್ತು ಮಿಡ್‌ಫೀಲ್ಡರ್‌ ಮ್ಯಾನುಯೆಲ್‌ ಲಾಂಜಿನಿ ಅವರು ಐಸ್‌ಲ್ಯಾಂಡ್‌ ಎದುರು ಕಣಕ್ಕಿಳಿಯುವುದು ಖಚಿತವಾಗಿಲ್ಲ. ಗಾಯ ಗೊಂಡಿರುವ ಇವರು ಚೇತರಿಸಿಕೊಂಡಿಲ್ಲ.

ಮೆಸ್ಸಿ ಪಡೆ ಮುಂಚೂಣಿ ವಿಭಾಗದಲ್ಲಿ ಶಕ್ತಿಯುತವಾಗಿದೆ. ಸರ್ಜಿಯೊ ಆಗುಯೆರೊ, ಪಾಲೊ ದ್ಯಾಬಲಾ ಮತ್ತು ಗೊಂಜಾಲೊ ಹಿಗುವೆನ್‌ ಅವರು ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ನಿರಾಯಾಸವಾಗಿ ಭೇದಿಸಿ ಚೆಂಡನ್ನು ಗುರಿ ಮುಟ್ಟಿಸಬಲ್ಲರು. ಜೊರ್ಗೆ ಸ್ಯಾಂಪಾವೊಲಿ ಅವರ ಮಾರ್ಗದರ್ಶನ ಈ ತಂಡಕ್ಕಿದೆ.

ಗೇಬ್ರಿಯಲ್‌ ಮರ್ಕ್ಯಾಡೊ, ನಿಕೊಲಸ್‌ ಟ್ಯಾಗ್‌ ಲಿಯಾಫಿಕೊ, ಕ್ರಿಸ್ಟಿಯನ್‌ ಅನಸಾಲ್ಡಿ, ಫೆಡೆರಿಕೊ ಫಾಜಿಯೊ, ಮಾರ್ಕಸ್‌ ಅಕುನಾ ಮತ್ತು ಜೇವಿಯರ್‌ ಮ್ಯಾಸಚೆರಾನೊ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಆಧಾರ ಸ್ಥಂಭಗಳಾಗಿದ್ದಾರೆ.

ಲುಕಾಸ್‌ ಬಿಗ್ಲಿಯಾ, ಎವರ್‌ ಬನೆಗಾ ಮತ್ತು ಏಂಜಲ್‌ ಡಿ ಮರಿಯಾ ಅವರೂ ಮೋಡಿ ಮಾಡಲು ಕಾಯುತ್ತಿದ್ದಾರೆ.

ಆಘಾತ ನೀಡಲು ಕಾದಿರುವ ಐಸ್‌ಲ್ಯಾಂಡ್‌: ಐಸ್‌ಲ್ಯಾಂಡ್‌ ತಂಡ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಗಳಿಸಿದೆ.

ಹಿಯೆಮಿರ್‌ ಹ್ಯಾಲಗ್ರಿಮ್‌ಸನ್‌ ಅವರ ಗರಡಿಯಲ್ಲಿ ಪಳಗಿರುವ ಈ ತಂಡ ಅರ್ಜೆಂಟೀನಾಗೆ ಆಘಾತ ನೀಡಲು ಕಾಯುತ್ತಿದೆ.

3,30,000 ಜನಸಂಖ್ಯೆ ಹೊಂದಿರುವ ಐಸ್‌ಲ್ಯಾಂಡ್‌, ವಿಶ್ವಕಪ್‌ನಲ್ಲಿ ಆಡುತ್ತಿರುವ ಅತಿ ಚಿಕ್ಕ ದೇಶ ಎಂಬ ಹಿರಿಮೆ ತನ್ನದಾಗಿಸಿಕೊಂಡಿದೆ.

2016ರ ಯೂರೊ ಕಪ್‌ ಟೂರ್ನಿಯಲ್ಲಿ ಈ ತಂಡ ಬಲಿಷ್ಠ ಇಂಗ್ಲೆಂಡ್‌ಗೆ ಆಘಾತ ನೀಡಿ ಫುಟ್‌ಬಾಲ್‌ ಜಗತ್ತಿನ ಗಮನ ಸೆಳೆದಿತ್ತು.

ನಾಯಕ ಆ್ಯರನ್‌ ಗುನ್ನಾರ್ಸನ್‌, ಈ ತಂಡದ ಪ್ರಮುಖ ಆಟಗಾರ ಆಗಿದ್ದಾರೆ. ಗೈಲ್ಫಿ ಸಿಗುರ್ಡ್‌ಸನ್‌, ಜೊಹಾನ್ನ ಗುಡ್‌ಮಂಡ್‌ಸನ್‌, ಅಲ್ಬರ್ಟ್‌ ಗುಡ್‌ಮಂಡ್‌ಸನ್‌, ಬಿರ್ಕಿರ್‌ ಜಾರ್ನಸನ್‌ ಅವರೂ ಅರ್ಜೆಂಟೀನಾ ತಂಡಕ್ಕೆ ಸವಾಲಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.