
ಬೆಂಗಳೂರು: ರಮಣ್‌ದೀಪ್ ಸಿಂಗ್ ತಂದಿತ್ತ ಮೂರು ಗೋಲುಗಳ ನೆರವಿನಿಂದ ಒಎನ್‌ಜಿಸಿ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ `ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್~ನ ಪಂದ್ಯದಲ್ಲಿ ಗೆಲುವು ಪಡೆದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಒಎನ್‌ಜಿಸಿ 6-4 ಗೋಲುಗಳಿಂದ ಆರ್ಮಿ ರೆಡ್ ತಂಡವನ್ನು ಮಣಿಸಿತು. ರಮಣ್‌ದೀಪ್ ಪಂದ್ಯದ 11, 46 ಮತ್ತು 61ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸುವಲ್ಲಿ ಯಶಸ್ವಿಯಾದರು.
ತಂಡದ ಇತರ ಗೋಲುಗಳನ್ನು ಜಯಂತ್ (3ನೇ ನಿ.), ಗಗನ್‌ದೀಪ್ ಸಿಂಗ್ (28) ಮತ್ತು ಮನ್‌ದೀಪ್ ಅಂಟಿಲ್ (55) ತಂದಿತ್ತರು. ಪ್ರಬಲ ಪೈಪೋಟಿ ನೀಡಿದ ಆರ್ಮಿ ರೆಡ್ ತಂಡದ ಪರ ಜೆರೋಮ್ ಕುಜೂರ್ (7 ಮತ್ತು 50), ಚಿತ್ತರಂಜನ್ ಸಿಂಗ್ (26) ಮತ್ತು ಸಂಟ್ಯಾಲ್ ಮುಂಡು (29) ಗೋಲು ಗಳಿಸಿದರು.
ಏರ್‌ಇಂಡಿಯಾಗೆ ಜಯ: ದಿನದ ಮತ್ತೊಂದು ಪಂದ್ಯದಲ್ಲಿ ಏರ್ ಇಂಡಿಯಾ 3-2 ಗೋಲುಗಳಿಂದ ಪಿಎನ್‌ಬಿ ವಿರುದ್ಧ ರೋಚಕ ಗೆಲುವು ಪಡೆಯಿತು.ಅಜಿತೇಶ್ ರಾಯ್ ನಾಲ್ಕನೇ ನಿಮಿಷದಲ್ಲಿ ಪಿಎನ್‌ಬಿಗೆ ಮುನ್ನಡೆ ತಂದಿತ್ತರು. ಮರುಹೋರಾಟ ನಡೆಸಿದ ಏರ್ ಇಂಡಿಯಾ ತಂಡ ದೇವಿಂದರ್ ವಾಲ್ಮೀಕಿ (10) ಮತ್ತು ಸಮೀರ್ ದಾದ್ (17) ತಂದಿತ್ತ ಗೋಲುಗಳ ನೆರವಿನಿಂದ 2-1 ರಲ್ಲಿ ಮೇಲುಗೈ ಪಡೆಯಿತು. ಆದರೆ ಅಜಿತೇಶ್ (32ನೇ ನಿ.) ಮತ್ತೊಂದು ಗೋಲು ಗಳಿಸಿದ ಕಾರಣ ವಿರಾಮದ ವೇಳೆಗೆ ಉಭಯ ತಂಡಗಳು 2-2 ರಲ್ಲಿ ಸಮಬಲ ಸಾಧಿಸಿದ್ದವು. ಪಂದ್ಯದ 58ನೇ ನಿಮಿಷದಲ್ಲಿ ಲೆನ್ ಅಯ್ಯಪ್ಪ ಗೋಲು ತಂದಿತ್ತು ಏರ್ ಇಂಡಿಯಾ ಗೆಲುವಿನ ರೂವಾರಿ ಎನಿಸಿದರು.
ಇಂದಿನ ಪಂದ್ಯಗಳು: ಆರ್ಮಿ ಗ್ರೀನ್- ಫೋರ್ಟಿಸ್ (ಮಧ್ಯಾಹ್ನ 3.00ಕ್ಕೆ), ಐಒಸಿಎಲ್- ಐಎಎಫ್ (ಸಂಜೆ 4.30)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.