ADVERTISEMENT

ಒಬ್ಬರಿಗೆ ಹಾಲು; ಇನ್ನೊಬ್ಬರಿಗೆ ನೀರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST
ಒಬ್ಬರಿಗೆ ಹಾಲು; ಇನ್ನೊಬ್ಬರಿಗೆ ನೀರು
ಒಬ್ಬರಿಗೆ ಹಾಲು; ಇನ್ನೊಬ್ಬರಿಗೆ ನೀರು   

ಬೆಂಗಳೂರು: `ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಾಗ ಒಬ್ಬರಿಗೆ ಹಾಲು ಕೊಡುತ್ತಾರೆ. ಆದರೆ ಇನ್ನೊಬ್ಬರಿಗೆ ನೀರು ಕೊಡುತ್ತಾರೆ. ತುಂಬಾ ತಾರತಮ್ಯ ಮಾಡುತ್ತಾರೆ. ಹೀಗಾದರೆ ನಮ್ಮ ಪ್ರದರ್ಶನ ಮಟ್ಟ ಹೆಚ್ಚುವುದಾದರೂ ಹೇಗೆ. ನಾಲ್ಕು ವರ್ಷಗಳಿಂದ ಪಂಜಾಬ್‌ನಲ್ಲೇ ತರಬೇತಿ ಶಿಬಿರ ಆಯೋಜಿಸುತ್ತಿದ್ದಾರೆ.

ಬೇಸಿಗೆ ಕಾಲದಲ್ಲಿ ಕೂಡ~
-ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ್ದು ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ಜಾವೆಲಿನ್ ಥ್ರೋ ಸ್ಪರ್ಧಿ ಕರ್ನಾಟಕದ ಕಾಶೀನಾಥ್ ನಾಯ್ಕ.

ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಮಂಗಳವಾರ `ಪ್ರಜಾವಾಣಿ~ ಜೊತೆ ಮಾತನಾಡಿದ ಅವರು, `ರಾಷ್ಟ್ರೀಯ ಕ್ಯಾಂಪ್‌ಗಳಲ್ಲಿ ಬರೀ ರಾಜಕೀಯ. ಶಿಬಿರದಲ್ಲಿ ಸರಿಯಾದ ಸೌಲಭ್ಯವೇ ಇರುವುದಿಲ್ಲ. ತಮಗೆ ಬೇಕಾದವರಿಗೆ ಮಾತು ಹಾಲು ಕೊಡುತ್ತಾರೆ. ನಮ್ಮಂತಹ ಅಥ್ಲೀಟ್‌ಗಳಿಗೆ ಸರಿಯಾಗಿ ನೀರು ಸಿಗುವುದು ಕೂಡ ಕಷ್ಟ. ಹಾಗೇ, ಪ್ರತಿ ಬಾರಿ ಪಂಜಾಬ್‌ನ ಪಟಿಯಾಲಾದಲ್ಲಿ ಶಿಬಿರ ಆಯೋಜಿಸುತ್ತಾರೆ. ಬೇಸಿಗೆ ಕಾಲದಲ್ಲಿ ಅಲ್ಲಿ ಅಭ್ಯಾಸ ನಡೆಸಲು ತುಂಬಾ ಕಷ್ಟ. ನಮ್ಮ ಮಾತು ಕೇಳುವರಾರು~ ಎಂದರು.

`ನಾನೀಗ ಪುಣೆಯಲ್ಲಿ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಅಲ್ಲಿನ ಸೌಲಭ್ಯ ಚೆನ್ನಾಗಿದೆ. ಹಾಗಾಗಿ ಪ್ರದರ್ಶನ ಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿದೆ~ ಎಂದು ನುಡಿದರು.

`ಕರ್ನಾಟಕ ಸರ್ಕಾರ ಕೂಡ ಗಮನ ಹರಿಸುತ್ತಿಲ್ಲ. ಕ್ರಿಕೆಟ್ ಆಟಗಾರರಿಗೆ ಹಣ, ನಿವೇಶನ ನೀಡುವುದಾಗಿ ಹೇಳುತ್ತಾರೆ. ಆದರೆ ನಮ್ಮಂಥ ಅಥ್ಲೀಟ್‌ಗಳತ್ತ ಸ್ವಲ್ಪವೂ ಗಮನ ಹರಿಸುವುದಿಲ್ಲ. ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ಗೆದ್ದಾಗ ನಿವೇಶನ ನೀಡುವುದಾಗಿ ಹೇಳಿದ್ದರು. ಆದರೆ ಅದೆಲ್ಲಾ ಹೇಳಿಕೆಯಾಗಿ ಉಳಿದಿದೆ ಅಷ್ಟೆ~ ಎಂದರು.

ಹದಿನೈದು ದಿನಗಳ ಹಿಂದೆಯಷ್ಟೆ ಕಾಶಿ ಶಿರಶಿಯಲ್ಲಿ ಚೈತ್ರಾ ಅವರನ್ನು ವಿವಾಹವಾಗಿದ್ದಾರೆ. ಅವರೀಗ ಜುಲೈ 16ರಿಂದ 244ರವರೆಗೆ ಬ್ರೆಜಿಲ್‌ನಲ್ಲಿ ನಡೆಯಲಿರುವ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉದ್ಯಾನ ನಗರಿಯಲ್ಲಿ ನಡೆದ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆ ಬಗ್ಗೆ ಕೂಡ ಅವರು ಅಸಮಾಧಾನ ವ್ಯಕ್ತಪಡಿಸಿದರು.

`ಇಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್‌ನಲ್ಲಿ 21 ಮಂದಿಗೆ ಅವಕಾಶ ನೀಡಿದ್ದಾರೆ. ಇದರಲ್ಲಿ ನನ್ನ ಸರದಿ 21ನೆಯದ್ದು. ಹಾಗಾಗಿ ಸ್ಪರ್ಧೆ ತುಂಬಾ ನಿಧಾನವಾಗಿರುತಿತ್ತು. ಗಮನ ಹರಿಸಲು ತುಂಬಾ ಕಷ್ಟವಾಗುತಿತ್ತು. ಇದರಿಂದಾಗಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ನಿಯಮಗಳ ಪ್ರಕಾರ ಫೈನಲ್‌ನಲ್ಲಿ ಕೇವಲ 12 ಮಂದಿ ಮಾತ್ರ ಇರಬೇಕು~ ಎಂದು ವಿವರಿಸಿದರು.

ಇಲ್ಲಿ ಶಿರಸಿಯ ಕಾಶಿ 73.77 ಮೀ.ದೂರ ಜಾವೆಲಿನ್ ಎಸೆದರು. ಆದರೆ ಅವರ ಅತ್ಯುತ್ತಮ ಸಾಧನೆ 77.92.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.