ADVERTISEMENT

ಒಲಿಂಪಿಕ್ಸ್‌ಗೆ ರಫೆಲ್ ನಡಾಲ್ ಅಲಭ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಮ್ಯಾಡ್ರಿಡ್ (ಎಪಿ): ಮೂರನೇ ಶ್ರೇಯಾಂಕದ ಟೆನಿಸ್ ಆಟಗಾರ ರಫೆಲ್ ನಡಾಲ್ ಈ ಸಲದ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಇದರೊಂದಿಗೆ ಅವರು ಮತ್ತೊಮ್ಮೆ `ಬಂಗಾರ~ದ ಸಾಧನೆ ಮಾಡುವ ಅವಕಾಶ ಕಳೆದುಕೊಂಡರು.

ಸ್ಪೇನ್‌ನ ಈ ಅಟಗಾರ ಫಿಟ್‌ನೆಸ್ ಕಾಪಾಡಿಕೊಳ್ಳದೇ ಇರುವುದು ಲಂಡನ್ ಒಲಿಂಪಿಕ್ಸ್‌ನಲ್ಲಿ ಆಡದೇ ಇರಲು ಕಾರಣ ಎನ್ನಲಾಗಿದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನ ಸಿಂಗಲ್ಸ್‌ನಲ್ಲಿ ನಡಾಲ್ ಚಿನ್ನ ಗೆದ್ದಿದ್ದರು.
`ಸದ್ಯಕ್ಕೆ ಆರೋಗ್ಯ ಸ್ಥಿತಿ ಸರಿಯಾಗಿಲ್ಲ. ಆದ್ದರಿಂದ ಲಂಡನ್‌ಗೆ ಹೋಗುವ ವಿಚಾರದಿಂದ ಹಿಂದೆ ಸರಿದಿದ್ದೇನೆ.

ಬೇರೆ ಆಟಗಾರರು ನಮ್ಮ ದೇಶವನ್ನು ಪ್ರತಿನಿಧಿಸಲಿದ್ದಾರೆ~ ಎಂದು ನಡಾಲ್ ಗುರುವಾರ ನೀಡಿದ ಪ್ರಕಟಣೆಯಲ್ಲಿ ಹೇಳಿದ್ದಾರೆ. ಆದರೆ, ಸಮಸ್ಯೆ ಏನು ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ.
`ವೃತ್ತಿ ಜೀವನದ ಅತ್ಯಂತ ಬೇಸರದ ದಿನವಿದು. ಲಂಡನ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ದೇಶದ ಧ್ವಜ ಹಿಡಿಯುವ ಗೌರವ ಲಭಿಸಿತ್ತು.
 
ಆದರೂ ಒಲಿಂಪಿಕ್ಸ್‌ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ನೀವೇ ಊಹಿಸಿ. ನಾನೆಷ್ಟು ಕಠಿಣ ನಿರ್ಧಾರ ತಗೆದುಕೊಂಡಿದ್ದೇನೆ ಎಂಬುದು ನಿಮಗೆ ಗೊತ್ತಾಗುತ್ತದೆ~ ಎಂದು ನಡಾಲ್ ಬೇಸರದಿಂದ ನುಡಿದಿದ್ದಾರೆ.
ನಡಾಲ್ ಕೆಲದಿನಗಳಿಂದ ಮೊಣಕಾಲು ನೋವಿನಿಂದ ಬಳಲಿದ್ದರು.
 
ಇದೇ ಕಾರಣಕ್ಕಾಗಿ ಜುಲೈ 4ರಂದು ನಡೆಯಬೇಕಿದ್ದ ಪ್ರದರ್ಶನ ಪಂದ್ಯವನ್ನೂ ರದ್ಧು ಮಾಡಲಾಗಿತ್ತು. ಇತ್ತೀಚಿಗೆ ನಡೆದ ವಿಂಬಲ್ಡನ್ ಟೂರ್ನಿಯ ಎರಡನೇ ಸುತ್ತಿನಲ್ಲಿ 100ನೇ ಶ್ರೇಯಾಂಕದ ಆಟಗಾರನ ಎದುರು ಸೋಲು ಕಂಡು ಅಚ್ಚರಿ ಮೂಡಿಸಿದ್ದರು. ಈ ವೇಳೆ ಬಲವಾದ ಗಾಯದ ಸಮಸ್ಯೆ ಕಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.