ADVERTISEMENT

ಕರಣ್‌ ಶರ್ಮಾ ಸ್ಪಿನ್‌ ಮೋಡಿ

ಮೂರನೇ ಏಕದಿನ ಪಂದ್ಯ; ಭಾರತ ‘ಎ’ ತಂಡದ ಜಯಭೇರಿ

ಪಿಟಿಐ
Published 11 ಅಕ್ಟೋಬರ್ 2017, 19:30 IST
Last Updated 11 ಅಕ್ಟೋಬರ್ 2017, 19:30 IST
ಕರಣ್‌ ಶರ್ಮಾ
ಕರಣ್‌ ಶರ್ಮಾ   

ವಿಶಾಖಪಟ್ಟಣ: ಕರಣ್‌ ಶರ್ಮಾ (22ಕ್ಕೆ5) ಅವರ ಸ್ಪಿನ್‌ ದಾಳಿಗೆ ಮಂಗಳವಾರ ನ್ಯೂಜಿಲೆಂಡ್‌ ‘ಎ’ ತಂಡದ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು.

ಕರಣ್‌ ಅವರ ಶ್ರೇಷ್ಠ ಬೌಲಿಂಗ್‌ ಬಲ ದಿಂದ ಭಾರತ ‘ಎ’ ತಂಡ ಮೂರನೇ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಕಿವೀಸ್‌ ನಾಡಿನ ತಂಡವನ್ನು ಮಣಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಗಳಿಸಿತು. ಮಳೆಯಿಂದಾಗಿ ಮೊದಲ ಎರಡು ಪಂದ್ಯಗಳು ರದ್ದಾಗಿದ್ದವು.

ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್‌ ಮಾಡಿದ ಹೆನ್ರಿ ನಿಕೊಲಸ್‌ ಬಳಗ 37.1 ಓವರ್‌ಗಳಲ್ಲಿ 143ರನ್‌ಗಳಿಗೆ ಆಲೌಟ್‌ ಆಯಿತು. ಸಾಧಾರಣ ಗುರಿಯನ್ನು ಶ್ರೇಯಸ್‌ ಅಯ್ಯರ್‌ ಪಡೆ 24.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ADVERTISEMENT

ಆರಂಭಿಕ ಆಘಾತ: ಗುರಿ ಬೆನ್ನಟ್ಟಿದ ಆತಿಥೇಯರು ಆರಂಭಿಕ ಸಂಕಷ್ಟಕ್ಕೆ ಒಳಗಾದರು. ಇನಿಂಗ್ಸ್‌ ಆರಂಭಿಸಿದ ಪೃಥ್ವಿ ಶಾ (6) ಮತ್ತು ಕರ್ನಾಟಕದ ಮಯಂಕ್‌ ಅಗರವಾಲ್‌ (8) ಬೇಗನೆ ವಿಕೆಟ್‌ ನೀಡಿದರು.

ವಿಕೆಟ್‌ ಕೀಪರ್‌ ಶ್ರೀವತ್ಸ ಗೋಸ್ವಾಮಿ (9) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಹೀಗಾಗಿ ಭಾರತ ತಂಡದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು.

ಆರಂಭಿಕ ಆಟಗಾರರು ಬೇಗನೆ ಔಟಾದರೂ ನಾಯಕ ಶ್ರೇಯಸ್‌ (37; 36ಎ, 2ಬೌಂ, 3ಸಿ) ಎದೆಗುಂದಲಿಲ್ಲ. ಕಿವೀಸ್‌ ನಾಡಿನ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು ತಂಡದ ರನ್‌ ಗಳಿಕೆಗೆ ವೇಗ ತುಂಬಿದರು. 18ನೇ ಓವರ್‌ನಲ್ಲಿ ಶ್ರೇಯಸ್‌, ಇಶ್‌ ಸೋಧಿಗೆ ವಿಕೆಟ್‌ ನೀಡಿದಾಗ ತಂಡದ ಖಾತೆಯಲ್ಲಿ 87ರನ್‌ಗಳಿದ್ದವು.

ಈ ಹಂತದಲ್ಲಿ ವಿಜಯ್‌ ಶಂಕರ್‌ (ಔಟಾಗದೆ 47; 42ಎ, 7ಬೌಂ, 1ಸಿ) ಮತ್ತು ದೀಪಕ್‌ ಹೂಡಾ (ಔಟಾಗದೆ 35; 27ಎ, 3ಬೌಂ, 2ಸಿ) ಅಮೋಘ ಇನಿಂಗ್ಸ್‌ ಕಟ್ಟಿದರು.

ನ್ಯೂಜಿಲೆಂಡ್‌ ದಾಳಿಯನ್ನು ದಿಟ್ಟತನದಿಂದ ಎದುರಿಸಿದ ಇವರು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ ‘ಎ’: 37.1 ಓವರ್‌ಗಳಲ್ಲಿ 143 (ಜಾರ್ಜ್‌ ವರ್ಕರ್‌ 22, ಕಾಲಿನ್‌ ಮುನ್ರೊ 29, ಹೆನ್ರಿ ನಿಕೊಲಸ್‌ 35, ಬ್ರ್ಯೂಸ್‌ 14, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 24; ಬಸಿಲ್ ಥಂಪಿ 24ಕ್ಕೆ1, ದೀಪಕ್‌ ಹೂಡಾ 17ಕ್ಕೆ2, ಶಹಬಾಜ್‌ ನದೀಮ್‌ 37ಕ್ಕೆ1, ವಿಜಯ್‌ ಶಂಕರ್‌ 18ಕ್ಕೆ1, ಕರಣ್ ಶರ್ಮಾ 22ಕ್ಕೆ5).

ಭಾರತ ‘ಎ’: 24.4 ಓವರ್‌ಗಳಲ್ಲಿ 4 ವಿಕೆಟ್‌ಗೆ 144 (ಪೃಥ್ವಿ ಶಾ 6, ಮಯಂಕ್‌ ಅಗರವಾಲ್‌ 8, ಶ್ರೀವತ್ಸ ಗೋಸ್ವಾಮಿ 9, ಶ್ರೇಯಸ್‌ ಅಯ್ಯರ್‌ 37, ವಿಜಯ್‌ ಶಂಕರ್‌ ಔಟಾಗದೆ 47, ದೀಪಕ್‌ ಹೂಡಾ ಔಟಾಗದೆ 35; ಇಶ್‌ ಸೋಧಿ 31ಕ್ಕೆ2, ಲೂಕಿ ಫರ್ಗ್ಯೂಸನ್‌ 42ಕ್ಕೆ1).

ಫಲಿತಾಂಶ: ಭಾರತ ‘ಎ’ ತಂಡಕ್ಕೆ 6 ವಿಕೆಟ್‌ ಗೆಲುವು ಹಾಗೂ 5 ಪಂದ್ಯಗಳ ಸರಣಿಯಲ್ಲಿ 1–0ರಲ್ಲಿ ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.