ADVERTISEMENT

ಕರುಣ್‌ ನಾಯರ್‌ ಬಳಗ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 19:30 IST
Last Updated 5 ಮಾರ್ಚ್ 2018, 19:30 IST
ಆರ್.ಸಮರ್ಥ್‌ ಆಟದ ವೈಖರಿ
ಆರ್.ಸಮರ್ಥ್‌ ಆಟದ ವೈಖರಿ   

ಧರ್ಮಶಾಲ: ಅತ್ಯಂತ ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಭಾರತ ‘ಬಿ’ ತಂಡವನ್ನು ಆರು ರನ್‌ಗಳಿಂದ ಮಣಸಿದ ಕರ್ನಾಟಕ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಇಲ್ಲಿನ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್.ಸಮರ್ಥ್‌ (117; 115 ಎ, 1 ಸಿ, 13 ಬೌಂ) ಅವರ ಸ್ಫೋಟಕ ಶತಕ ಮತ್ತು ವೇಗಿ ಪ್ರಸಿದ್ಧ್‌ ಕೃಷ್ಣ ಮತ್ತು ಸ್ಪಿನ್ನರ್‌ ಶ್ರೇಯಸ್ ಗೋಪಾಲ್ ಅವರ ಉತ್ತಮ ಬೌಲಿಂಗ್ ದಾಳಿ ಕರ್ನಾಟಕಕ್ಕೆ ಗೆಲುವು ತಂದುಕೊಟ್ಟಿತು.

197 ರನ್‌ಗಳ ಗುರಿ ಬೆನ್ನತ್ತಿದ ಭಾರತ ‘ಬಿ’ ತಂಡ 23 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ನಾಯಕ್ ಶ್ರೇಯಸ್ ಅಯ್ಯರ್ ಮತ್ತು ಮನೋಜ್ ತಿವಾರಿ (120; 110ಎ, 4 ಸಿ, 10 ಬೌಂ) 85 ರನ್‌ ಸೇರಿಸಿ ತಂಡವನ್ನು ಮೂರಂಕಿ ಗಡಿ ದಾಟಿಸಿದರು.

ADVERTISEMENT

ಅಯ್ಯರ್ ಔಟಾದ ನಂತರ ತಿವಾರಿ ಮತ್ತು ಸಿದ್ಧಾರ್ಥ್ ಲಾಡ್‌ (70; 78 ಎ, 6 ಬೌಂ) 133 ರನ್‌ಗಳ ಜೊತೆಯಾಟ ಆಡಿ ಕರ್ನಾಟಕ ಪಾಳಯದಲ್ಲಿ ಆತಂಕ ಮೂಡಿಸಿದರು.

ಇವರಿಬ್ಬರ ವಿಕೆಟ್ ಉರುಳಿದ ನಂತರ ಕರ್ನಾಟಕದ ಬೌಲರ್‌ಗಳು ಮೇಲುಗೈ ಸಾಧಿಸಿದರು. ಅಂತಿಮ ಓವರ್‌ನಲ್ಲಿ ಗೆಲುವಿನತ್ತ ಹೆಜ್ಜೆ ಹಾಕಿದ್ದ ಭಾರತ ‘ಬಿ’ ತಂಡವನ್ನು ಕಟ್ಟಿ ಹಾಕಿ ಆಫ್ ಸ್ಪಿನ್ನರ್ ಕೆ.ಗೌತಮ್‌ ಮೆಚ್ಚುಗೆ ಗಳಿಸಿದರು.

ಸಮರ್ಥ್‌ ಶತಕದ ಮಿಂಚು
ಟಾಸ್‌ ಗೆದ್ದ ಕರ್ನಾಟಕ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ದೇಶಿ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿದ್ದ ಮಯಂಕ್ ಅಗರವಾಲ್‌ ಈ ಪಂದ್ಯದಲ್ಲಿ ವೈಫಲ್ಯ ಕಂಡರು.

ನಾಯಕ ಕರುಣ್ ನಾಯರ್ ಕೂಡ ಬೇಗನೇ ಔಟಾದರು. ಮಯಂಕ್ ಜೊತೆ 33 ರನ್‌ ಸೇರಿಸಿದ್ದಾಗ ವಿಕೆಟ್ ಕೀಪರ್ ಕೆ.ಎಸ್‌.ಭರತ್‌ಗೆ ಕ್ಯಾಚ್ ನೀಡಿ ಮರಳಿದರು.

ನಂತರ ಮಯಂಕ್ ಮತ್ತು ಸಮರ್ಥ್‌ ಎರಡನೇ ವಿಕೆಟ್‌ಗೆ 49 ರನ್ ಸೇರಿಸಿದರು. 44 ಎಸೆತಗಳಲ್ಲಿ 40 ರನ್‌ ಗಳಿಸಿದ ಮಯಂಕ್‌ ಮರಳಿದರು. ಒಂದು ಸಿಕ್ಸರ್ ಮತ್ತು ಆರು ಬೌಂಡರಿಗಳು ಅವರ ಇನಿಂಗ್ಸ್‌ನಲ್ಲಿದ್ದವು. ಈ ಎರಡೂ ವಿಕೆಟ್‌ಗಳು ಸಿದ್ಧಾರ್ಥ್‌ ಕೌಲ್‌ ಅವರ ಪಾಲಾದವು.

ಈ ಸಂದರ್ಭದಲ್ಲಿ ಇನಿಂಗ್ಸ್ ಕಟ್ಟುವ ಹೊಣೆ ಸಮರ್ಥ್ ಅವರ ಹೆಗಲಿಗೆ ಬಿತ್ತು. ಪವನ್ ದೇಶಪಾಂಡೆ ಜೊತೆಗೂಡಿ ಅವರು ಎದುರಾಳಿ ಬೌಲರ್‌ಗಳನ್ನು ದಂಡಿಸಿದರು.

ಅಮೋಘ ಬ್ಯಾಟಿಂಗ್ ಮಾಡಿದ ಇವರಿಬ್ಬರು ಮೂರನೇ ವಿಕೆಟ್‌ಗೆ 86 ರನ್ ಸೇರಿಸಿ ಮೊತ್ತವನ್ನು 150ರ ಗಡಿ ದಾಟಿಸಿದರು. ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಒಳಗೊಂಡ 46 ರನ್‌ ಗಳಿಸಿದ ಪವನ್‌ ದೇಶಪಾಂಡೆ ಔಟಾದ ನಂತರ ತಂಡ ಮತ್ತೊಮ್ಮೆ ಕುಸಿತದ ಹಾದಿ ಹಿಡಿಯಿತು.

ಆದರೆ ಸಮರ್ಥ್‌ ಎದೆಗುಂದಲಿಲ್ಲ. ಭಾರತ ‘ಬಿ’ ತಂಡದ ವೇಗಿಗಳು ಮತ್ತು ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಶತಕ ಸಿಡಿಸಿ ಸಂಭ್ರಮಿಸಿದರು. ತಲಾ 28 ಮತ್ತು 20 ರನ್‌ ಗಳಿಸಿದ ಸಿ.ಎಂ.ಗೌತಮ್‌ ಮತ್ತು ಕೆ. ಗೌತಮ್ ಅವರು ಸಮರ್ಥ್‌ಗೆ ಉತ್ತಮ ಬೆಂಬಲ ನೀಡಿದರು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ:
50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 296 (ಮಯಂಕ್ ಅಗರವಾಲ್‌ 44, ಆರ್‌.ಸಮರ್ಥ್‌ 117, ಪವನ್ ದೇಶಪಾಂಡೆ 46, ಸಿ.ಎಂ.ಗೌತಮ್‌ 28, ಕೆ.ಗೌತಮ್‌ 20; ಸಿದ್ಧಾರ್ಥ್‌ ಕೌಲ್‌ 49ಕ್ಕೆ3, ಹರ್ಷಲ್‌ ಪಟೇಲ್‌  59ಕ್ಕೆ2, ಜಯಂತ್ ಯಾದವ್‌ 48ಕ್ಕೆ2); ಭಾರತ ‘ಬಿ’: 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 290 (ಶ್ರೇಯಸ್ ಅಯ್ಯರ್‌ 33, ಮನೋಜ್‌ ತಿವಾರಿ 120, ಸಿದ್ಧಾರ್ಥ್ ಲಾಡ್‌ 70; ಪ್ರಸಿದ್ಧ್‌ ಕೃಷ್ಣ 45ಕ್ಕೆ2, ಟಿ.ಪ್ರದೀಪ್‌ 54ಕ್ಕೆ1, ಕೆ.ಗೌತಮ್‌ 58ಕ್ಕೆ1, ಸ್ಟುವರ್ಟ್ ಬಿನ್ನಿ 44ಕ್ಕೆ1, ಶ್ರೇಯಸ್‌ ಗೋಪಾಲ್ 29ಕ್ಕೆ3). ಫಲಿತಾಂಶ: ಕರ್ನಾಟಕಕ್ಕೆ ಆರು ರನ್‌ಗಳ ಜಯ. ರಾಜ್ಯ ತಂಡದ ಮುಂದಿನ ಪಂದ್ಯ: ಭಾರತ ‘ಎ’ ವಿರುದ್ಧ, ಮಂಗಳವಾರ ಮಧ್ಯಾಹ್ನ 1.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.