ADVERTISEMENT

ಕರ್ನಾಟಕ–ಬೆಂಗಾಲ್‌ ಪೈಪೋಟಿ

ಸೆಮಿಫೈನಲ್‌ನಲ್ಲಿ ಕೇರಳಕ್ಕೆ ಮಿಜೋರಾಂ ಎದುರಾಳಿ

ಪಿಟಿಐ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಅಭ್ಯಾಸದಲ್ಲಿ ನಿರತರಾಗಿರುವ ಬೆಂಗಾಲ್ ತಂಡದ ಆಟಗಾರರು
ಅಭ್ಯಾಸದಲ್ಲಿ ನಿರತರಾಗಿರುವ ಬೆಂಗಾಲ್ ತಂಡದ ಆಟಗಾರರು   

ಹೌರಾ: ಕರ್ನಾಟಕ ಪುರುಷರ ತಂಡ 72ನೇ ಸಂತೋಷ್ ಟ್ರೋಫಿ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ ಬೆಂಗಾಲ್ ತಂಡದೊಂದಿಗೆ ಪೈಪೋಟಿ ನಡೆಸಲಿದೆ.

ತವರಿನಲ್ಲಿ ಆಡುತ್ತಿರುವ ಹಾಲಿ ಚಾಂಪಿಯನ್‌ ಬೆಂಗಾಲ್ ತಂಡ ಜಯದ ವಿಶ್ವಾಸ ಹೊಂದಿದೆ. ಉತ್ತಮ ಲಯದಲ್ಲಿರುವ ಕರ್ನಾಟಕ ತಂಡ ಕೂಡ ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆ ಹೊಂದಿದೆ. ಕ್ವಾರ್ಟರ್‌ಫೈನಲ್‌ನಲ್ಲಿ ಬೆಂಗಾಲ್ ತಂಡ ಮಣಿಪುರ ಎದುರು ಸುಲಭ ಗೆಲುವು ದಾಖಲಿಸಿತ್ತು. ಮಹಾರಾಷ್ಟ್ರ ಹಾಗೂ ಚಂಡೀಗಡ ಎದುರಿನ ಪಂದ್ಯದಲ್ಲಿಯೂ ಉತ್ತಮವಾಗಿ ಆಡಿದೆ. ಗುಂಪಿನ ಅಂತಿಮ ಪಂದ್ಯದಲ್ಲಿ ಕೇರಳ ಎದುರು ಸೋತಿತ್ತು.

‘ಫೈನಲ್‌ಗಿಂತ ಸೆಮಿಫೈನಲ್‌ ಹೋರಾಟ ಕಠಿಣವಾಗಿರುತ್ತದೆ. ಈ ಸವಾಲನ್ನು ಮೀರಲು ತಂಡದ ಆಟಗಾರರು ಸಜ್ಜಾಗಿದ್ದಾರೆ’ ಎಂದು ಬೆಂಗಾಲ್ ತಂಡದ ಕೋಚ್ ರಂಜನ್ ಚೌಧರಿ ಹೇಳಿದ್ದಾರೆ.

ADVERTISEMENT

‘ಕರ್ನಾಟಕ ಉತ್ತಮ ತಂಡ. ಚುರುಕಿನ ಆಟದಿಂದಾಗಿ ಈ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಎದು ರಾಳಿಯಿಂದ ಕಠಿಣ ಪೈಪೋಟಿ ನಿರೀಕ್ಷಿಸಿದ್ದೇವೆ. ಆ ತಂಡದ ಆಟಗಾರರು ದೈಹಿಕ ವಾಗಿ ಸಮರ್ಥರಿದ್ದಾರೆ. ವೇಗ ಹಾಗೂ ನಿಖರವಾಗಿ ಪಾಸ್ ಮಾಡುತ್ತಾರೆ. ನಾವು ಎಚ್ಚರಿಕೆಯಿಂದ ಆಡಲಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ತಂಡ 1968ರಲ್ಲಿ ಸಂತೋಷ್‌ ಟ್ರೋಫಿ ಗೆದ್ದುಕೊಂಡಿತ್ತು. ಈ ಋತುವಿನಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ರಾಜ್ಯ ತಂಡ ಗೋವಾ, ಒಡಿಶಾ ಹಾಗೂ ಮಿಜೋರಾಂ ಎದುರು ಜಯಿಸಿದೆ.

‘ನಮ್ಮ ತಂಡದಲ್ಲಿ ಯುವ ಆಟಗಾರರು ಇದ್ದಾರೆ. ಸೆಮಿಫೈನಲ್‌ವರೆಗೂ ತಲುಪಿರುವ ತಂಡ ಮುಂದಿನ ಹಾದಿಯಲ್ಲಿಯೂ ಸಮರ್ಥವಾಗಿ ಆಡಲಿದೆ’ ಎಂದು ಕರ್ನಾಟಕ ತಂಡದ ಕೋಚ್ ಪಿ. ಮುರಳೀಧರನ್ ಹೇಳಿದ್ದಾರೆ.

ದಿನದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಕೇರಳ ಹಾಗೂ ಮಿಜೋರಾಂ ತಂಡಗಳು ಆಡಲಿವೆ. ಟೂರ್ನಿಯ ಆರಂಭದಿಂದ ಕೇರಳ ತಂಡ ಹೆಚ್ಚು ಆಕ್ರಮಣಕಾರಿಯಾಗಿ ಆಡಿದೆ. ಐದು ಬಾರಿ ಇಲ್ಲಿ ಚಾಂಪಿಯನ್ ಆಗಿರುವ ಕೇರಳ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

ಆರಂಭ: ಮಧ್ಯಾಹ್ನ 2.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.