ADVERTISEMENT

ಕರ್ನಾಟಕ ಕುಸ್ತಿಪಟುಗಳ ಪಾರುಪತ್ಯ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ಮೈಸೂರು: ಕರ್ನಾಟಕದ ಸ್ಪರ್ಧಿಗಳು ದಸರಾ ಮಹೋತ್ಸವದ ಅಂಗವಾಗಿ ದೊಡ್ಡಕೆರೆ ಮೈದಾನದ ಡಿ. ದೇವರಾಜ್ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಅಖಿಲ ಭಾರತ ಆಹ್ವಾನಿತ ಕುಸ್ತಿ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ನಾಲ್ಕು ಮತ್ತು  ಮಹಿಳೆಯರ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡರು.

ಶನಿವಾರ ದಿನವಿಡೀ ಸುರಿಯುತ್ತಿದ್ದ ಜಿಟಿಜಿಟಿ ಮಳೆಯಲ್ಲಿಯೂ ಕುಸ್ತಿ ವೀಕ್ಷಿಸಲು ಬಂದಿದ್ದ ನೂರಾರು ಜನರ ಮುಂದೆ ನಡೆದ ಪುರುಷರ 96ಕೆಜಿ ಮೇಲ್ಪಟ್ಟವರ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ನ ಕೆಂಚಪ್ಪ ಅವರು ಕರ್ನಾಟಕದವರೇ ಆದ ಶ್ರೀಶೈಲ ಶೆಟ್ಟಿಗೆ ಸೋಲಿನ ರುಚಿ ತೋರಿಸಿದರು.

74ಕೆಜಿ ವಿಭಾಗದಲ್ಲಿ ಕರ್ನಾಟಕದ ಭರವಸೆಯ ಕುಸ್ತಿಪಟು ಸಂದೀಪ್ ಕಾಟೆ ಅವರು, ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ನ ಕೃಷ್ಣನಾಥ್ ಸಾವಂತ್ ವಿರುದ್ಧ ಭರ್ಜರಿ ಜಯ ದಾಖಲಿಸಿದರು. 66ಕೆಜಿ ವಿಭಾಗದ ಕುಸ್ತಿಯ ರೋಚಕ ಫೈನಲ್‌ನಲ್ಲಿ ಕರ್ನಾಟಕದ ಬೆಳಗಾವಿಯ ಶಿವಾಜಿ ರೇಡೇಕರ್ ಅವರು ಮರಾಠಾ ಲೈಟ್ ಇನ್‌ಫೆಂಟ್ರಿಯ ಅನುರಕ್ತ್ ಅವರನ್ನು ಪರಾಭವಗೊಳಿಸಿದರು.  60 ಕೆಜಿ ವಿಭಾಗದಲ್ಲಿಯೂ ಕರ್ನಾಟಕದ ಪೈಲ್ವಾನರದ್ದೇ ಮೇಲುಗೈ. ಧಾರವಾಡದ ಎಸ್‌ಟಿಸಿಯ ಎಂ. ನಾಗರಾಜ್, ಕರ್ನಾಟಕದವರೇ ಆದ ಸಿದ್ದು ಹೊಸಮನಿ ವಿರುದ್ಧ ಗೆಲುವು ಸಾಧಿಸಿದರು.

ಯುಧೀಷ್ಠಿರ್‌ಗೆ ಗೆಲುವು:
96 ಕೆಜಿ ವಿಭಾಗದ ಫೈನಲ್‌ನಲ್ಲಿ ಮಿಂಚಿನ ಕುಸ್ತಿ ಪ್ರದರ್ಶಿಸಿದ ಅಂತರರಾಷ್ಟ್ರೀಯ ಕುಸ್ತಿಪಟು, ಹರಿಯಾಣದ ಯುಧಿಷ್ಠಿರ್ ಮಹಾರಾಷ್ಟ್ರದ ಪುಂಡಲೀಕ್ ಘಾರೆಯವರನ್ನು ಸೋಲಿಸಿದರು.

ಎಂಎಲ್ ಐಆರ್‌ಸಿಯನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದವರೇ ಆದ ಎಸ್. ಎಚ್. ಆನಂದ್ 84 ಕೆಜಿ ವಿಭಾಗದ ಫೈನಲ್‌ನಲ್ಲಿ ಕರ್ನಾಟಕದ ಅಪ್ಪಾಸಾಹೇಬ ತೋಂಡಸಿ ವಿರುದ್ಧ ಗೆದ್ದರು.

ಅನುಶ್ರೀ, ರಂಜಿತಾ ಜಯಭೇರಿ:
ಮಹಿಳೆಯರ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅನುಶ್ರೀ ಮತ್ತು ರಂಜಿತಾ ಕರ್ನಾಟಕ ತಂಡಕ್ಕೆ ಎರಡು ಚಿನ್ನದ ಪದಕದ ಕಾಣಿಕೆ ನೀಡಿದರು. ಅನುಶ್ರೀ 67 ಕೆಜಿ ವಿಭಾಗದ ಫೈನಲ್‌ನಲ್ಲಿ ಕುರುಕ್ಷೇತ್ರದ ಅನುಭವಿ ಕುಸ್ತಿಪಟು ಸೋನು ದಹಿಯಾರನ್ನು ಸೋಲಿಸಿ ಪ್ರಶಸ್ತಿ ಗಳಿಸಿದರು. ಈ ವಿಭಾಗದಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಟಿ.ಎಸ್. ಭವ್ಯ ಕಂಚಿನ ಪದಕ ಪಡೆದರು.

ಭಾನುವಾರದ ಪಂದ್ಯಗಳು: ಕುಸ್ತಿ ಪಂದ್ಯಾವಳಿಯ ಕೊನೆಯ ದಿನವಾದ ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ರಾಜ್ಯಮಟ್ಟದ  ದಸರಾ ಕೇಸರಿ, ದಸರಾ ಕಂಠೀರವ ಮತ್ತು ದಸರಾ ಕುಮಾರ ಪ್ರಶಸ್ತಿಗಳ ಫೈನಲ್ ಪಂದ್ಯಗಳು ನಡೆಯಲಿವೆ.

ಫಲಿತಾಂಶಗಳು: ಪುರುಷರು:
55ಕೆಜಿ: ಶಿವಾಜಿ ಪಾಟೀಲ (ಎಂಎಲ್‌ಐಆರ್‌ಸಿ)-1, ವಿನಾಯಕ ಗುರವ (ಕರ್ನಾಟಕ ಎಸ್‌ಟಿಸಿ ಬೆಳಗಾವಿ)-2,
60ಕೆಜಿ: ಎಂ. ನಾಗರಾಜ್ (ಕರ್ನಾಟಕ)-1, ಸಿದ್ದು ಹೊಸಮನಿ (ಕರ್ನಾಟಕ)-2,

66ಕೆಜಿ: ಶಿವಾಜಿ ರೇಡೇಕರ್ (ಬೆಳಗಾವಿ, ಕರ್ನಾಟಕ)-1, ಅನುರಕ್ತ್ (ಎಂಎಲ್‌ಆರ್‌ಸಿ)-2, ನಿಶಾಂತ್ ಪಾಟೀಲ (ಕರ್ನಾಟಕ)-3, ಗುರುಲಿಂಗ (ಎಸ್‌ಟಿಸಿ)-3

74ಕೆಜಿ: ಸಂದೀಪ್ ಕಾಟೆ (ಎಸ್‌ಟಿಸಿ ಧಾರವಾಡ, ಕರ್ನಾಟಕ)-1, ಕೃಷ್ಣನಾಥ್ ಸಾವಂತ್ (ಎಂಎಲ್‌ಆರ್‌ಸಿ)-2, ಕಾರ್ತಿಕ್ ಕಾಟೆ)-3, ಅತುಲ್ ಶರ್ಮಾ (ಕುರುಕ್ಷೇತ್ರ)-3,

84ಕೆಜಿ: ಎಸ್.ಎಚ್. ಆನಂದ (ಎಂಎಲ್‌ಐಆರ್‌ಸಿ)-1, ಅಪ್ಪಾಸಾಹೇಬ ತೋಂಡಸಿ (ಕರ್ನಾಟಕ)-2, ಶಿವಪ್ರಸಾದ್ ಖೋತ್ (ಕರ್ನಾಟಕ)-3, ರಾಜೇಂದ್ರ (ಕುರುಕ್ಷೇತ್ರ)-3.

96ಕೆಜಿ: ಯುಧಿಷ್ಠಿರ್ (ರೋಹತಕ್, ಹರಿಯಾಣ)-1, ಪುಂಡಲೀಕ್ ಘಾರೆ (ಮಹಾರಾಷ್ಟ್ರ)-2, ಸಚಿನ್ ಪೂಜಾರಿ (ಕೊಲ್ಲಾಪುರ)-3, ಪ್ರವೀಣ ಶಿವಾಲೆ (ಎಂಎಲ್‌ಐಆರ್‌ಸಿ)-3.

96ಕೆಜಿ ಮೇಲ್ಪಟ್ಟು: ಕೆಂಚಪ್ಪ (ಕೆಎಸ್‌ಪಿ)-1, ಶ್ರೀಶೈಲ ಶೆಟ್ಟಿ (ಕರ್ನಾಟಕ)-2, ಎಂ.ವೈ. ಪಾಟೀಲ (ಕರ್ನಾಟಕ)-3, ಶಂಕರ್ (ಮಹಾರಾಷ್ಟ್ರ). 

 ಮಹಿಳೆಯರು:   48ಕೆಜಿ: ನಂದಿನಿ ಬಿ ಸಾಳುಂಕೆ (ಮುಂಬೈ)-1, ಸ್ವಾತಿ ಎಸ್. ಶಿಂಧೆ (ಕೊಲ್ಲಾಪುರ)-2
51ಕೆಜಿ: ಉಷಾ (ಪೂನಾ)-1, ಸಯೀದಾ ಬಳಿಗಾರ (ಗದಗ, ಕರ್ನಾಟಕ)-2
55ಕೆಜಿ: ಎನ್. ರಂಜಿತಾ (ಆಳ್ವಾಸ್)-1 ಶ್ವೇತಾ (ಗದಗ) -2
59ಕೆಜಿ: ದೇವಕಿ ರಜಪೂತ್ (ಮುಂಬೈ)-1, ವೈ. ಮೇಘನಾ (ಆಳ್ವಾಸ್)-2, ಡಿ. ಕಾವ್ಯಾ (ಆಳ್ವಾ)-3
63ಕೆಜಿ: ಶಿವಾನಿ ಚೌಧರಿ (ಕುರುಕ್ಷೇತ್ರ)-1, ರೀಟಾ ಪ್ರಿಯಾಂಕ (ಮೈಸೂರು)-2, ಆತ್ಮಶ್ರೀ (ಆಳ್ವಾಸ್)-3; 67ಕೆಜಿ: ಅನುಶ್ರೀ (ಆಳ್ವಾಸ್)-1, ಸೋನು ದಹಿಯಾ (ಕುರುಕ್ಷೇತ್ರ)-2, ಭವ್ಯ ಟಿ.ಎಸ್(ಮಂಡ್ಯ)-3
72ಕೆಜಿ: ಏಕತಾ (ಕುರುಕ್ಷೇತ್ರ) -1 ರೀತು (ಭಿವಾನಿ)-2,
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.