ADVERTISEMENT

ಕರ್ನಾಟಕ ತಂಡ ರನ್ನರ್ ಅಪ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ಭೋಪಾಲ್ (ಐಎಎನ್‌ಎಸ್): ಕರ್ನಾಟಕ ತಂಡ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತು. ಭಾನುವಾರ ನಡೆದ ಫೈನಲ್‌ನಲ್ಲಿ ಕರ್ನಾಟಕ ವಿರುದ್ಧ 2-1 ಗೋಲುಗಳ ಜಯ ಪಡೆದ ಹರಿಯಾಣ ಚಾಂಪಿಯನ್‌ಪಟ್ಟ ತನ್ನದಾಗಿಸಿಕೊಂಡಿತು.

ಸಂದೀಪ್ ಸಿಂಗ್ ಮತ್ತು ಮನ್‌ದೀಪ್ ಅಂಟಿಲ್ ಅವರು ಗೋಲು ಗಳಿಸಿ ಹರಿಯಾಣ ತಂಡದ ಗೆಲುವಿನ ರೂವಾರಿ ಎನಿಸಿದರು. ಕರ್ನಾಟಕ ತಂಡದ ಏಕೈಕ ಗೋಲನ್ನು ವಿ.ಆರ್. ರಘುನಾಥ್ ಅವರು ಪೆನಾಲ್ಟಿ ಅವಕಾಶದಲ್ಲಿ ತಂದಿತ್ತರು.

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಹರಿಯಾಣ ಫೈನಲ್‌ನಲ್ಲೂ ಶಿಸ್ತಿನ ಆಟವಾಡಿತು. ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಕರ್ನಾಟಕ ತಂಡ ಗೋಲು ಗಳಿಸಲು ಲಭಿಸಿದ ಕೆಲವೊಂದು ಉತ್ತಮ ಅವಕಾಶಗಳನ್ನು ಹಾಳುಮಾಡಿಕೊಂಡಿತು. ರಘುನಾಥ್ ಅವರಿಗೆ ಇತರ ಆಟಗಾರರಿಂದ ತಕ್ಕ ಬೆಂಬಲ ದೊರೆಯಲಿಲ್ಲ.

ಪಂಜಾಬ್‌ಗೆ ಮೂರನೇ ಸ್ಥಾನ: ಜಾರ್ಖಂಡ್ ತಂಡವನ್ನು 4-1 ಗೋಲುಗಳಿಂದ ಮಣಿಸಿದ ಪಂಜಾಬ್ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಪ್ರಭ್‌ದೀಪ್ 10ನೆ ನಿಮಿಷದಲ್ಲಿ ಪಂಜಾಬ್‌ಗೆ ಮೊದಲ ಗೋಲು ತಂದಿತ್ತರೆ, ಎಂಟು ನಿಮಿಷಗಳ ಬಳಿಕ ಬಿಕೇಶ್ ಟೊಪ್ಪೊ ಜಾರ್ಖಂಡ್‌ಗೆ ಸಮಬಲದ ಗೋಲು ತಂದುಕೊಟ್ಟರು.

ಬಳಿಕ ಪಂಜಾಬ್ ತನ್ನ ಆಕ್ರಮಣದ ವೇಗ ಹೆಚ್ಚಿಸಿಕೊಂಡಿತು. ಬಲ್ಜಿಂದರ್ ಸಿಂಗ್(43), ಪ್ರಭ್‌ದೀಪ್ (51) ಹಾಗೂ ಆಕಾಶ್‌ದೀಪ್ ಸಿಂಗ್ (66) ಚೆಂಡನ್ನು ಗುರಿ ಸೇರಿಸಿ ತಂಡದ ಗೆಲುವಿಗೆ ಕಾರಣರಾದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.