ADVERTISEMENT

ಕಾಂಗೊ ಅಥ್ಲೀಟ್‌ಗಳು ಲಂಡನ್‌ನಲ್ಲಿ ನಾಪತ್ತೆ...!

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಡಕಾರ್ (ರಾಯಿಟರ್ಸ್): ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡ ಕಾಂಗೊ ದೇಶದ ಕೆಲವು ಅಥ್ಲೀಟ್‌ಗಳು ಹಾಗೂ ಕೋಚ್ ಲಂಡನ್‌ನಲ್ಲಿ ನಾಪತ್ತೆಯಾಗಿದ್ದಾರೆ ಎಂದು ಇಲ್ಲಿನ ಮಾಧ್ಯಮ ವರದಿ ಮಾಡಿವೆ.

ಜೂಡೊ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸೆಡ್ರಿಕ್ ಮಾಂಡೆಂಬೊ ಭಾನುವಾರ ರಾತ್ರಿ ಸಮಾರೋಪ ಸಮಾರಂಭದ ಬಳಿಕ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್‌ಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ಎಂದು `ರೇಡಿಯೊ ಒಕಾಪಿ~ ಹೇಳಿದೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ತಂಡದ ಜೊತೆ ಆಗಮಿಸಿದ್ದ ಕೋಚ್ ಇಬುಲ ಮಸೆಂಗೊ, ಬಾಕ್ಸಿಂಗ್ ತರಬೇತುದಾರ ಬ್ಲೈಸ್ ಬೆಕ್ವ ಮತ್ತು ಅಥ್ಲೆಟಿಕ್ಸ್‌ನ ತಾಂತ್ರಿಕ ನಿರ್ದೇಶಕ ಗಯ್ ನಿಕಿತಾ ಅವರೂ ಕಾಣೆಯಾಗಿದ್ದಾರೆ. ಈ ನಾಲ್ಕು ಮಂದಿ ತಮ್ಮ ಲಗೇಜ್‌ಗಳೊಂದಿಗೆ ಒಲಿಂಪಿಕ್ಸ್ ಗ್ರಾಮ ತೊರೆದಿದ್ದಾರೆ ಎಂದು ವರದಿ ತಿಳಿಸಿದೆ.

ಆದರೆ ಅವರು ಎಲ್ಲಿಗೆ ಹೋಗಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಒಲಿಂಪಿಕ್ಸ್ ವೇಳೆ ಕ್ಯಾಮರೂನ್‌ನ ಐವರು ಬಾಕ್ಸರ್‌ಗಳು ಒಳಗೊಂಡಂತೆ ಏಳು ಅಥ್ಲೀಟ್‌ಗಳು ನಾಪತ್ತೆಯಾಗಿದ್ದರು. ಅವರನ್ನು ಪತ್ತೆಹಚ್ಚಲು ನೆರವಾಗುವಂತೆ ಕ್ಯಾಮರೂನ್‌ನ ಅಧಿಕಾರಿಗಳು ಲಂಡನ್ ಕೂಟದ ಸಂಘಟಕರಲ್ಲಿ ಕೇಳಿಕೊಂಡಿದ್ದರು.

ಆಫ್ರಿಕಾದ ಕೆಲವು ಅಥ್ಲೀಟ್‌ಗಳು ಒಲಿಂಪಿಕ್ಸ್ ಬಳಿಕ ಲಂಡನ್‌ನಲ್ಲೇ ತಂಗಲು ಪ್ರಯತ್ನಿಸಬಹುದು ಎಂಬ ಆತಂಕವನ್ನು ಇಂಗ್ಲೆಂಡ್‌ನ ವಲಸೆ ಅಧಿಕಾರಿಗಳು ಕೂಟಕ್ಕೆ ಮೊದಲೇ ವ್ಯಕ್ತಪಡಿಸಿದ್ದರು.

ನಾಪತ್ತೆಯಾಗಿರುವ ಕ್ಯಾಮರೂನ್ ಅಥ್ಲೀಟ್‌ಗಳ ಬಗ್ಗೆ ಲಂಡನ್ ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ಕೂಟದ ಸಂಘಟಕರು ತಿಳಿಸಿದ್ದಾರೆ. ಆದರೆ ಈ ಅಥ್ಲೀಟ್‌ಗಳ ವೀಸಾದ ಕಾಲಾವಧಿ ನವೆಂಬರ್‌ವರೆಗೆ ಇದೆ. ಈ ಕಾರಣ ಅದುವರೆಗೆ ಇಂಗ್ಲೆಂಡ್‌ನ ವಲಸೆ ನಿಯಮಗಳನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ.

ಒಲಿಂಪಿಕ್ ನೆಪದಲ್ಲಿ ಅನಧಿಕೃತ ವಲಸೆಗೆ ಅವಕಾಶ ನೀಡುವುದಿಲ್ಲವೆಂದು ಇಂಗ್ಲೆಂಡ್ ಸರ್ಕಾರ ಮೊದಲೇ ಎಚ್ಚರಿಕೆ ನೀಡಿದ್ದರೂ ಇಂಥದೊಂದು ಪ್ರಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.