ADVERTISEMENT

ಕಾಮನ್‌ವೆಲ್ತ್‌ ಪದಕ ಗುರಿ

ಪಿಟಿಐ
Published 1 ಜೂನ್ 2017, 19:46 IST
Last Updated 1 ಜೂನ್ 2017, 19:46 IST
ಕಾಮನ್‌ವೆಲ್ತ್‌ ಪದಕ ಗುರಿ
ಕಾಮನ್‌ವೆಲ್ತ್‌ ಪದಕ ಗುರಿ   

ನವದೆಹಲಿ: ಮುಂದಿನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗಳಿಸುವುದೇ ತಮ್ಮ ಗುರಿ ಎಂದು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಹೇಳಿದ್ದಾರೆ.

ಕಳೆದ ವಾರ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಮುಕ್ತಾಯ­ಗೊಂಡ ಸುದಿರ್ಮನ್ ಕಪ್‌ನ ಡಬಲ್ಸ್ ವಿಭಾಗದಲ್ಲಿ ಅವರು ಉತ್ತಮವಾಗಿ ಆಡಿದ್ದರು. ಎನ್‌.ಸಿಕ್ಕಿ ರೆಡ್ಡಿ ಜೊತೆಗೂಡಿ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಸ್ಪರ್ಧಿಸಿದ್ದ ಅವರು ಸಾತ್ವಿಕ್‌ ಸಾಯಿರಾಜ್‌ ಜೊತೆಗೆ ಮಿಶ್ರ ಡಬಲ್ಸ್‌ನಲ್ಲೂ ಆಡಿದ್ದರು. ಟೂರ್ನಿಯಲ್ಲಿ ತಂಡ ನಾಕೌಟ್‌ ಹಂತ ತಲುಪಿತ್ತು.

ಭಾರತದ ಮಹಿಳಾ ಡಬಲ್ಸ್ ವಿಭಾಗದ ಉತ್ತಮ ಜೋಡಿಯಾಗಿದ್ದ ಅಶ್ವಿನಿ ಮತ್ತು ಜ್ವಾಲಾ ಗುಟ್ಟಾ 2010 ಮತ್ತು 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದರು. 2011ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ತಮ್ಮದಾಗಿಸಿಕೊಂಡಿದ್ದರು. 2012 ಮತ್ತು 2016ರ ಒಲಿಂಪಿಕ್ಸ್‌ಗೂ ಆಯ್ಕೆಯಾಗಿದ್ದರು. ಜ್ವಾಲಾ ಗುಟ್ಟಾ ಈಗ ನಿವೃತ್ತಿಯ ಸನಿಹದಲ್ಲಿದ್ದು ಅಶ್ವಿನಿ ಹೊಸ ಜೋಡಿಯೊಂದಿಗೆ ಗಮನ ಸೆಳೆಯುತ್ತಿದ್ದಾರೆ.

ADVERTISEMENT

‘ಮುಂದಿನ ಟೂರ್ನಿಗಾಗಿ ಕಾಯು­ತ್ತಿದ್ದೇನೆ. ಈ ವರ್ಷ ನಡೆಯಲಿರುವ ಸೂಪರ್‌ ಸೀರೀಸ್‌ನಲ್ಲಿ ಫೈನಲ್‌ ತಲು­ಪಲು ಸಾಧ್ಯವಾದರೆ ಗೋಲ್ಡ್ ಕೋಸ್ಟ್‌ನಲ್ಲಿ  ಮುಂದಿನ ವರ್ಷ ನಡೆಯ­ಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗಳಿಸುವುದು ಕಷ್ಟವಾಗದು’ ಎಂದು ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅಶ್ವಿನಿ ಹೇಳಿದರು.

‘ಸುದಿರ್ಮನ್ ಕಪ್‌ ಟೂರ್ನಿಯಲ್ಲಿ ಉತ್ತಮ ಆಟವಾಡುವ ಭರವಸೆ ತಂಡಕ್ಕೆ ಇತ್ತು. ಅದು ನಿಜವಾಗಿದೆ. ಭಾರತದ ವಿರುದ್ಧ ಆಡಿದ ತಂಡಗಳ ಬಹುತೇಕ ಆಟಗಾರರು ಬಲಿಷ್ಠರಾಗಿದ್ದರು. ಆದರೂ ತಂಡ ನಾಕೌಟ್ ಹಂತಕ್ಕೆ ತಲುಪಿದ್ದು ಖುಷಿ ನೀಡಿದೆ’ ಎಂದು ಅಶ್ವಿನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.