ADVERTISEMENT

ಕಿಂಗ್ಸ್ ಇಲೆವೆನ್ ತಂಡದ ಮೆರೆದಾಟ

​ಪ್ರಜಾವಾಣಿ ವಾರ್ತೆ
Published 2 ಮೇ 2012, 19:30 IST
Last Updated 2 ಮೇ 2012, 19:30 IST
ಕಿಂಗ್ಸ್ ಇಲೆವೆನ್ ತಂಡದ ಮೆರೆದಾಟ
ಕಿಂಗ್ಸ್ ಇಲೆವೆನ್ ತಂಡದ ಮೆರೆದಾಟ   

ಬೆಂಗಳೂರು: ಏಕಾಂಗಿ ಹೋರಾಟಕ್ಕಿಂತಲೂ ಸಂಘಟಿತ ಪ್ರಯತ್ನಕ್ಕೆ ಹೆಚ್ಚಿನ ಬಲ ಎಂಬುದನ್ನು ತೋರಿಸಿಕೊಟ್ಟ  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೊಗಸಾದ ಗೆಲುವು.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆಲ್‌ರೌಂಡ್ ಪ್ರದರ್ಶನ ನೀಡಿದ ಕಿಂಗ್ಸ್ ಇಲೆವೆನ್ ನಾಲ್ಕು ವಿಕೆಟ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಐದನೇ ಸೋಲು ಅನುಭವಿಸಿದ ಡೇನಿಯಲ್ ವೆಟೋರಿ ಬಳಗ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿತ ಕಂಡಿತು.~

ಕ್ರಿಸ್ ಗೇಲ್ ಏಕಾಂಗಿ ಹೋರಾಟದ ಮೂಲಕ ಆರ್‌ಸಿಬಿಗೆ ಈ ಹಿಂದೆ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಆದರೆ ಪ್ರತಿ ಬಾರಿಯೂ ಇದು ನಡೆಯದು ಎಂಬುದು ಬುಧವಾರ ಸಾಬೀತಾಯಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆತಿಥೇಯ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 158 ರನ್ ಪೇರಿಸಿತು. ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಎನಿಸಿರುವ ಗೇಲ್ (71, 42 ಎಸೆತ, 6 ಬೌಂ, 4 ಸಿಕ್ಸರ್) ಹಾಗೂ ಕೊಹ್ಲಿ (45, 42 ಎಸೆತ, 3 ಬೌಂ, 2 ಸಿಕ್ಸರ್) ಉತ್ತಮ ಆಟ ಈ ಮೊತ್ತಕ್ಕೆ        ಕಾರಣ. ಇವರಿಬ್ಬರು ಎರಡನೇ ವಿಕೆಟ್‌ಗೆ 83 ಎಸೆತಗಳಲ್ಲಿ 119 ರನ್ ಸೇರಿಸಿದರು.

ಕಿಂಗ್ಸ್ ಇಲೆವೆನ್ 19.5 ಓವರ್‌ಗಳಲ್ಲಿ 6 ವಿಕೆಟ್‌ಗೆ 153 ರನ್ ಗಳಿಸಿ ಜಯ ಸಾಧಿಸಿತು. ಗೆಲುವಿನ ಸನಿಹ ಅಲ್ಪ ಒತ್ತಡ ಅನುಭವಿಸಿದ್ದನ್ನು ಬಿಟ್ಟರೆ ಪಂಜಾಬ್‌ನ ತಂಡ ಪೂರ್ಣ ಪ್ರಭುತ್ವ ಮೆರೆಯಿತು. ನಿತಿನ್ ಸೈನಿ (50, 36 ಎಸೆತ, 5 ಬೌಂಡರಿ), ಡೇವಿಡ್ ಹಸ್ಸಿ (45, 29 ಎಸೆತ, 2 ಬೌಂ, 4 ಸಿಕ್ಸರ್) ಮತ್ತು ಮನ್‌ದೀಪ್ ಸಿಂಗ್ (43, 30 ಎಸೆತ, 6 ಬೌಂ, 1 ಸಿಕ್ಸರ್) ಗೆಲುವಿನ ಹಾದಿ ಸುಗಮಗೊಳಿಸಿದರು.

ಆದರೆ ಬೌಲಿಂಗ್‌ನಲ್ಲಿ ಮಿಂಚಿದ್ದ `ಪಂದ್ಯಶ್ರೇಷ್ಠ~ ಅಜರ್ ಮಹಮೂದ್ (20ಕ್ಕೆ 3) ಮತ್ತು ಪ್ರವೀಣ್ ಕುಮಾರ್ ಅವರ ಕೊಡುಗೆಯೂ ಮಹತ್ವದ್ದು. ಒಟ್ಟಿನಲ್ಲಿ ಹಸ್ಸಿ ಬಳಗ ಸಂಘಟಿತ ಹೋರಾಟದಿಂದ ಗೆಲುವು ಒಲಿಸಿಕೊಂಡಿತು.

ವಿನಯ್ ಕುಮಾರ್ ಎಸೆದ ಅಂತಿಮ ಓವರ್‌ನ ಐದನೇ ಎಸೆತವನ್ನು ಸಿಕ್ಸರ್‌ಗಟ್ಟಿದ ಪಿಯೂಷ್ ಚಾವ್ಲಾ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಸೋಲು ಅನುಭವಿಸಿದ ಕಾರಣ ಆರ್‌ಸಿಬಿ ತಂಡದ `ಪ್ಲೇ ಆಫ್~ ಪ್ರವೇಶದ ಹಾದಿ ಇನ್ನಷ್ಟು ಕಠಿಣ ಎನಿಸಿದೆ.

ಗೇಲ್, ಕೊಹ್ಲಿ ಆಸರೆ: ಇದಕ್ಕೂ ಮುನ್ನ ಮಯಾಂಕ್ ಅಗರ್‌ವಾಲ್ (7) ಅವರನ್ನು ಬೇಗನೇ ಕಳೆದುಕೊಂಡ ಆರ್‌ಸಿಬಿ ಆರಂಭದಲ್ಲಿ ತಡಬಡಾಯಿಸಿತು. ಬೌಲಿಂಗ್ ಆರಂಭಿಸಿ ಸತತ ನಾಲ್ಕು ಓವರ್ ಎಸೆದ ಪ್ರವೀಣ್ ಕುಮಾರ್ (4-0-8-0) ದಾಳಿ ಅದ್ಭುತವಾಗಿತ್ತು. ಪಿಚ್‌ನ ಪರಿಸ್ಥಿತಿಯ ಲಾಭ ಎತ್ತಿಕೊಂಡ ಅವರು ಸ್ವಿಂಗ್ ಬೌಲಿಂಗ್ ಮೂಲಕ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಇದರಿಂದ ಗೇಲ್ ಮತ್ತು ಕೊಹ್ಲಿಗೆ ಆರಂಭದಲ್ಲಿ ರಟ್ಟೆಯರಳಿಸಲು ಸಾಧ್ಯವಾಗಲಿಲ್ಲ.

ಮೊದಲ ಹತ್ತು ಓವರ್‌ಗಳ ಕೊನೆಯಲ್ಲಿ ಆರ್‌ಸಿಬಿ ಸ್ಕೋರ್ 59ಕ್ಕೆ 1. ಈ ಅವಧಿಯಲ್ಲಿ ಕೇವಲ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಮಾತ್ರ ನೋಡುವ ಅವಕಾಶ ಪ್ರೇಕ್ಷಕರಿಗೆ ಲಭಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಸರಾಗವಾಗಿ ಹರಿಯತೊಡಗಿದ್ದು 12ನೇ ಓವರ್ ಬಳಿಕ. ಪಿಯೂಷ್ ಚಾವ್ಲಾ ಎಸೆದ ಆ ಓವರ್‌ನಲ್ಲಿ 18 ರನ್‌ಗಳು ಬಂದವು.

ಗೇಲ್ ಬ್ಯಾಟ್‌ನಿಂದ ಒಟ್ಟು ನಾಲ್ಕು ಸಿಕ್ಸರ್‌ಗಳು ಸಿಡಿದವು. ಅಭಿಷೇಕ್ ನಾಯರ್ ಎಸೆತದಲ್ಲಿ ಅವರು ಸಿಡಿಸಿದ ಸಿಕ್ಸರ್‌ನಲ್ಲಿ ಚೆಂಡು ಕ್ರೀಡಾಂಗಣದ ಛಾವಣಿ ಮೇಲೆ ಬಿತ್ತು! ಪ್ರಸಕ್ತ ಐಪಿಎಲ್‌ನಲ್ಲಿ ದಾಖಲಾದ ಅತಿದೊಡ್ಡ ಸಿಕ್ಸರ್ ಅದಾಗಿತ್ತು.

ಗೇಲ್ ಹಾಗೂ ಕೊಹ್ಲಿ ಔಟಾದ ಬಳಿಕ ರನ್‌ವೇಗಕ್ಕೆ ಕಡಿವಾಣ ಬಿತ್ತು. ಆರ್‌ಸಿಬಿ ಕೊನೆಯ ಐದು ಓವರ್‌ಗಳಲ್ಲಿ ರನ್‌ರೇಟ್ ಹೆಚ್ಚಿಸಲು ವಿಫಲವಾಗಿ ಕೇವಲ 36 ರನ್ ಸೇರಿಸಿತು.
 

ಸ್ಕೋರ್ ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ
5 ವಿಕೆಟ್‌ಗೆ 158
ಮಯಾಂಕ್ ಅಗರ್‌ವಾಲ್ ಬಿ ರ‌್ಯಾನ್ ಹ್ಯಾರಿಸ್  07
ಗೇಲ್ ಸಿ ಮಿಲ್ಲರ್ (ಬದಲಿ ಆಟಗಾರ) ಬಿ ಅಜರ್ ಮಹಮೂದ್ 71
ವಿರಾಟ್ ಕೊಹ್ಲಿ ಬಿ ಪಿಯೂಷ್ ಚಾವ್ಲಾ  45
ಡಿವಿಲಿಯರ್ಸ್ ಸಿ ಚಾವ್ಲಾ ಬಿ ಅಜರ್ ಮಹಮೂದ್  17
ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್ ಸಿ ಸೈನಿ ಬಿ ಅಜರ್ ಮಹಮೂದ್  09
ಅಸದ್ ಪಠಾಣ್ ಔಟಾಗದೆ  02
ಸೌರಭ್ ತಿವಾರಿ ಔಟಾಗದೆ  01
ಇತರೆ: (ಬೈ-1, ವೈಡ್-5)  06
ವಿಕೆಟ್ ಪತನ: 1-7 (ಮಯಾಂಕ್; 1.3), 2-126 (ಗೇಲ್; 15.2), 3-134 (ಕೊಹ್ಲಿ; 16.3), 4-154 (ಮೆಕ್‌ಡೊನಾಲ್ಡ್; 19.1), 5-155 (ಡಿವಿಲಿಯರ್ಸ್; 19.3)
ಬೌಲಿಂಗ್: ಪ್ರವೀಣ್ ಕುಮಾರ್ 4-0-8-0, ರ‌್ಯಾನ್ ಹ್ಯಾರಿಸ್ 2-0-21-1, ಪರ್ವಿಂದರ್ ಅವಾನಾ 4-0-48-0, ಅಜರ್ ಮಹಮೂದ್ 4-0-20-3, ಪಿಯೂಷ್ ಚಾವ್ಲಾ 3-0-35-1, ಅಭಿಷೇಕ್ ನಾಯರ್ 1-0-16-0, ಡೇವಿಡ್ ಹಸ್ಸಿ 2-0-9-0
ಕಿಂಗ್ಸ್ ಇಲೆವೆನ್ ಪಂಜಾಬ್: 19.5 ಓವರ್‌ಗಳಲ್ಲಿ
 6 ವಿಕೆಟ್‌ಗೆ 163
ಮನ್‌ದೀಪ್ ಸಿಂಗ್ ಎಲ್‌ಬಿಡಬ್ಲ್ಯು ಬಿ ಕೆ.ಪಿ. ಅಪ್ಪಣ್ಣ  43
ಶಾನ್ ಮಾರ್ಷ್ ಬಿ ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್  08
ನಿತಿನ್ ಸೈನಿ ಸಿ ವೆಟೋರಿ ಬಿ ಮೆಕ್‌ಡೊನಾಲ್ಡ್  50
ಡೇವಿಡ್ ಹಸ್ಸಿ ರನೌಟ್  45
ಅಜರ್ ಮಹಮೂದ್ ರನೌಟ್  02
ಅಭಿಷೇಕ್ ನಾಯರ್ ರನೌಟ್  02
ಪಾರಸ್ ದೋಗ್ರಾ ಔಟಾಗದೆ  03
ಪಿಯೂಷ್ ಚಾವ್ಲಾ ಔಟಾಗದೆ  06
ಇತರೆ: (ಲೆಗ್‌ಬೈ-2, ವೈಡ್-2)  04
ವಿಕೆಟ್ ಪತನ: 1-38 (ಮಾರ್ಷ್; 4.4), 2-73 (ಮನ್‌ದೀಪ್; 8.5), 3-146 (ಸೈನಿ; 16.2), 4-151    (ಅಜರ್; 17.4), 5-154 (ಹಸ್ಸಿ; 18.4), 6-154 (ನಾಯರ್; 18.5) 
ಬೌಲಿಂಗ್: ಜಹೀರ್ ಖಾನ್ 4-0-31-0, ಆರ್. ವಿನಯ್ ಕುಮಾರ್ 3.5-0-32-0, ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್ 4-0-25-2, ಡೇನಿಯಲ್ ವೆಟೋರಿ 4-0-29-0, ಕೆ.ಪಿ. ಅಪ್ಪಣ್ಣ 3-0-30-1, ಅಸದ್ ಪಠಾಣ್ 1-0-14-0
ಫಲಿತಾಂಶ: ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ 4 ವಿಕೆಟ್ ಗೆಲುವು. ಪಂದ್ಯಶ್ರೇಷ್ಠ: ಅಜರ್ ಮಹಮೂದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT