ADVERTISEMENT

ಕೆಆರ್ಎಸ್‌ನಲ್ಲಿ ಜಲಸಾಹಸ ತರಬೇತಿ ಕೇಂದ್ರ

ಹಿನ್ನೀರಿನಲ್ಲಿ ದಸರಾ ಜಲಸಾಹಸ ವೈಭವ

ಗಿರೀಶದೊಡ್ಡಮನಿ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST
ಕೆಆರ್ಎಸ್ ಹಿನ್ನೀರಿನಲ್ಲಿ ಜಲಸಾಹಸ ತರಬೇತಿ ಕೇಂದ್ರ ಆರಂಭಿಸಲು  ಮಂಗಳವಾರ ಅಧಿಕಾರಿಗಳಾದ ವಿಕಾಸಕುಮಾರ್ ವಿಕಾಸ್ (ಬಲಗಡೆ) ಮತ್ತು  ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿದರು 	–ಪ್ರಜಾವಾಣಿ ಚಿತ್ರ
ಕೆಆರ್ಎಸ್ ಹಿನ್ನೀರಿನಲ್ಲಿ ಜಲಸಾಹಸ ತರಬೇತಿ ಕೇಂದ್ರ ಆರಂಭಿಸಲು ಮಂಗಳವಾರ ಅಧಿಕಾರಿಗಳಾದ ವಿಕಾಸಕುಮಾರ್ ವಿಕಾಸ್ (ಬಲಗಡೆ) ಮತ್ತು ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ಈ ಸಲದ ನಾಡಹಬ್ಬವು ಸಾಹಸ ಕ್ರೀಡಾ ಪ್ರಿಯರಿಗಾಗಿ ಸಿಹಿಸುದ್ದಿ­ಯನ್ನು  ಹೊತ್ತು ತಂದಿದೆ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾದ ಕೃಷ್ಣರಾಜ­ಸಾಗರ (ಕೆಆರ್ಎಸ್) ಜಲಾಶಯದ ಹಿನ್ನೀರಿನಲ್ಲಿ ಶಾಶ್ವತವಾದ ಸಾಹಸ ಕ್ರೀಡಾ ಕೇಂದ್ರ ಆರಂಭವಾಗಲಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಉಂಡವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚಂದ್ರವನ ಹಿನ್ನೀರು ಪ್ರದೇಶದಲ್ಲಿ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ (ಜೆತ್ನಾ) ಈ ಕೇಂದ್ರವನ್ನು ಆರಂಭಿಸಲಿದೆ. ಇದರೊಂದಿಗೆ ಕೊಡಗು ಜಿಲ್ಲೆಯ ಬರಪೊಳೆ, ಕಾರವಾರ ನಗರ ಮತ್ತು ಬೀದರ ಜಿಲ್ಲೆಯ ಕಾರಂಜಾ ಜಲಾಶಯದಲ್ಲಿಯೂ ಒಂದೊಂದು ಕೇಂದ್ರವನ್ನು ತೆರೆಯುವ ಯೋಜನೆ ರೂಪಿಸಲಾಗಿದೆ.

ಈ ಬಾರಿಯ ದಸರಾ ಜಲ ಸಾಹಸ ಕ್ರೀಡೆಗಳನ್ನು ಕೆಆರ್ಎಸ್ ಹಿನ್ನೀರಿನಲ್ಲಿ ಆಯೋಜಿಸಲು ಮತ್ತು ಕೇಂದ್ರದ ಸ್ಥಾಪನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ವಿಕಾಸ ಕುಮಾರ್ ವಿಕಾಸ್, ಜಂಟಿ ನಿರ್ದೇಶಕ ಎಂ.ಎಸ್. ರಮೇಶ್, ಜೆತ್ನಾ ಸಮನ್ವಯಾಧಿಕಾರಿ ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿದರು.

ಕೆಆರ್ಎಸ್ ಹಿನ್ನೀರು ಪ್ರದೇಶದಲ್ಲಿರುವ ತೋಟಗಾರಿಕೆ ಇಲಾಖೆಗೆ ಸೇರಿದ ದ್ವೀಪದಲ್ಲಿ ಜಾಗ ಪಡೆದು ವಾಯು ಸಾಹಸ ಮತ್ತು ಜಲಸಾಹಸ ಕ್ರೀಡಾ ತರಬೇತಿಗೆ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ.

‘ಕೆಆರ್ಎಸ್‌ನಲ್ಲಿ ಯಾಂತ್ರಿಕೃತ ದೋಣಿಗಳ ವಿಹಾರ, ಅಕ್ವಾ ಪ್ಯಾರಾಸೇಲಿಂಗ್, ಸೇಲಿಂಗ್ ನಡೆಸಲು ಉದ್ದೇಶಿಸಲಾಗಿದೆ. ಬರಪೊಳೆಯಲ್ಲಿ ಜಿಲ್ಲಾಡಳಿತವು ಈಗಾಗಲೇ ನಮ್ಮ ಇಲಾಖೆಗೆ ಎರಡು ಎಕರೆ ಜಮೀನು ಮಂಜೂರು ಮಾಡಿದ್ದು, ರಿವರ್ ರಾಫ್ಟಿಂಗ್ ನಡೆಸಲು ಉದ್ದೇಶಿಸಲಾ­ಗಿದೆ. ಈ ಕುರಿತು ಸರ್ಕಾರಕ್ಕೆ ನೀಡಲು ವರದಿ ಸಿದ್ಧಪಡಿಸಲಾಗುತ್ತಿದೆ. ವೆಚ್ಚದ ಕುರಿತು ಇನ್ನೂ ನಿರ್ಧರಿಸಬೇಕಾಗಿದೆ’ ಎಂದು ಜಂಟಿ ನಿರ್ದೇಶಕ ಎಂ.ಎಸ್. ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚಂದ್ರವನದಲ್ಲಿ ಈಗಾಗಲೇ ಒಂದು ಬಾರಿ ಜೆತ್ನಾ 2000 ಅಭ್ಯರ್ಥಿಗಳಿಗೆ ತರಬೇತಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿತ್ತು. ಈಗ ಶಾಶ್ವತ ತರಬೇತಿ ಕೇಂದ್ರ ಸ್ಥಾಪಿಸಿ, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶ ಮತ್ತು ಅರಣ್ಯ ಪ್ರದೇಶಗಳಲ್ಲಿರುವ ಆದಿವಾಸಿ ಜನಾಂಗದ ಪ್ರತಿಭಾನ್ವಿತರನ್ನು ಗುರುತಿಸಿ ತರಬೇತಿ ನೀಡುವ ಉದ್ದೇಶವಿದೆ ಎಂದು ಮೂಲಗಳು ಹೇಳುತ್ತವೆ.

50 ಜನರು ಉಳಿದುಕೊಳ್ಳುವಂತಹ ಒಂದು ಸುಸಜ್ಜಿತ ವಸತಿ ಭವನ, ಗಣ್ಯರಿಗೆ ವಸತಿ ವ್ಯವಸ್ಥೆ, ಶೌಚಾಲ­ಯಗಳು, ಊಟದ ಮನೆಯನ್ನು ನಿರ್ಮಿಸಲಾಗುವುದು. ಅಲ್ಲದೇ ಪ್ರತಿಯೊಂದು ಕೇಂದ್ರಕ್ಕೂ ತಲಾ 20 ಮಂದಿ ಸಿಬ್ಬಂದಿಯನ್ನು ನೀಡಲಾ­ಗುವುದು.

ದಸರೆಯಲ್ಲಿ ಸ್ಪೀಡ್ ಬೋಟ್: ಈ ಬಾರಿಯ ದಸರ ಜಲಸಾಹಸ ಕ್ರೀಡೆಯಲ್ಲಿ ಮೊದಲ ಬಾರಿಗೆ ‘ಸ್ಪೀಡ್ ಬೋಟ್’ ಪ್ರಮುಖ ಆಕರ್ಷಣೆ­ಯಾಗಲಿದೆ. ಎರಡು ಸ್ಥಳಗಳಲ್ಲಿ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸುತ್ತಿ­ರುವುದೂ ಈ ವಿಶೇಷ. ಪ್ರತಿ ವರ್ಷವೂ ನಂಜನಗೂಡು ತಾಲ್ಲೂಕಿನ ವರುಣಾ ಕೆರೆಯಲ್ಲಿ ಆಯೋಜಿಸಲಾಗುತಿತ್ತು. ಈ ಸಲ ವರುಣಾ ಮತ್ತು ಕೆಆರ್ಎಸ್ ಹಿನ್ನೀರಿನಲ್ಲಿಯೂ ಆಯೋಜಿಸ­ಲಾಗುತ್ತಿದೆ.

‘ನಮ್ಮ ಇಲಾಖೆಯಿಂದ ಈ ಬಾರಿ ಎರಡು ಸ್ಪೀಡ್ ಬೋಟ್ ಗಳನ್ನು ಖರೀದಿಸಲಾಗಿದೆ. ಅಲ್ಲದೇ ಅಕ್ವಾ ಪ್ಯಾರಾ­ಸೇಲಿಂಗ್ ಕೂಡ ನಡೆಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ಬನಾನಾ ರೈಡ್, ಕಯಾಕಿಂಗ್, ಜೆಟ್ ಸ್ಕೀ ಇರಲಿದ್ದು, ಮಂಡಕಳ್ಳಿಯ ವಿಮಾನ ನಿಲ್ದಾಣದಲ್ಲಿ ಅವಕಾಶ ಸಿಕ್ಕರೆ ಪ್ಯಾರಾಸೇಲಿಂಗ್ ಮತ್ತು ಪವರ್ ಹ್ಯಾಂಗ್‌ಗ್ಲೈಡಿಂಗ್ ಕೂಡ ನಡೆಸಲಾಗು­ವುದು. ಒಟ್ಟು 50 ಲಕ್ಷ ರೂಪಾಯಿ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದ್ದು, ಎಷ್ಟು ಸಿಗುತ್ತದೆ ಎಂಬ ಬಗ್ಗೆ ತಿಳಿದು ಬಂದಿಲ್ಲ’ ಎಂದು ರಮೇಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.