ADVERTISEMENT

`ಕೆಕೆಆರ್ ತಂಡದ ಮಾಹಿತಿ ಪಡೆಯಲು ಪ್ರಯತ್ನಿಸಿದ್ದ ವಿಂದು'

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 20:08 IST
Last Updated 3 ಜೂನ್ 2013, 20:08 IST
ಬೆಟ್ಟಿಂಗ್ ಪ್ರಕರಣದ ಆರೋಪಿಗಳಾದ ವಿಂದು ದಾರಾಸಿಂಗ್ ಹಾಗೂ ಗುರುನಾಥ್‌ಮೇಯಪ್ಪನ್ ಅವರನ್ನು ಸೋಮವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು
ಬೆಟ್ಟಿಂಗ್ ಪ್ರಕರಣದ ಆರೋಪಿಗಳಾದ ವಿಂದು ದಾರಾಸಿಂಗ್ ಹಾಗೂ ಗುರುನಾಥ್‌ಮೇಯಪ್ಪನ್ ಅವರನ್ನು ಸೋಮವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು   

ಮುಂಬೈ (ಪಿಟಿಐ): ಐಪಿಎಲ್‌ನಲ್ಲಿ ಬೆಟ್ಟಿಂಗ್ ನಡೆಸಿದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ವಿಂದು ರಾಂಧವ, ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಕೆಲವು ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸಿದ್ದರು ಎಂಬುದು ತನಿಖೆಯ ವೇಳೆ ಬಯಲಾಗಿದೆ.

ಕೆಕೆಆರ್ ತಂಡದ `ಸಿಇಒ' ವೆಂಕಿ ಅವರಿಂದ ವಿಂದು ಕೆಲವೊಂದು ಮಾಹಿತಿಗಳನ್ನು ಪಡೆಯಲು ಮುಂದಾಗಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

`ವೆಂಕಿ ಅವರ ಮೂಲಕ ಕೆಕೆಆರ್ ತಂಡದ ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸಿದ್ದೆ ಎಂದು ವಿಂದು ತನಿಖೆಯ ವೇಳೆ ತಿಳಿಸಿದ್ದಾರೆ. ಆದರೆ ಅವರಿಗೆ ನೈಟ್ ರೈಡರ್ಸ್ ತಂಡದ ಯಾವುದೇ ಮಾಹಿತಿ ಲಭಿಸಲಿಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. `ವೆಂಕಿ ಅವರನ್ನು ಸದ್ಯಕ್ಕೆ ವಿಚಾರಣೆಗೆ ಒಳಪಡಿಸುವುದಿಲ್ಲ' ಎಂದು ಇನ್ನೊಬ್ಬರು ಅಧಿಕಾರಿ ಹೇಳಿದ್ದಾರೆ.

ರಾಜಸ್ತಾನ ರಾಯಲ್ಸ್ ತಂಡದ ಆಟಗಾರ ಅಜಿತ್ ಚಾಂಡಿಲ ಅವರು ಐಪಿಎಲ್‌ನ ಮೊದಲ ಕೆಲವು ಪಂದ್ಯಗಳಲ್ಲಿ `ಸ್ಪಾಟ್ ಫಿಕ್ಸಿಂಗ್' ನಡೆಸುವುದಿಲ್ಲ ಎಂದು ಬುಕ್ಕಿಗಳಿಗೆ ತಿಳಿಸಿರುವುದಾಗಿ ವಿಚಾರಣೆ ವೇಳೆ ಬಹಿರಂಗವಾಗಿದೆ.

ಉತ್ತಮ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಅವರು ಹೀಗೆ ಹೇಳಿದ್ದರು. ದೆಹಲಿ ಮೂಲದ `ಸೂಪರ್ ಬುಕ್ಕಿ' ಅಶ್ವಿನ್ ಅಗರ್‌ವಾಲ್ (ಟಿಂಕು ಡೆಲ್ಲಿ) ಪಾಕಿಸ್ತಾನದ ಬುಕ್ಕಿ ಜಾವೇದ್ ಚೋಟಾನಿ ಅವರನ್ನು ಭೇಟಿಯಾಗಲು ಮೂರು ಸಲ ದುಬೈಗೆ ಪ್ರಯಾಣಿಸಿದ್ದರು ಎಂಬ ಅಂಶ ಕೂಡಾ ಬೆಳಕಿಗೆ ಬಂದಿದೆ.

ಇದೇ ವೇಳೆ, ಮುಂಬೈನ ನ್ಯಾಯಾಲಯ ವಿಂದು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ `ಸಿಇಒ' ಗುರುನಾಥ್ ಮೇಯಪ್ಪನ್ ಅವರನ್ನು ಜೂನ್ 14ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಜಗದಾಳೆ, ರಾಮನ್ ವಿಚಾರಣೆ: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಲು ದೆಹಲಿ ಪೊಲೀಸ್‌ನ ವಿಶೇಷ ಘಟಕ  ಬಿಸಿಸಿಐ  ಕಾರ್ಯದರ್ಶಿ ಸಂಜಯ್ ಜಗದಾಳೆ ಹಾಗೂ ಐಪಿಎಲ್‌ನ ಅಧಿಕಾರಿ ಸುಂದರ್ ರಾಮನ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಅವರಿಂದ ಲಿಖಿತ ಹೇಳಿಕೆಯನ್ನು ಕೂಡ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.