ADVERTISEMENT

ಕೆಪಿಎಲ್‌ಗೆ ಮತ್ತೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಭವಿಷ್ಯದ ಬಗ್ಗೆ ಎದ್ದಿದ್ದ ಅನಿಶ್ಚತತೆಗೆ ತೆರೆಬಿದ್ದಿದೆ. ವಿವಿಧ ಕಾರಣಗಳಿಂದಾಗಿ 2011 ರಲ್ಲಿ ಈ ಟೂರ್ನಿ ನಡೆದಿರಲಿಲ್ಲ. ಪ್ರಸಕ್ತ ಋತುವಿನಲ್ಲಿ ಲೀಗ್‌ಗೆ ಮತ್ತೆ ಚಾಲನೆ ಲಭಿಸಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮತ್ತು ಕೆಪಿಎಲ್ ಫ್ರಾಂಚೈಸಿಗಳ ಪ್ರತಿನಿಧಿಗಳ ನಡುವೆ ಮಂಗಳವಾರ ನಡೆದ ಸಭೆಯ ಬಳಿಕ ಈ ನಿರ್ಧಾರ ಹೊರಬಿದ್ದಿದೆ. `ಆದರೆ ಮೂರನೇ ಅವತರಣಿಕೆಯ ಟೂರ್ನಿ ಯಾವ ತಿಂಗಳಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಸಭೆಯಲ್ಲಿ ಸ್ಪಷ್ಟ ತೀರ್ಮಾನ ಹೊರಬಿದ್ದಿಲ್ಲ~ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ನುಡಿದರು. ಕೆಎಸ್‌ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ಆರು ಫ್ರಾಂಚೈಸಿಗಳ ಪ್ರತಿನಿಧಿಗಳು ಮಾತ್ರ ಸಭೆಗೆ ಆಗಮಿಸಿದ್ದರು. ಬೆಂಗಳೂರು ಬ್ರಿಗೇಡಿಯರ್ಸ್ ಮತ್ತು ಶಾಮನೂರು ದಾವಣಗೆರೆ ಡೈಮಂಡ್ಸ್ ತಂಡಗಳ ಪ್ರತಿನಿಧಿಗಳು ಹಾಜರಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

`ಆರು ಫ್ರಾಂಚೈಸಿಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದವು. ಕೆಪಿಎಲ್ ಮೂರನೇ ಋತುವಿನ ಟೂರ್ನಿಯನ್ನು ನಡೆಸಲು ಎಲ್ಲರೂ ಒಪ್ಪಿಕೊಂಡಿದ್ದಾರೆ~ ಎಂದು ಶ್ರೀನಾಥ್ ಹೇಳಿದರು.

`ಟೂರ್ನಿಯ ದಿನಾಂಕದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಕೆಲವು ಫ್ರಾಂಚೈಸಿಗಳು ಐಪಿಎಲ್‌ಗೆ ಮುನ್ನವೇ ಕೆಪಿಎಲ್ ನಡೆಸುವುದರತ್ತ ಒಲವು ತೋರಿವೆ. ಪ್ರಚಾರ ಹಾಗೂ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಒಂದು ತೀರ್ಮಾನ ಕೈಗೊಳ್ಳಲು ಹೆಚ್ಚಿನ ಕಾಲಾವಧಿ ಬೇಕು ಎಂಬುದು ಇನ್ನೊಂದು ಗುಂಪಿನ ನಿಲುವು. ಹಾಗಾದಲ್ಲಿ ಟೂರ್ನಿ ಜೂನ್- ಜುಲೈ ತಿಂಗಳಲ್ಲಿ ನಡೆಯಬಹುದು. ಇನ್ನೊಂದು ಸುತ್ತಿನ ಮಾತುಕತೆಯ ಬಳಿಕ ಟೂರ್ನಿಯ ದಿನಾಂಕವನ್ನು ನಿರ್ಧರಿಸುವೆವು~ ಎಂದು ತಿಳಿಸಿದರು.

ಕೆಪಿಎಲ್‌ನ ಪಂದ್ಯಗಳು ಈ ಬಾರಿ ಕರ್ನಾಟಕದ ಇತರ ಭಾಗಗಳಲ್ಲೂ ನಡೆಯಲಿವೆ ಎಂಬುದನ್ನು ಖಚಿತಪಡಿಸಿದ ಶ್ರೀನಾಥ್, `ಕ್ರಿಕೆಟ್‌ನ್ನು ರಾಜ್ಯದ ಮೂಲೆ ಮೂಲೆಗೂ ಕೊಂಡೊಯ್ಯುವುದು ಈ ಲೀಗ್‌ನ ಪ್ರಮುಖ ಉದ್ದೇಶವಾಗಿತ್ತು. ಈ ಬಾರಿ ಪಂದ್ಯಗಳು ಬೆಂಗಳೂರಿನಲ್ಲಿ ಮಾತ್ರವಲ್ಲದೆ, ಇತರ ನಗರಗಳಲ್ಲೂ ನಡೆಯಲಿವೆ~ ಎಂದರು.

`ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ರಣಜಿ ಪಂದ್ಯಕ್ಕೆ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಲಭಿಸಿತ್ತು. ಗ್ರಾಮೀಣ ಭಾಗದಲ್ಲಿ ಕ್ರಿಕೆಟ್ ಜನಪ್ರಿಯವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.