ADVERTISEMENT

ಕೆಬಿಎಲ್: ಅರಾತ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2011, 19:30 IST
Last Updated 14 ನವೆಂಬರ್ 2011, 19:30 IST
ಕೆಬಿಎಲ್:  ಅರಾತ್‌ಗೆ ಗೆಲುವು
ಕೆಬಿಎಲ್: ಅರಾತ್‌ಗೆ ಗೆಲುವು   

ಬೆಂಗಳೂರು: ಸಿಂಗಲ್ಸ್ ಪಂದ್ಯಗಳಲ್ಲಿ  ಪಡೆದ ಗೆಲುವಿನ ಬಲದ ನೆರವಿನಿಂದ ಅರಾತ್ ಫೈಟರ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಚೊಚ್ಚಲ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್‌ನ (ಕೆಬಿಎಲ್)ನಲ್ಲಿ ಮಿಂಚಿದರು. ಇದರಿಂದ 4-1ರಲ್ಲಿ ಲೀ ಲೀ ನಿಂಗ್ ಲಾಯನ್ಸ್ ತಂಡದ ಎದುರು ಭರ್ಜರಿ ವಿಜಯ.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕೋರ್ಟ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಅರಾತ್ ತಂಡದ ರೋಹನ್ ಕ್ಯಾಸ್ಟಲಿನೊ ಆರಂಭಿಕ ಮುನ್ನಡೆ ತಂದು ಕೊಟ್ಟರು. ಈ ಆಟಗಾರ 21-7, 21-23, 21-6ರಲ್ಲಿ ಯುವ ಆಟಗಾರ ಬಿ.ಆರ್. ಸಂಕೀರ್ತ್ ಅವರನ್ನು ಸೋಲಿಸಿದರು. ಮೊದಲ ಗೇಮ್‌ನಲ್ಲಿ ಸುಲಭ ಮುನ್ನಡೆ ಪಡೆದರೂ, ದ್ವಿತೀಯ ಗೇಮ್‌ನಲ್ಲಿ ಸೋಲು ಕಂಡರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ವಿಜಯದ ವೇದಿಕೆ ಮೇಲೆ ಸಂಭ್ರಮಿಸುವ ಅವಕಾಶ ಸಿಕ್ಕಿದ್ದು ರೋಹನ್‌ಗೆ.

ಆರಾತ್ ತಂಡದ ಜಾಕ್ವೆಲಿನ್ ಕುನ್ನತ್ 21-16, 21-18ರಲ್ಲಿ ಜಮುನಾ ರಾಣಿ ವಿರುದ್ಧ ಗೆಲುವು ಪಡೆದರು. ಇದರಿಂದ ಗೆಲುವಿನ ಅಂತರ 2-0 ಆಯಿತು. ಮಿಶ್ರ ಡಬಲ್ಸ್‌ನಲ್ಲಿ ಹರ್ಷಿತ್ ಅಗರವಾಲ್-ಜಿ.ಎಂ. ಅನುಷಾ ಅವರು ವೆಂಕಟೇಶ್ ಪ್ರಸಾದ್-ನಿತ್ಯಾ ಸೋಸಲೆ ಜೋಡಿ ಎದುರು ಸೋಲು ಕಂಡಿತು. ಆಗ ಲಾಯನ್ಸ್ ತಂಡಕ್ಕೆ ಮೊದಲ ಗೆಲುವಿನ ಸಿಂಚನ.

ಆದರೆ, ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಡಬಲ್ಸ್‌ನಲ್ಲಿ ಕಮಲದೀಪ್ ಸಿಂಗ್ 21-17, 21-12ರಲ್ಲಿ ಇರ್ಷಾದ್ ಖಾನ್ ಅವರನ್ನು ಸೋಲಿಸಿದರು. ಆಗಲೇ ಅರಾತ್ ತಂಡ 3-1ರಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಕೊನೆಯ ಪಂದ್ಯದಲ್ಲಿ ಮತ್ತೆ ಗೆಲುವು ಲಭಿಸಿದ್ದು ಅರಾತ್ ತಂಡಕ್ಕೆ. ಆದ್ದರಿಂದ ಈ ಅಂತರ 4-1ಕ್ಕೆ ಏರಿತು. ಎಂ.ಕೆ. ಗೋವಿಂದ್-ನವೀನ್ ಉಭಯಂಕರ್ ಜೋಡಿ 21-17, 21-14ರಲ್ಲಿ ಅಭಿನಂದ ಶೆಟ್ಟಿ-ಆದರ್ಶ ಕುಮಾರ್ ಅವರನ್ನು ಮಣಿಸಿ ಸಂಭ್ರಮಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.