ADVERTISEMENT

ಕೊಕ್ಕೊ: ಫೈನಲ್‌ಗೆ ಕರ್ನಾಟಕ ತಂಡ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST
ಕೊಕ್ಕೊ: ಫೈನಲ್‌ಗೆ ಕರ್ನಾಟಕ ತಂಡ
ಕೊಕ್ಕೊ: ಫೈನಲ್‌ಗೆ ಕರ್ನಾಟಕ ತಂಡ   

ಬೆಂಗಳೂರು: ಸ್ಥಿರ ಪ್ರದರ್ಶನ ಮುಂದುವರಿಸಿರುವ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ 23ನೇ ರಾಷ್ಟ್ರೀಯ ಸಬ್ ಜೂನಿಯರ್ ಕೊಕ್ಕೊ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.

ಹೊಂಬೇಗೌಡ ಕ್ರೀಡಾಂಗಣದಲ್ಲಿ ಬುಧವಾರ ನಡೆದ ರೋಚಕ ಸೆಮಿಫೈನಲ್‌ನಲ್ಲಿ ಕರ್ನಾಟಕ ಏಕೈಕ ಪಾಯಿಂಟ್‌ನಿಂದ ಪಶ್ಚಿಮ ಬಂಗಾಳ ತಂಡವನ್ನು ಪರಾಭವಗೊಳಿಸಿತು. ಆತಿಥೇಯ ತಂಡ 12 ಪಾಯಿಂಟ್ ಗಳಿಸಿದರೆ, ಎದುರಾಳಿ ಪಶ್ಚಿಮ ಬಂಗಾಳ 11 ಪಾಯಿಂಟ್ ಕಲೆಹಾಕಿತು.

 ಇದಕ್ಕೂ ಮೊದಲು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ಇನಿಂಗ್ಸ್ ಹಾಗೂ 6 ಪಾಯಿಂಟ್‌ಗಳಿಂದ ಮಣಿಪುರ ತಂಡವನ್ನು ಸೋಲಿಸಿತ್ತು. ವಿಜಯಿ ತಂಡ 13 ಪಾಯಿಂಟ್ ಗಳಿಸಿದರೆ, ಮಣಿಪುರ ಕೇವಲ ಏಳು ಪಾಯಿಂಟ್ ಪಡೆಯಿತು. 

ಕರ್ನಾಟಕ ತಂಡದವರು ಗುರುವಾರ ನಡೆಯಲಿರುವ ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಮಹಾರಾಷ್ಟ್ರ ತಂಡ ಒಂದು ಪಾಯಿಂಟ್‌ನಿಂದ ಕೇರಳ ತಂಡವನ್ನು ಸೋಲಿಸಿತು.

ಇದೇ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ನಿರಾಸೆ ಅನುಭವಿಸಿತು. ಸೆಮಿಫೈನಲ್‌ನಲ್ಲಿ ಪಶ್ಚಿಮ ಬಂಗಾಳ ತಂಡ ಮೂರು ಪಾಯಿಂಟ್‌ಗಳಿಂದ ಕರ್ನಾಟಕ ತಂಡವನ್ನು ಮಣಿಸಿತು. ಇದಕ್ಕೂ ಮೊದಲು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ಒಂದು ಪಾಯಿಂಟ್‌ನಿಂದ ಆಂಧ್ರ ತಂಡವನ್ನು ಸೋಲಿಸಿ ನಾಲ್ಕರ ಘಟ್ಟ ತಲುಪಿತ್ತು. ಈ ವಿಭಾಗದಲ್ಲಿ ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ ಫೈನಲ್ ತಲುಪಿವೆ.

ಫೆಡರೇಷನ್ ಕಪ್ ಪುರುಷರ ವಿಭಾಗದ ಲೀಗ್ ಪಂದ್ಯದಲ್ಲಿ ಕರ್ನಾಟಕ ಮಿಶ್ರ ಫಲ ಅನುಭವಿಸಿತು. ಮೊದಲ ಪಂದ್ಯದಲ್ಲಿ ಕೊಲ್ಲಾಪುರ ತಂಡ ಎರಡು ಪಾಯಿಂಟ್‌ಗಳಿಂದ ಆತಿಥೇಯರಿಗೆ ಶಾಕ್ ನೀಡಿತು. ಆದರೆ ನಂತರದ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್ ಹಾಗೂ 16 ಪಾಯಿಂಟ್‌ಗಳಿಂದ ಪಂಜಾಬ್ ತಂಡವನ್ನು ಪರಾಭವಗೊಳಿಸಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT