ADVERTISEMENT

ಕೊಹ್ಲಿ, ಗೇಲ್‌, ಡಿವಿಲಿಯರ್ಸ್‌ ಸ್ಥಾನ ಗಟ್ಟಿ

ಐಪಿಎಲ್‌: ಮೂವರು ಆಟಗಾರರನ್ನು ತನ್ನಲ್ಲೇ ಉಳಿಸಿಕೊಳ್ಳಲು ಆರ್‌ಸಿಬಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಏಳನೇ ಆವೃತ್ತಿಗೆ ಈ ವರ್ಷ ಹೊಸದಾಗಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ವಿರಾಟ್‌ ಕೊಹ್ಲಿ, ಕ್ರಿಸ್‌ ಗೇಲ್‌ ಹಾಗೂ ಎಬಿ ಡಿವಿಲಿಯರ್ಸ್‌ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಆಡಳಿತ ನಿರ್ಧರಿಸಿದೆ.

ಬಿಸಿಸಿಐ ಈ  ಮೊದಲು ಸೂಚಿಸಿ ದಂತೆ ಪ್ರತಿ ಫ್ರಾಂಚೈಸ್‌ ತಲಾ ಐವರು ಆಟಗಾರರನ್ನು ಉಳಿಸಿಕೊಳ್ಳಬಹುದು. ಆ ಆಟಗಾರರ ಪಟ್ಟಿ  ನೀಡಲು ಶುಕ್ರ ವಾರ ಅಂತಿಮ ದಿನ. ಯಾವ ಆಟ ಗಾರರನ್ನು ಉಳಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿ ಹೆಚ್ಚಿನ ಫ್ರಾಂಚೈಸ್‌ ಗಳಿವೆ. ಆದರೆ ಒಂದು ಹೆಜ್ಜೆ ಮುಂದಿ ಟ್ಟಿರುವ ಆರ್‌ಸಿಬಿ ತನ್ನ ಪಟ್ಟಿಯನ್ನು ಗುರುವಾರವೇ ಅಂತಿಮಗೊಳಿಸಿದೆ.

ಫೆಬ್ರುವರಿ 12ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು ಆಟಗಾರರನ್ನು ಖರೀದಿಸಲು ಪ್ರತಿ ಫ್ರಾಂಚೈಸ್‌ ರೂ 60 ಕೋಟಿ ವೆಚ್ಚ ಮಾಡಬಹುದು. ಆ ವೆಚ್ಚ ರೂ 36 ಕೋಟಿಗಿಂತ ಹೆಚ್ಚಿರಬೇಕು. ಆದರೆ      ರೂ 60 ಕೋಟಿ ಹಣದಲ್ಲಿ ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರಿಗೆ ಪ್ರತಿ ಫ್ರಾಂಚೈಸ್‌ ಕ್ರಮವಾಗಿ ರೂ 12.5 ಕೋಟಿ, ರೂ 9.5 ಕೋಟಿ, ರೂ 7.5 ಕೋಟಿ, ರೂ 5.5 ಕೋಟಿ ಹಾಗೂ ರೂ 4 ಕೋಟಿ ನೀಡಬೇಕು. ಇನ್ನುಳಿದ ಹಣವನ್ನು ಮಾತ್ರ ಹರಾಜಿನಲ್ಲಿ ವ್ಯಯಿಸಬೇಕು. ಪ್ರತಿ ತಂಡ ಗರಿಷ್ಠ 27 ಹಾಗೂ ಕನಿಷ್ಠ 16 ಆಟಗಾರರನ್ನು ಖರೀದಿಸಬೇಕು.

ವಿರಾಟ್‌, ಗೇಲ್‌ ಹಾಗೂ ಡಿವಿಲಿಯರ್ಸ್‌ ಅವರನ್ನು ತನ್ನಲ್ಲೇ ಉಳಿಸಿಕೊಂಡಿರುವುದರಿಂದ ಆರ್‌ಸಿಬಿ ಆಡಳಿತದ ಒಟ್ಟು ಮೊತ್ತದಲ್ಲಿ ಈಗಾಗಲೇ ರೂ 29.5 ಕೋಟಿ ಹಣ ಖರ್ಚಾಗಿದೆ. ಹಾಗಾಗಿ ಉನ್ನುಳಿದ ಆಟಗಾರರನ್ನು ಖರೀದಿಸಲು ಈ ತಂಡದ ಬಳಿ ಈಗ ರೂ 30.5 ಕೋಟಿ ಹಣವಿದೆ.

‘ಬೆಂಗಳೂರು ನನ್ನ ಪಾಲಿಗೆ ಎರಡನೇ ಮನೆ ಇದ್ದಂತೆ. ಆರ್‌ಸಿಬಿ ಆಡಳಿತವು ನನ್ನನ್ನು ತಂಡದಲ್ಲಿ ಉಳಿಸಿಕೊಂಡಿರುವುದು ಖಂಡಿತ ನನಗೆ ಖುಷಿ ನೀಡಿದೆ. ಇದೊಂದು ನನಗೆ ಲಭಿಸಿದ ಗೌರವ ಕೂಡ. ಆರ್‌ಸಿಬಿ ಹಾಗೂ ಅಭಿಮಾನಿಗಳು ನನ್ನ ಮೇಲಿಟ್ಟಿ ರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ಕೊಹ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿರಾಟ್‌ ತಂಡದ ನಾಯಕರಾಗಿ ಮುಂದುವರಿಯುವುದು ಬಹುತೇಕ ಖಚಿತ. ಈ ತಂಡದ ಮಾಜಿ ನಾಯಕ ಡೇನಿಯಲ್‌ ವೆಟೋರಿ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಲಾಗಿದೆ. ದಕ್ಷಿಣ ಆಫ್ರಿಕಾದ ಅಲನ್‌ ಡೊನಾಲ್ಡ್‌ ಬೌಲಿಂಗ್‌ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಟ್ರೆಂಟ್‌ ವುಡ್‌ಹಿಲ್‌ ಅವರನ್ನು ಬ್ಯಾಟಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ.

ಮೂರು ವರ್ಷಗಳಿಂದ ತಂಡದಲ್ಲಿರುವ ಗೇಲ್‌ ಆಕ್ರಮಣಕಾರಿ ಆಟದ ಮೂಲಕ ಅಭಿಮಾನಿಗಳ ನೆಚ್ಚಿನ ಆಟಗಾರ ಎನಿಸಿದ್ದಾರೆ. ಹೋದ ಆವೃತ್ತಿ ಯಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ದಾಖಲಿಸಿದ್ದರು. ಡಿವಿಲಿಯರ್ಸ್‌ ಕೂಡ ಬಿರುಸಿನ ಆಟದ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮನ್ನು ತಂಡದಲ್ಲಿ ಉಳಿಸಿಕೊಂಡಿರುವುದಕ್ಕೆ ಈ ಆಟಗಾರರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ.

ಈ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿರುವ ವಿಷಯವನ್ನು ಆರ್‌ಸಿಬಿ ಮಾಲೀಕ ವಿಜಯ ಮಲ್ಯ ಖಚಿತಪಡಿಸಿದ್ದಾರೆ.

‘ಆರ್‌ಸಿಬಿ ಯಶಸ್ಸಿನಲ್ಲಿ ಈ ಮೂವರು ಆಟಗಾರರು ಮಹತ್ವದ ಪಾತ್ರ ನಿಭಾಯಿಸಿದ್ದಾರೆ. ಇವರೆಲ್ಲಾ ಪಂದ್ಯ ಗೆದ್ದುಕೊಡಬಲ್ಲ ಆಟಗಾರರು. ಬಲಿಷ್ಠ ತಂಡ ಕಟ್ಟಲು ಇವರನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದಿದ್ದಾರೆ.

                                   ಪ್ರತಿಕ್ರಿಯೆಗಳು
ಆರ್‌ಸಿಬಿ ತಂಡದಲ್ಲೇ ಆಡಲು ಮತ್ತೆ ಅವಕಾಶ ಸಿಕ್ಕಿದೆ. ಕಣಕ್ಕಿಳಿಯಲು ಕುತೂಹಲದಿಂದ ಕಾಯುತ್ತಿದ್ದೇನೆ. ನಿಮ್ಮ ಪ್ರೀತಿ ಹಾಗೂ ಒಲವಿಗೆ ಧನ್ಯವಾದ.

–ಕ್ರಿಸ್‌ ಗೇಲ್‌ (ಟ್ವಿಟರ್‌ನಲ್ಲಿ)

ಮೂರು ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿದ್ದೆ. ಆ ತಂಡದಲ್ಲೇ ಮುಂದುವರಿಯಲು ಮತ್ತೆ ಅವಕಾಶ ಲಭಿಸಿದೆ. ಈ ಅವಕಾಶ ತುಂಬಾ ಖುಷಿ ನೀಡಿದೆ. ಉತ್ತಮ ಫಲಿತಾಂಶಕ್ಕಾಗಿ ಕಠಿಣ ಪ್ರಯತ್ನ ಹಾಕುತ್ತೇನೆ.
–ಡೇನಿಯಲ್‌ ವೆಟೋರಿ, ನೂತನ ಕೋಚ್‌

ಆರ್‌ಸಿಬಿ ಹಾಗೂ ಬೆಂಗಳೂರಿನ ಬಗ್ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ತಂಡದ ಯಶಸ್ಸಿಗೆ ಶ್ರಮಿಸುತ್ತೇನೆ.
–ಎಬಿ ಡಿವಿಲಿಯರ್ಸ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.