ADVERTISEMENT

ಕೌಂಟರ್ ತೆರೆಯುವಲ್ಲಿನ ವಿಳಂಬ ನೂಕುನುಗ್ಗಲಿಗೆ ಕಾರಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:05 IST
Last Updated 24 ಫೆಬ್ರುವರಿ 2011, 18:05 IST

ಬೆಂಗಳೂರು: ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಫೆಬ್ರುವರಿ 27ರಂದು ನಡೆಯು ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟಕ್ಕೆ ನಿಗದಿ ಮಾಡಿದ್ದ ಸಮಯಕ್ಕೆ ತೆರೆಯದಿದ್ದ ಕಾರಣ ನೂಕುನುಗ್ಗಲು ಹೆಚ್ಚಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯು ಟಿಕೆಟ್ ಮಾರಾಟವು ನಾಲ್ಕು, ಐದು ಹಾಗೂ ಏಳನೇ ನಂಬರ್ ಕೌಂಟರ್‌ನಲ್ಲಿ ಗುರುವಾರ ಬೆಳಿಗ್ಗೆ ಎಂಟು ಗಂಟೆಗೆ ತೆರೆಯುತ್ತವೆ ಎಂದು ಪ್ರಕಟಿಸಿತ್ತು. ಆದರೆ ಒಂಬತ್ತುವರೆ ಹೊತ್ತಿಗೂ ಟಿಕೆಟ್ ಆರಂಭವಾಗಲಿಲ್ಲ. ಆಗ ಸಾಲಿನಲ್ಲಿದ್ದ ಕ್ರಿಕೆಟ್ ಪ್ರೇಮಿಗಳು ಅಸಮಾಧಾನದಿಂದ ತಳ್ಳಾಟ ಆರಂಭಿಸಿದರು.

ಇದರಿಂದಾಗಿ ನೂಕುನುಗ್ಗಲು ಉಂಟಾಯಿತು. ಆಗ ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡುವುದು ಅನಿವಾರ್ಯವಾಯಿತೆಂದು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಜಿ.ರಮೇಶ್ ಅವರು ಸ್ಪಷ್ಟಪಡಿಸಿದ್ದಾರೆ.ಜನರ ಸಾಲು ಗೇಟ್ ನಂಬರ್ ಇಪ್ಪತ್ತರವರೆಗೂ ಇತ್ತು. ಜನದಟ್ಟಣೆ ಹೆಚ್ಚಿದಂತೆ ಕೌಂಟರ್‌ಗಳು ತೆರೆದುಕೊಳ್ಳುವುದೆಲ್ಲಿ ಎನ್ನುವಲ್ಲಿಯೂ ಗೊಂದಲ ಮೂಡಿತು. ಆಗ ಹನ್ನೊಂದನೇ ಗೇಟ್ ಕಡೆಯಿಂದಲೂ ಭಾರಿ ಸಂಖ್ಯೆಯಲ್ಲಿ ಯುವಕರು ನುಗ್ಗತೊಡಗಿದರು.

ಅಂದಾಜು ಮೂವತ್ತು ಸಾವಿರ ಜನರು ಟಿಕೆಟ್‌ಗಾಗಿ ಕಾಯ್ದಿದ್ದರು. ಆದ್ದರಿಂದ ಸಾಲಿನಲ್ಲಿ ಸಾಗುವಂತೆ ಮಾಡುವುದೂ ಕಷ್ಟವಾಯಿತು. ಸಾವಿರಾರು ಸಂಖ್ಯೆಯಲ್ಲಿ ಕ್ರಿಕೆಟ್ ಪ್ರಿಯರು ಮಧ್ಯದಲ್ಲಿ ನುಗ್ಗಿಕೊಂಡು ಬಂದಾಗ ಅವರನ್ನು ನಿಯಂತ್ರಿಸಲು ಬಲ ಪ್ರಯೋಗ ಮಾಡಲಾಯಿತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.