ADVERTISEMENT

ಕ್ಯಾಚ್ ಬಿಟ್ಟಿದ್ದನ್ನು ಸಮರ್ಥಿಸಿಕೊಂಡ ಕೋಚ್

ಸ್ಲಿಪ್‌ನಲ್ಲಿ ಪೂಜಾರ ಫೀಲ್ಡಿಂಗ್; ಗಾವಸ್ಕರ್ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ಕೋಲ್ಕತ್ತ: ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಪಂದ್ಯದ್ಲ್ಲಲಿ 17 ರನ್ ಗಳಿಸಿದ್ದಾಗ ಅಲಸ್ಟೇರ್ ಕುಕ್ ನೀಡಿದ ಕ್ಯಾಚ್ ಪಡೆದಿದ್ದರೆ ಭಾರತ ತಂಡದವರು ಮೇಲುಗೈ ಸಾಧಿಸಬಹುದಿತ್ತೇನೊ? ಆದರೆ ಮೊದಲ ಸ್ಲಿಪ್‌ನಲ್ಲಿದ್ದ ಚೇತೇಶ್ವರ ಪೂಜಾರ ಅದನ್ನು ಕೈಚೆಲ್ಲಿದರು.ಆದರೆ ಪೂಜಾರ ಅವರನ್ನು ಭಾರತ ತಂಡದ ಫೀಲ್ಡಿಂಗ್ ಕೋಚ್ ಟ್ರೆವೋರ್ ಪೆನ್ನಿ ಸಮರ್ಥಿಸಿಕೊಂಡಿದ್ದಾರೆ. `ಇದೊಂದು ದೊಡ್ಡ ತಪ್ಪು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಕ್ರಿಕೆಟ್‌ನಲ್ಲಿ ಈ ರೀತಿ ಆಗುವುದು ಸಹಜ. ಸ್ಲಿಪ್‌ನಲ್ಲಿ ಕ್ಯಾಚ್ ಪಡೆಯುವ ರೀತಿ ಬಗ್ಗೆ ಪೂಜಾರ ತುಂಬಾ ದಿನಗಳಿಂದ ಅಭ್ಯಾಸ ನಡೆಸುತ್ತಿದ್ದಾರೆ' ಎಂದರು.

ಪೂಜಾರ ಎಸಗಿದ ಈ ತಪ್ಪಿನ ಸದುಪಯೋಗ ಪಡೆದುಕೊಂಡ ಕುಕ್ 136 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಇದರಿಂದ ಭಾರತ ಈಗ ಅಪಾಯಕ್ಕೆ ಸಿಲುಕಿದೆ. ಆದರೆ ಪುಟಿದೇಳುವ ಭರವಸೆಯನ್ನು ಪೆನ್ನಿ ವ್ಯಕ್ತಪಡಿಸಿದ್ದಾರೆ.ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಈ ಹಿಂದೆ ಸ್ಲಿಪ್‌ನಲ್ಲಿ ಅತ್ಯುತ್ತಮ ಕ್ಯಾಚ್ ಪಡೆದ ಉದಾಹರಣೆ ಇದೆ. ಆದರೆ ಅವರ ವಿದಾಯ ಈಗ ಕಾಡುತ್ತಿರುವುದು ಮಾತ್ರ ನಿಜ.

ಗಾವಸ್ಕರ್ ಟೀಕೆ: ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡ್ ಮಾಡುವ ಪೂಜಾರ ಅವರನ್ನು ಸ್ಲಿಪ್‌ನಲ್ಲಿ ನಿಲ್ಲಿಸಿದ ದೋನಿ ಕ್ರಮವನ್ನು ಮಾಜಿ ನಾಯಕ ಹಾಗೂ ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಟೀಕಿಸಿದ್ದಾರೆ. `ದ್ರಾವಿಡ್ ಹಾಗೂ ಲಕ್ಷ್ಮಣ್ ವಿದಾಯ ಹೇಳಿದ ಮೇಲೆ ಸೆಹ್ವಾಗ್, ಕೊಹ್ಲಿ ಸ್ಲಿಪ್‌ನಲ್ಲಿ ಫೀಲ್ಡ್ ಮಾಡುತ್ತಾರೆ. ಆದರೆ ಇತ್ತೀಚೆಗೆ ಸ್ಪಿನ್ನರ್‌ಗಳು ಬೌಲ್ ಮಾಡುವಾಗ ಮಾತ್ರ ಸೆಹ್ವಾಗ್ ಸ್ಲಿಪ್‌ನಲ್ಲಿರುತ್ತಾರೆ. ಈ ರೀತಿ ಏಕೆ ಎಂಬುದು ನನಗೆ ಗೊತ್ತಾಗುತ್ತಿಲ್ಲ' ಎಂದಿದ್ದಾರೆ. 

ಚೆಂಡು ಗ್ಲೌಸ್‌ಗೆ ತಾಗಿತ್ತು: ಕಾಂಪ್ಟನ್
ಕೋಲ್ಕತ್ತ:
`ಚೆಂಡುನನ್ನ ಪ್ಯಾಡ್‌ಗೆ ಬಡಿಯುವ ಮುನ್ನ ಗ್ಲೌಸ್‌ಗೆ ತಾಗಿತ್ತು. ಆದರೆ ಎಲ್‌ಬಿಡಬ್ಲ್ಯು ಔಟ್ ನೀಡಿದರು. ಇದು ನನ್ನಲ್ಲಿ ಕೊಂಚ ನಿರಾಶೆ ಮೂಡಿಸಿತು. ಆದರೆ ಇದನ್ನು ಸರಿಯಾಗಿ ಅಂದಾಜಿಸುವುದು ಅಂಪೈರ್‌ಗಳಿಗೆ ಕೂಡ ಕಷ್ಟ' ಎಂದು ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ನಿಕ್ ಕಾಂಪ್ಟನ್ ಹೇಳಿದ್ದಾರೆ.

ನಿಕ್ ಗುರುವಾರ ಓಜಾ ಬೌಲಿಂಗ್‌ನಲ್ಲಿ ವಿವಾದಾತ್ಮಕ ಎಲ್‌ಬಿಡಬ್ಲ್ಯು ತೀರ್ಪಿಗೆ ವಿಕೆಟ್ ಒಪ್ಪಿಸಿದರು. ಆ ತೀರ್ಪು ನೀಡಿದ್ದು ಆಸ್ಟ್ರೇಲಿಯಾದ ಅಂಪೈರ್ ರಾಡ್ ಟಕ್ಕರ್. ಮೊದಲು ಔಟ್ ಇಲ್ಲ ಎಂದು ತಲೆಯಾಡಿಸಿದ ಟಕ್ಕರ್ ಒಮ್ಮೆಲೇ ಕೈ ಮೇಲೆತ್ತಿದರು.ನಾಯಕ ಕುಕ್ ಆಟವನ್ನು ಕಾಂಪ್ಟನ್ ಶ್ಲಾಘಿಸಿದರು. `ನಾಯಕರಾಗಿ ಕುಕ್ ನಮಗೆ ಮಾದರಿಯಾಗಿದ್ದಾರೆ. ಅವರ ಜೊತೆ ಇನಿಂಗ್ಸ್ ಆರಂಭಿಸುವುದೇ ನನಗೆ ಖುಷಿಯ ವಿಚಾರ. ಕೇವಲ 27 ವರ್ಷ ವಯಸ್ಸಿನಲ್ಲಿ ಅವರು ಹಲವು ಸಾಧನೆ ಮಾಡಿದ್ದಾರೆ' ಎಂದು ಡೆನಿಸ್ ಕಾಂಪ್ಟನ್ ಅವರ ಮೊಮ್ಮಗ ನಿಕ್ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.