ADVERTISEMENT

ಕ್ರಿಕೆಟ್‌ನಲ್ಲಿ ಮೋಸದಾಟ ಪ್ರಕರಣ: ಆರು ಅಂಪೈರ್‌ಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ದುಬೈ/ನವದೆಹಲಿ (ಪಿಟಿಐ/ಐಎಎನ್‌ಎಸ್):  ಮೋಸದಾಟದಲ್ಲಿ ಪಾಲ್ಗೊಳ್ಳಲು ಮುಂದಾಗಿರುವ ವಿಷಯವು ಸುದ್ದಿ ವಾಹಿನಿಯ ಮಾರುವೇಷದ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಆರು ಅಂಪೈರ್‌ಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಮಾನತುಗೊಳಿಸಿದೆ.

 `ಇಂಡಿಯಾ ಟಿ.ವಿ. ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುವ ಆರು ಅಂಪೈರ್‌ಗಳನ್ನು ಅಂತರರಾಷ್ಟ್ರೀಯ ಅಥವಾ ದೇಶಿಯ ಯಾವುದೇ ಪಂದ್ಯಗಳಿಗೆ ಅಂಪೈರ್ ಆಗಿ ನೇಮಿಸದಿರಲು ಐಸಿಸಿ ಹಾಗೂ ಸದಸ್ಯ ಮಂಡಳಿಗಳು ಒಪ್ಪಿಕೊಂಡಿವೆ. ತನಿಖೆ ಪೂರ್ಣಗೊಳ್ಳುವವರಿಗೆ ಅವರನ್ನು ಅಮಾನತಿನಲ್ಲಿಡಲಾಗಿದೆ~ ಎಂದು ಐಸಿಸಿ ಹೇಳಿದೆ. 

 ಬಾಂಗ್ಲಾದೇಶದ ನದೀರ್ ಷಾ, ಪಾಕಿಸ್ತಾನದ ನದೀಮ್ ಘೋರಿ, ಅನೀಸ್ ಸಿದ್ದಿಕಿ, ಶ್ರೀಲಂಕಾದ ಗಾಮಿನಿ ದಿಸ್ಸಾನಾಯಕೆ, ಮೌರಿಸ್ ವಿನ್‌ಸ್ಟನ್ ಹಾಗೂ ಸಾಗರ ಗಳಾಗೆ ಅಮಾನತಿಗೆ ಒಳಗಾಗಿರುವ ಅಂಪೈರ್‌ಗಳು. ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಹಾಗೂ ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ನಡೆದ ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ (ಎಸ್‌ಪಿಎಲ್) ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿತ್ತು.

`ಈ ಅಂಪೈರ್‌ಗಳೊಂದಿಗೆ ಐಸಿಸಿ ಯಾವುದೇ ಒಪ್ಪಂದ ಹೊಂದಿಲ್ಲ. ಆದರೆ ಇವರೊಂದಿಗೆ ಒಪ್ಪಂದ ಹೊಂದಿರುವ ಹಾಗೂ ಅಂಪೈರಿಂಗ್ ಜವಾಬ್ದಾರಿ ನೀಡಿರುವ ಮಂಡಳಿಗಳು ಶೀಘ್ರ ತನಿಖೆ ನಡೆಸಬಹುದು~ ಎಂದು ಐಸಿಸಿ ತಿಳಿಸಿದೆ. ಈ ಪ್ರಕರಣ ಹೊರಬಂದ ಎರಡು ದಿನಗಳ ಬಳಿಕ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ.

ಬಿಸಿಸಿಐ ಸ್ವಾಗತ: `ಇದೊಂದು ಒಳ್ಳೆಯ ಕ್ರಮ. ಆಯಾ ಮಂಡಳಿಗಳಿಗಿಂತ ಐಸಿಸಿಯೇ ಈ ಅಂಪೈರ್‌ಗಳನ್ನು ಅಮಾನತುಗೊಳಿಸಿದ್ದು ಸೂಕ್ತವಾಗಿದೆ~ ಎಂದು ಬಿಸಿಸಿಐ ಹಿರಿಯ ಅಧಿಕಾರಿ ರಾಜೀವ್ ಶುಕ್ಲಾ ಹೇಳಿದ್ದಾರೆ.

ಇದು ಮೋಸ: ಮಾರುವೇಷದ ಕಾರ್ಯಾಚರಣೆಯೇ ಒಂದು ದೊಡ್ಡ ಮೋಸ ಎಂದು ಆರೋಪಕ್ಕೆ ಒಳಗಾಗಿರುವ ಪಾಕಿಸ್ತಾನದ ಅಂಪೈರ್ ನದೀಮ್ ಘೋರಿ ನುಡಿದಿದ್ದಾರೆ. `ಒಬ್ಬ ವರದಿಗಾರನೊಂದಿಗೆ ಮಾತನಾಡಿದ್ದು ನಿಜ. ಕ್ರೀಡಾ ನಿರ್ವಹಣಾ ಕಂಪೆನಿಯ ಸದಸ್ಯ ಎಂದು ಹೇಳಿಕೊಂಡು ನನ್ನೊಂದಿಗೆ ಮಾತನಾಡಿದ್ದ. ಆದರೆ ದೂರವಾಣಿಯಲ್ಲಿ ಕೆಲ ವಿಷಯಗಳನ್ನು ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ.

ಆದರೆ ಈಗ ವಿಡಿಯೋ ತಿರುಚಲಾಗಿದೆ. ನಾನೀಗಾಗಲೇ ಪಾಕ್ ಕ್ರಿಕೆಟ್ ಮಂಡಳಿ ಅಧಿಕಾರಿಗಳನ್ನು ಭೇಟಿ ಮಾಡಿ ಮಾತನಾಡಿದ್ದೇನೆ.

ತನಿಖೆ ಮುಗಿದ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇನೆ~ ಎಂದು ನದೀಮ್ ತಿಳಿಸಿದ್ದಾರೆ.
ಪಾಕ್ ಕ್ರಿಕೆಟ್ ಮಂಡಳಿ ಕೂಡ ದಿಢೀರನೇ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿರುವುದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.