ADVERTISEMENT

ಕ್ರಿಕೆಟ್‌ ಅಂಪೈರ್‌, ಆಯ್ಕೆದಾರರ ವೇತನ ಹೆಚ್ಚಳ

ಪಿಟಿಐ
Published 30 ಮೇ 2018, 20:07 IST
Last Updated 30 ಮೇ 2018, 20:07 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ನವದೆಹಲಿ: ರಾಷ್ಟ್ರೀಯ ಆಯ್ಕೆ ಸಮಿತಿಯ ಮೂವರು ಸದಸ್ಯರು, ಅಂಪೈರ್‌ಗಳು, ವಿಡಿಯೊ ವಿಶ್ಲೇಷಕರು ಮತ್ತು ಸ್ಕೋರರ್‌ಗಳ ವೇತನದಲ್ಲಿ ಹೆಚ್ಚಳ ಮಾಡಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಸಾಬಾ ಕರೀಂ ಆಧ್ಯಕ್ಷತೆಯ ಕ್ರಿಕೆಟ್‌ ಆಪ್‌ರೇಷನ್ಸ್‌ ವಿಭಾಗ ಮತ್ತು ಸಿಒಎ (ಆಡಳಿತ ಸಮಿತಿ) ಜಂಟಿಯಾಗಿ ಈ ನಿರ್ಧಾರ ಕೈಗೊಂಡಿವೆ.

‘ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಆವರು ಈಗ ವಾರ್ಷಿಕ ₹ 80 ಲಕ್ಷ ಮತ್ತು ಉಳಿದ ಸದಸ್ಯರು ₹ 60 ಲಕ್ಷ ಪಡೆಯುತ್ತಿದ್ದಾರೆ. ಪರಿಷ್ಕರಣೆಗೊಂಡರೆ ಮುಖ್ಯಸ್ಥರ ವೇತನವು ₹ 1 ಕೋಟಿ ಮತ್ತು ಉಳಿದವರದ್ದು ₹ 75 ರಿಂದ 80 ಲಕ್ಷಕ್ಕೆ ಏರಬಹುದು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಆದರೆ ಈ ಪರಿಷ್ಕರಣೆಯ ಕುರಿತು ಬಿಸಿಸಿಐ ಖಜಾಂಚಿ ಅನಿರುದ್ಧ ಚೌಧರಿ ಅವರಿಗೆ ಯಾವುದೇ ಮಾಹಿತಿ ನೀಡಿಲ್ಲವೆಂದು ಹೇಳಲಾಗುತ್ತಿದೆ. ಅಲ್ಲದೇ ಈ ವಿಚಾರದಲ್ಲಿ ಕೆಲವು ಅಪಸ್ವರಗಳೂ ಕೇಳಿ ಬಂದಿವೆ.

‘ಆಯ್ಕೆ ಸಮಿತಿಯಿಂದ ಹೊರ ಹಾಕಲಾಗಿರುವ ಜತಿನ್ ಪರಾಂಜಪೆ ಮತ್ತು ಗಗನ್ ಖೋಡಾ ಅವರಿಗೂ ಇದೇ ವೇತನ ನೀಡಲಾಗುತ್ತಿದೆ. ಮಂಡಳಿಯ ನಿಯಮದ ಪ್ರಕಾರ ಎಜಿಎಂನಲ್ಲಿ ನೇಮಕವಾದವರಿಗೆ ಈ ವೇತನ ನೀಡಲಾಗುತ್ತಿದೆ. ಆದ್ದರಿಂದ ಅವರಿಬ್ಬರೂ ಕೆಲಸ ಮಾಡದಿದ್ದರೂ ಈ ಅವಧಿಗೆ ವೇತನ ಪಡೆಯುತ್ತಿದ್ದಾರೆ. ಆದರೆ ಕಾರ್ಯನಿರ್ವಹಿಸುತ್ತಿರುವ ಸದಸ್ಯರಾದ ದೇವಾಂಗ್ ಗಾಂಧಿ ಮತ್ತು ಶರಣದೀಪ್ ಅವರಿಗೂ ಕೂಡ ಅಷ್ಟೇ ಮೊತ್ತವನ್ನು ನೀಡಲಾಗುತ್ತಿದೆ. ಇದು ಸರಿಯಲ್ಲ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪರಿಷ್ಕೃತ ವೇತನ ನಿಯಮದ ಪ್ರಕಾರ ಅಂಪೈರ್‌ಗಳು  ಪ್ರಥಮ ದರ್ಜೆಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದರೆ ದಿನವೊಂದಕ್ಕೆ ₹ 40 ಸಾವಿರ, ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದರೆ ₹ 20 ಸಾವಿರ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.