ADVERTISEMENT

ಕ್ರಿಕೆಟ್: ಆನಂದ್ ಕಟ್ಟಿ ನಿವೃತ್ತಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 9:40 IST
Last Updated 14 ಜನವರಿ 2011, 9:40 IST

ಬೆಂಗಳೂರು: ಕರ್ನಾಟಕ ತಂಡವು ಎರಡು ಬಾರಿ ಚಾಂಪಿಯನ್ ಪಟ್ಟವನ್ನು ಪಡೆಯಲು ಮಹತ್ವದ ಕೊಡುಗೆ ನೀಡಿದ್ದ ಸ್ಪಿನ್ ಬೌಲರ್ ಆನಂದ್ ಕಟ್ಟಿ ಅವರು ಗುರುವಾರ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದರು.

‘ಸಾಧಿಸಲಾಗದ್ದರ ಬಗ್ಗೆ ಬೇಸರವಿಲ್ಲ; ಆಡಿದಷ್ಟು ಕಾಲ ಉತ್ತಮ ಪ್ರದರ್ಶನದಿಂದ ಕರ್ನಾಟಕ ತಂಡದ ಯಶಸ್ಸಿಗೆ ಕಾರಣನಾದೆ ಎನ್ನುವ ತೃಪ್ತಿ ಇದೆ. ನನ್ನ ಕ್ರಿಕೆಟ್ ಜೀವನದಲ್ಲಿ ಕೊರತೆಗಳು ಕಾಣಿಸಿಲ್ಲ. ಸಂತಸದೊಂದಿಗೆಯೇ ವಿದಾಯ ಹೇಳುತ್ತಿದ್ದೇನೆ’ ಎಂದು ಆನಂದ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರ್ನಾಟಕ ಕ್ರಿಕೆಟ್‌ನ ಸ್ವರ್ಣಯುಗವೆನಿಸಿದ ಕಾಲದಲ್ಲಿ ನಾನು ಆಡಿದೆ ಎನ್ನುವುದೇ ಹೆಮ್ಮೆ. ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಎತ್ತಿಹಿಡಿದ ಸಂಭ್ರಮದ ಕ್ಷಣಗಳು ನನ್ನ ನೆನಪಿನಲ್ಲಿನ ಸವಿಯುಳ್ಳ ಬುತ್ತಿ’ ಎಂದ ಅವರು ‘ಆಟಗಾರನಾಗಿ ಇನ್ನುಮುಂದೆ ಕಾಣಿಸಿಕೊಳ್ಳದಿದ್ದರೂ, ಕ್ರಿಕೆಟ್ ಒಳಿತಿಗಾಗಿ ಕೆಲಸ ಮಾಡುವಂಥ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಲು ಸಜ್ಜಾಗಿದ್ದೇನೆ’ ಎಂದರು.

ಕರ್ನಾಟಕದಲ್ಲಿ ಅವಕಾಶವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾದಾಗ ಅಸ್ಸಾಂ ತಂಡಕ್ಕಾಗಿ ಆಡಬೇಕಾಯಿತು ಎನ್ನುವುದರ ಬಗ್ಗೆಯೂ ದೂರದ ಅವರು ‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯಿಂದ ನನಗೆ ಸಾಕಷ್ಟು ಪ್ರೋತ್ಸಾಹ ಸಿಕ್ಕಿದೆ. ಈಗಲೂ ಹೊಸ ಜವಾಬ್ದಾರಿ ನೀಡಿ ಸಹಕರಿಸಿದೆ’ ಎಂದ ಅವರು ‘ಎರಡು ದಶಕಗಳ ಅವಧಿಯಲ್ಲಿ ಕೆಎಸ್‌ಸಿಎ ಚುಕ್ಕಾಣಿ ಹಿಡಿದಿದ್ದ ಎಲ್ಲರೂ ನನ್ನ ಸಾಮರ್ಥ್ಯಕ್ಕೆ ತಕ್ಕ ಅವಕಾಶವನ್ನು ನೀಡಿದರು. ಅದಕ್ಕಾಗಿ ಸದಾ ಕೃತಜ್ಞನಾಗಿರುತ್ತೇನೆ’ ಎಂದು ನುಡಿದರು.

1991ರಲ್ಲಿ ಬೆಂಗಳೂರಿಗೆ ಬಂದಾಗ ವಿ.ಜಗನ್ನಾಥ್ ಅವರು ಸರಿಯಾದ ಮಾರ್ಗದರ್ಶನ ನೀಡಿ, ನನ್ನನ್ನು ಒಬ್ಬ ಕ್ರಿಕೆಟಿಗನನ್ನಾಗಿ ಬೆಳೆಸಿದರು. ಕ್ರಿಕೆಟ್ ಮೂಲ ಪಾಠ ಹೇಳಿಕೊಟ್ಟ ವಸಂತ ಮುರುಡೇಶ್ವರ ಮತ್ತು ರಾಜ್ಯ ಲೀಗ್‌ನಲ್ಲಿ ಆಡಲು ಅವಕಾಶ ಕಲ್ಪಿಸಿದ ಮಲ್ಲೇಶ್ವರ ಜಿಮ್ಖಾನಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ನನ್ನ ಕ್ರಿಕೆಟ್ ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದನ್ನು ಸ್ಮರಿಸುತ್ತೇನೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.