ADVERTISEMENT

ಕ್ರಿಕೆಟ್: ಕರ್ನಾಟಕಕ್ಕೆ ಸುಲಭ ಗೆಲುವು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST
ಕ್ರಿಕೆಟ್: ಕರ್ನಾಟಕಕ್ಕೆ ಸುಲಭ ಗೆಲುವು
ಕ್ರಿಕೆಟ್: ಕರ್ನಾಟಕಕ್ಕೆ ಸುಲಭ ಗೆಲುವು   

ಬೆಂಗಳೂರು: ರೋನಿತ್ ಮೋರೆ (18ಕ್ಕೆ 6) ತೋರಿದ ಪ್ರಭಾವಿ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ಕೆ.ಎಸ್. ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಗೋವಾ ವಿರುದ್ಧ ಎಂಟು ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್ ಮಾಡಿದ ಗೋವಾ 20.3 ಓವರ್‌ಗಳಲ್ಲಿ ಕೇವಲ 54 ರನ್‌ಗಳಿಗೆ ಆಲೌಟಾಯಿತು. ಆತಿಥೇಯ ತಂಡ 12.3 ಓವರ್‌ಗಳಲ್ಲಿ 2 ವಿಕೆಟ್‌ಗೆ 55 ರನ್ ಗಳಿಸಿ ಗೆಲುವಿನ ನಗು ಬೀರಿತು. ಈ ಜಯದ ಮೂಲಕ ರಾಬಿನ್ ಉತ್ತಪ್ಪ ಬಳಗ ಬೋನಸ್ ಒಳಗೊಂಡಂತೆ ಐದು ಪಾಯಿಂಟ್ ಕಲೆಹಾಕಿತು. ಗೋವಾ ಒಂದು ಪಾಯಿಂಟ್‌ಗೆ ತೃಪ್ತಿಪಟ್ಟುಕೊಂಡಿತು.

ಗೋವಾ ವಿರುದ್ಧ ಕರ್ನಾಟಕ ಗೆಲ್ಲುವ `ಫೇವರಿಟ್~ ಎನಿಸಿತ್ತು. ಆದರೆ ಜಯ ಇಷ್ಟೊಂದು ಸುಲಭವಾಗಿ ದೊರೆಯುವುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಭೋಜನ ವಿರಾಮಕ್ಕೆ 40 ನಿಮಿಷಗಳಿರುವಾಗಲೇ ಪಂದ್ಯಕ್ಕೆ ತೆರೆಬಿತ್ತು!

ADVERTISEMENT

ಕರ್ನಾಟಕದ ಗೆಲುವಿನ ಶ್ರೇಯ ಯುವ ಬೌಲರ್ ರೋನಿತ್‌ಗೆ ಸಲ್ಲಬೇಕು. ಬೆಳಗಾವಿಯ ಈ ಬಲಗೈ ಮಧ್ಯಮ ವೇಗದ ಬೌಲರ್ ಗೋವಾ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು. ಸೀನಿಯರ್ ವಿಭಾಗದಲ್ಲಿ ಕರ್ನಾಟಕದ ಪರ ತಾವಾಡಿದ ಮೊದಲ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ನೀಡಿದರು.

ತಮ್ಮ ಮೊದಲ ಓವರ್‌ನಲ್ಲೇ ಆರಂಭಿಕ ಬ್ಯಾಟ್ಸ್‌ಮನ್ ಸಗುಣ್ ಕಾಮತ್ (3) ವಿಕೆಟ್ ಪಡೆಯುವ ಮೂಲಕ ಅವರು ಗೋವಾ ಕುಸಿತಕ್ಕೆ ಚಾಲನೆ ನೀಡಿದರು. ರೋನಿತ್ 6.3 ಓವರ್‌ಗಳ ದಾಳಿಯಲ್ಲಿ ಆರು ವಿಕೆಟ್ ಪಡೆದರು. ಗೋವಾ ಪರ ಎರಡಂಕಿಯ ಮೊತ್ತ ತಲುಪಿದ್ದು ರೇಗನ್ ಪಿಂಟೊ (19) ಮಾತ್ರ. ಉಳಿದ ಬ್ಯಾಟ್ಸ್‌ಮನ್‌ಗಳಿಂದ ಪೆವಿಲಿಯನ್ ಪೆರೇಡ್ ನಡೆಯಿತು. ಅಭಿಮನ್ಯು ಮಿಥುನ್ 21 ರನ್‌ಗಳಿಗೆ ಎರಡು ವಿಕೆಟ್ ಪಡೆದರು.

ಕರ್ನಾಟಕ ಗೆಲುವಿನ ಹಾದಿಯಲ್ಲಿ ರಾಬಿನ್ ಉತ್ತಪ್ಪ (23) ಮತ್ತು ಗಣೇಶ್ ಸತೀಶ್ (1) ಅವರನ್ನು ಕಳೆದುಕೊಂಡಿತು. ಆದರೆ ಕರುಣ್ ನಾಯರ್ ಮತ್ತು ಮನೀಷ್ ಪಾಂಡೆ ಹೆಚ್ಚಿನ ವಿಕೆಟ್ ಬೀಳದಂತೆ ನೋಡಿಕೊಂಡರು.

ಸಂಕ್ಷಿಪ್ತ ಸ್ಕೋರ್: ಗೋವಾ: 20.3 ಓವರ್‌ಗಳಲ್ಲಿ 54 (ರೇಗನ್ ಪಿಂಟೊ 19, ರೋನಿತ್ ಮೋರೆ 18ಕ್ಕೆ 6, ಅಭಿಮನ್ಯು ಮಿಥುನ್ 21ಕ್ಕೆ 2, ಸ್ಟುವರ್ಟ್ ಬಿನ್ನಿ 4ಕ್ಕೆ 1, ಕೆ.ಪಿ. ಅಪ್ಪಣ್ಣ 11ಕ್ಕೆ 1). ಕರ್ನಾಟಕ: 12.3 ಓವರ್‌ಗಳಲ್ಲಿ 2 ವಿಕೆಟ್‌ಗೆ 55 (ರಾಬಿನ್ ಉತ್ತಪ್ಪ 23, ಕರುಣ್ ನಾಯರ್ ಔಟಾಗದೆ 15, ಗಣೇಶ್ ಸತೀಶ್ 1, ಮನೀಷ್ ಪಾಂಡೆ ಔಟಾಗದೆ 11, ಶಾದಾಬ್ ಜಕಾತಿ 2ಕ್ಕೆ 1). ಫಲಿತಾಂಶ: ಕರ್ನಾಟಕಕ್ಕೆ 8 ವಿಕೆಟ್ ಗೆಲುವು
ಪಾಯಿಂಟ್: ಕರ್ನಾಟಕ-5, ಗೋವಾ-1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.