ADVERTISEMENT

ಕ್ರಿಕೆಟ್: ತಡಬಡಾಯಿಸಿದ ಭಾರತ ತಂಡದ್ದು ಅದೇ ರಾಗ ಅದೇ ಹಾಡು!

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ಪರ್ತ್: ಸರಣಿಯಲ್ಲಿ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸಿದ್ದ ಭಾರತದವರು ಡಬ್ಲ್ಯುಎಸಿಎ ಅಂಗಳದಲ್ಲಿ ಪುಟಿದೇಳುವ ಚೆಂಡನ್ನು ದಂಡಿಸಲಿಲ್ಲ. ಮತ್ತೆ ರನ್‌ಗಳ ಮೊತ್ತವಿಲ್ಲದೇ ಪ್ರವಾಸಿಗಳ ಖಾತೆ ಬರಡು. ಮೊದಲ ಎರಡು ಟೆಸ್ಟ್‌ಗಳಲ್ಲಿನಂತೆ ಇಲ್ಲಿಯೂ `ದೋನಿ~ ಪಡೆ ಬ್ಯಾಟಿಂಗ್ ಮಾಡಿದಾಗ ಬೆಂಬಲಿಗರ ಮನ ಮುದುಡುವಂಥ ತೋಡಿರಾಗ!

ವೇಗದ ದಾಳಿ ಎದುರು ತಲೆಬಾಗುವುದಿಲ್ಲ ಎನ್ನುವ ಆಶಯ ನಾಲ್ಕನೇ ಓವರ್‌ನಿಂದಲೇ ಕರಗತೊಡಗಿತು. ಹೀಗೆ ಶುರುವಾಯಿತು ಎನ್ನುವುದರಲ್ಲಿ ಭಾರತದ ಇನಿಂಗ್ಸ್ ಹಾಗೆಯೇ ಮುಗಿದ ಅನುಭವ. ದೊಡ್ಡ ಹೆಸರಿನ ಬ್ಯಾಟ್ಸ್‌ಮನ್‌ಗಳು ಕಾಂಗರೂಗಳ ನಾಡಿನ ವೇಗಿಗಳಾದ ಹಿಲ್ಫೆನ್ಹಾಸ್, ಮಿಷೆಲ್ ಸ್ಟಾರ್ಕ್ ಹಾಗೂ ಪೀಟರ್ ಸಿಡ್ಲ್ ಮೊನಚಿನೆದುರು ಸೊರಗಿಹೋದರು.

60.2 ಓವರುಗಳಲ್ಲಿಯೇ ಭಾರತದ ಮೊದಲ ಇನಿಂಗ್ಸ್ ಕಥೆ ಮುಗಿಯಿತು. ಗಳಿಸಿದ್ದು 161 ರನ್ ಮಾತ್ರ. ಆತಿಥೇಯರ ಮೊದಲ ವಿಕೆಟ್ ಜೊತೆಯಾಟದ ಗಾತ್ರ(149 ರನ್)ಕ್ಕೆ ಹೋಲಿಸಿದರೆ ಮಹೇಂದ್ರ ಸಿಂಗ್ ದೋನಿ ಬಳಗ ಪೇರಿಸಿಟ್ಟ ಮೊತ್ತ ಅಲ್ಪ. ಮೂರನೇ ಟೆಸ್ಟ್‌ನ ಮೊದಲ ದಿನವಾದ ಶುಕ್ರವಾರದ ಆಟಕ್ಕೆ ತೆರೆ ಬೀಳುವವರೆಗೂ ಮುರಿಯಲಿಲ್ಲ ಡೇವಿಡ್ ವಾರ್ನರ್ (104; 80 ಎ., 13 ಬೌಂಡರಿ, 3 ಸಿಕ್ಸರ್) ಹಾಗೂ ಎಡ್ ಕೋವನ್ (40; 58 ಎ., 6 ಬೌಂಡರಿ) ಜೊತೆಯಾಟ. ಭಾರತಕ್ಕೆ  ಮತ್ತೊಮ್ಮೆ ಕಷ್ಟ ಎನ್ನುವುದೂ ಆ ಹೊತ್ತಿಗಾಗಲೇ ಸ್ಪಷ್ಟ.

ADVERTISEMENT

ಭಾರತದವರ ಇನಿಂಗ್ಸ್ ಮುಗಿಯುವ ಹೊತ್ತಿಗಾಗಲೇ ಬಿಯರ್ ಮತ್ತಿನಲ್ಲಿ ಆಸ್ಟ್ರೇಲಿಯಾ ತಂಡದ ಬೆಂಬಲಿಗರು `ಬಿರುಕು~ ಎಂದು ಬರೆದ ಫಲಕ ಎತ್ತಿ ಹಿಡಿದಾಗಿತ್ತು. ತಂಡದಲ್ಲಿ ಬಿರುಕಿಲ್ಲವೆಂದು ಸ್ಪಷ್ಟನೆ ನೀಡಿದ್ದ ವೀರೇಂದ್ರ ಸೆಹ್ವಾಗ್ ಸೊನ್ನೆ ಸುತ್ತಿದಾಗಲಂತೂ ಪ್ರೇಕ್ಷಕರೂ ಕಾಂಗರೂಗಳಂತೆ ಕುಣಿದರು. `ವೀರೂ~ ಅಸಮಾಧಾನದ ಹೆಜ್ಜೆಗೆ ಎದುರಾಳಿ ಪಡೆಯ ಅಭಿಮಾನಿಗಳ ಸಂಭ್ರಮದ ಕೇಕೆಯ ಹಿಮ್ಮೇಳ. ನಾಯಕ ದೋನಿ ಕೂಡ ಹಿಲ್ಫೆನ್ಹಾಸ್ ಎಸೆತದಲ್ಲಿ ರಿಕಿ ಪಾಂಟಿಂಗ್ ಅವರಿಗೇ ಕ್ಯಾಚಿತ್ತಾಗಲೂ ಇಂಥದೇ ಪ್ರತಿಕ್ರಿಯೆ.

ಅರ್ಧಶತಕ ಮುಟ್ಟುವಂಥ ದಿಟ್ಟ ಆಟವು ಭಾರತದವರಿಗೆ ಇಲ್ಲಿ ಕನಸಾಗಿಯೇ ಉಳಿಯಿತು. ಗೌತಮ್ ಗಂಭೀರ್ (31; 81 ಎ., 3 ಬೌಂಡರಿ), ವಿ.ವಿ.ಎಸ್.ಲಕ್ಷ್ಮಣ್ (31; 86 ಎ., 5 ಬೌಂಡರಿ) ಹಾಗೂ ವಿರಾಟ್ ಕೊಹ್ಲಿ (44; 81 ಎ., 6 ಬೌಂಡರಿ) ಅವರು ಮೂವತ್ತರ ಗಡಿ ದಾಟಿದರು. ಅದೇ ದೊಡ್ಡ ಸಾಧನೆ. ಸಚಿನ್ ತೆಂಡೂಲ್ಕರ್ ನೂರರ ನೂರು ಆಸೆ ಕೂಡ ಮುದುಡಿಕೊಂಡು ಮೂಲೆ ಸೇರಿತು.

ಮೈಕಲ್ ಕ್ಲಾರ್ಕ್ ನೇತೃತ್ವದ ತಂಡವು ತಾನು ಕಂಡ ಸರಣಿ ವಿಜಯದ ಕನಸನ್ನು ಇಲ್ಲಿಯೇ ನನಸಾಗಿಸಿಕೊಳ್ಳುವ ವಿಶ್ವಾಸದಿಂದ ದಾಪುಗಾಲಿಟ್ಟಿದೆ. ಭಾರತದ ವಿರುದ್ಧ ಅತ್ಯಂತ ವೇಗದ ಶತಕ ಗಳಿಸಿದ ವಾರ್ನರ್ ಅಬ್ಬರದೊಂದಿಗೆ ಇನಿಂಗ್ಸ್ ಹಿಗ್ಗುವ ಭರವಸೆಯೂ ಬಲವಾಗಿದೆ. ದಿನದ ಕೊನೆಗೆ ಆತಿಥೇಯರ ಖಾತೆಯಲ್ಲಿನ ರನ್ ಮೊತ್ತ 149. ಇನಿಂಗ್ಸ್ ಮುನ್ನಡೆಗೆ ಇನ್ನು 13 ರನ್ ಮಾತ್ರ ಅಗತ್ಯ. ಈಗ ಆಡುತ್ತಿರುವ ಗತಿಯಲ್ಲಿಯೇ ಮುಂದೆ ಸಾಗಿದರೆ ಮತ್ತೆ ಬ್ಯಾಟಿಂಗ್ ಮಾಡುವ ಅಗತ್ಯವೇ ಎದುರಾಗದಷ್ಟು ದೊಡ್ಡ ಮೊತ್ತಗಳಿಸುವುದಂತೂ ಖಚಿತ! ಈ ಪಂದ್ಯದ ಮೂಲಕ ವಿನಯ್  ಟೆಸ್ಟ್‌ಗೆ ಪದಾರ್ಪಣೆ ಮಾಡಿದರು.

ಭಾರತ: ಪ್ರಥಮ ಇನಿಂಗ್ಸ್ 60.2 ಓವರುಗಳಲ್ಲಿ 161

ಗೌತಮ್ ಗಂಭೀರ್ ಸಿ ಬ್ರಾಡ್ ಹಡ್ಡಿನ್ ಬಿ ಬೆನ್ ಹಿಲ್ಫೆನ್ಹಾಸ್  31
ವೀರೇಂದ್ರ ಸೆಹ್ವಾಗ್ ಸಿ ರಿಕಿ ಪಾಂಟಿಂಗ್ ಬಿ ಬೆನ್ ಹಿಲ್ಫೆನ್ಹಾಸ್  00
ರಾಹುಲ್ ದ್ರಾವಿಡ್ ಬಿ ಪೀಟರ್ ಸಿಡ್ಲ್  09
ಸಚಿನ್ ತೆಂಡೂಲ್ಕರ್ ಎಲ್‌ಬಿಡಬ್ಲ್ಯು ಬಿ ರಯಾನ್ ಹ್ಯಾರಿಸ್  15
ವಿ.ವಿ.ಎಸ್.ಲಕ್ಷ್ಮಣ್ ಸಿ ಮೈಕಲ್ ಕ್ಲಾರ್ಕ್ ಬಿ ಪೀಟರ್ ಸಿಡ್ಲ್  31
ವಿರಾಟ್ ಕೊಹ್ಲಿ ಸಿ ಡೇವಿಡ್ ವಾರ್ನರ್ ಬಿ ಪೀಟರ್ ಸಿಡ್ಲ್  44
ಮಹೇಂದ್ರ ಸಿಂಗ್ ದೋನಿ ಸಿ ರಿಕಿ ಪಾಂಟಿಂಗ್ ಬಿ ಬೆನ್ ಹಿಲ್ಫೆನ್ಹಾಸ್ 12
ಆರ್.ವಿನಯ್ ಕುಮಾರ್ ಎಲ್‌ಬಿಡಬ್ಲ್ಯು ಬಿ ಮಿಷೆಲ್ ಸ್ಟಾರ್ಕ್  05
ಜಹೀರ್ ಖಾನ್ ಸಿ ಮೈಕಲ್ ಕ್ಲಾರ್ಕ್ ಬಿ ಬೆನ್ ಹಿಲ್ಫೆನ್ಹಾಸ್  02
ಇಶಾಂತ್ ಶರ್ಮ ಸಿ ಬ್ರಾಡ್ ಹಡ್ಡಿನ್ ಬಿ ಮಿಷೆಲ್ ಸ್ಟಾರ್ಕ್  03
ಉಮೇಶ್ ಯಾದವ್ ಔಟಾಗದೆ  04

ಇತರೆ: (ಬೈ-2, ಲೆಗ್‌ಬೈ-2, ವೈಡ್-1)  05

ವಿಕೆಟ್ ಪತನ: 1-4 (ವೀರೇಂದ್ರ ಸೆಹ್ವಾಗ್; 3.2), 2-32 (ರಾಹುಲ್ ದ್ರಾವಿಡ್; 13.5), 3-59 (ಸಚಿನ್ ತೆಂಡೂಲ್ಕರ್; 24.1), 4-63 (ಗೌತಮ್ ಗಂಭೀರ್; 25.1), 5-131 (ವಿರಾಟ್ ಕೊಹ್ಲಿ; 50.6), 6-138 (ವಿ.ವಿ.ಎಸ್.ಲಕ್ಷ್ಮಣ್; 52.5), 7-152 (ಆರ್.ವಿನಯ್ ಕುಮಾರ್; 56.1), 8-152 (ಮಹೇಂದ್ರ ಸಿಂಗ್ ದೋನಿ; 57.2), 9-157 (ಜಹೀರ್ ಖಾನ್; 59.2), 10-161 (ಇಶಾಂತ್ ಶರ್ಮ; 60.2).
ಬೌಲಿಂಗ್: ರ‌್ಯಾನ್ ಹ್ಯಾರಿಸ್ 18-6-33-1, ಬೆನ್ ಹಿಲ್ಫೆನ್ಹಾಸ್ 18-5-43-4, ಮೈಕಲ್ ಸ್ಟಾರ್ಕ್ 12.2-3-39-2 (ವೈಡ್-1), ಪೀಟರ್ ಸಿಡ್ಲ್ 12-3-42-3

ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 23 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೆ 149

ಎಡ್ ಕೋವನ್ ಬ್ಯಾಟಿಂಗ್  40
ಡೇವಿಡ್ ವಾರ್ನರ್ ಬ್ಯಾಟಿಂಗ್  104
ಇತರೆ: (ಲೆಗ್‌ಬೈ-3, ವೈಡ್-2)  05
ಬೌಲಿಂಗ್: ಜಹೀರ್ ಖಾನ್ 7-1-44-0 (ವೈಡ್-1), ಉಮೇಶ್ ಯಾದವ್ 6-1-42-0 (ವೈಡ್-1), ಆರ್.ವಿನಯ್ ಕುಮಾರ್ 4-0-31-0, ಇಶಾಂತ್ ಶರ್ಮ 5-0-28-0, ವೀರೇಂದ್ರ ಸೆಹ್ವಾಗ್ 1-0-1-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.