ADVERTISEMENT

ಕ್ರಿಕೆಟ್: ತನಿಖೆಗೆ ಮುಂದಾದ ಐಸಿಸಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 19:30 IST
Last Updated 8 ಜೂನ್ 2011, 19:30 IST
ಕ್ರಿಕೆಟ್: ತನಿಖೆಗೆ ಮುಂದಾದ ಐಸಿಸಿ
ಕ್ರಿಕೆಟ್: ತನಿಖೆಗೆ ಮುಂದಾದ ಐಸಿಸಿ   

ಲಂಡನ್ (ಪಿಟಿಐ): ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಅಮೇರ್ ಐಸಿಸಿ ವಿಧಿಸಿರುವ ನಿಷೇಧ ಶಿಕ್ಷೆಯನ್ನು ಉಲ್ಲಂಘಿಸಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅಮೇರ್ ಅವರು `ಸ್ಪಾಟ್ ಫಿಕ್ಸಿಂಗ್~ ನಲ್ಲಿ ಭಾಗಿಯಾಗಿದ್ದ ಕಾರಣ ಐಸಿಸಿಯಿಂದ ಐದು ವರ್ಷಗಳ ನಿಷೇಧ ಶಿಕ್ಷೆ ಎದುರಿಸುತ್ತಿದ್ದಾರೆ.

ಇದೀಗ ಅವರು ಇಂಗ್ಲೆಂಡ್‌ನ ಸರ‌್ರೆ ಕ್ರಿಕೆಟ್ ಲೀಗ್‌ನ ಒಂದನೇ ಡಿವಿಷನ್ ಪಂದ್ಯದಲ್ಲಿ ಆಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ತನಿಖೆಗೆ ಮುಂದಾಗಿದೆ.

ಆದರೆ ತಾನು ಪ್ರದರ್ಶನ ಪಂದ್ಯದಲ್ಲಿ ಆಡಿದ್ದು, ನಿಷೇಧ ಶಿಕ್ಷೆಯನ್ನು ಉಲ್ಲಂಘಿಸಿಲ್ಲ ಎಂದು ಅಮೇರ್ ತಿಳಿಸಿದ್ದಾರೆ. ಪಾಕ್ ತಂಡದ ವೇಗಿ ನ್ಯೂ ಮಾಲ್ಡೆನ್‌ನ ಎಲ್‌ಎಸ್‌ಇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಡಿಂಗ್ಟನ್ ತಂಡವನ್ನು ಪ್ರತಿನಿಧಿಸಿದ್ದಾರೆ.

`ನಾವು ತನಿಖೆ ಆರಂಭಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಅವರು ಆಡಿದ್ದು ನಿಜವಾಗಿದ್ದರೆ ಅದು ನಿಷೇಧ ಶಿಕ್ಷೆಯನ್ನು ಉಲ್ಲಂಘಿಸಿದ ಹಾಗಾಗುತ್ತದೆ. ನಿಷೇಧ ಶಿಕ್ಷೆ ಎದುರಿಸುತ್ತಿರುವ ಆಟಗಾರ ಯಾವುದೇ ರೀತಿಯ ಪಂದ್ಯದಲ್ಲಿ ಆಡುವಂತಿಲ್ಲ~ ಎಂದು ಐಸಿಸಿ ವಕ್ತಾರ ಕಾಲಿನ್ ಗಿಬ್ಸನ್ ಹೇಳಿದ್ದಾರೆ.

ಐಸಿಸಿಯು ಅಮೇರ್ ಅಲ್ಲದೆ ಪಾಕಿಸ್ತಾನದ ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಆಸಿಫ್ ಮೇಲೆ ಫೆಬ್ರುವರಿ ತಿಂಗಳಲ್ಲಿ ನಿಷೇಧ ಹೇರಿತ್ತು. ಪಂದ್ಯದಲ್ಲಿ ಆಡಿದ್ದನ್ನು ಒಪ್ಪಿಕೊಂಡಿರುವ ಅಮೇರ್, `ಆದರೆ ಅದು ಅಧಿಕೃತ ಲೀಗ್ ಪಂದ್ಯವಾಗಿತ್ತು ಎಂಬುದು ತಿಳಿದಿರಲಿಲ್ಲ~ ಎಂದಿದ್ದಾರೆ.

`ಇದೊಂದು ಪ್ರದರ್ಶನ ಪಂದ್ಯ ಎಂದು ಕ್ಲಬ್‌ನ ಪ್ರತಿನಿಧಿಗಳು ಪಂದ್ಯಕ್ಕೆ ಮುನ್ನ ನನಗೆ ತಿಳಿಸಿದ್ದರು. ಖಾಸಗಿ ಒಡೆತನದಲ್ಲಿರುವ ಅಂಗಳದಲ್ಲಿ ಪ್ರದರ್ಶನ ಪಂದ್ಯವನ್ನಾಡಿದರೆ, ಅದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ವ್ಯಾಪ್ತಿಯೊಳಗೆ ಬರುವುದಿಲ್ಲವೇ ಎಂದು ಕ್ಲಬ್‌ನ ಪ್ರತಿನಿಧಿಗಳನ್ನು ಕೇಳಿದ್ದೆ. ಅವರು ಇಲ್ಲ ಎಂದು ಉತ್ತರಿಸಿದ್ದರು~ ಎಂಬುದಾಗಿ ಅಮೇರ್ ವಿವರಿಸಿದ್ದಾರೆ.

`ಕ್ಲಬ್‌ನ ಕೆಲವು ಪ್ರತಿನಿಧಿಗಳಲ್ಲಿ ಈ ಬಗ್ಗೆ ವಿಚಾರಿಸಿದ್ದೆ. ಪ್ರದರ್ಶನ ಪಂದ್ಯ ಇದಾಗಿರುವ ಕಾರಣ ಐಸಿಸಿಯ ನಿಷೇಧ ಶಿಕ್ಷೆ ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಎಲ್ಲರೂ ಉತ್ತರಿಸಿದ್ದರು~ ಎಂದು ಅಮೇರ್ ತಿಳಿಸಿದ್ದಾರೆ.ಅದೇ ರೀತಿ ಕ್ಲಬ್ ಜೊತೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಅಮೇರ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.