ADVERTISEMENT

ಕ್ರಿಕೆಟ್: ಫೈನಲ್‌ಗೆ ಭಾರತ ಗ್ರೀನ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನಾಗಪುರ (ಪಿಟಿಐ): ರಾಬಿನ್ ಉತ್ತಪ್ಪ (132; 103 ಎ., 14 ಬೌಂಡರಿ, 3 ಸಿಕ್ಸರ್) ಹಾಗೂ ಶ್ರೀಕಾಂತ್ ಅನಿರುಧ್ (111; 88 ಎ., 13 ಬೌಂಡರಿ, 3 ಸಿಕ್ಸರ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಬ್ಲೂ ತಂಡವನ್ನು ಮಣಿಸಿದ ಭಾರತ ಗ್ರೀನ್ ತಂಡದವರು ಎನ್.ಕೆ.ಪಿ.ಸಾಳ್ವೆ ಚಾಲೆಂಜರ್ ಟ್ರೋಫಿ  ಕ್ರಿಕೆಟ್ ಟೂರ್ನಿಯ ಫೈನಲ್ ತಲುಪಿದ್ದಾರೆ.

ಜಾಮ್ತಾ ಕ್ರೀಡಾಂಗಣದಲ್ಲಿ ಬುಧವಾರ ಗ್ರೀನ್ ತಂಡ ನೀಡಿದ 349 ರನ್‌ಗಳ ಗುರಿಗೆ ಉತ್ತರವಾಗಿ ಭಾರತ ಬ್ಲೂ 41.4 ಓವರ್‌ಗಳಲ್ಲಿ 269 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಗುರುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ಗ್ರೀನ್ ಹಾಗೂ ಭಾರತ ರೆಡ್ ತಂಡಗಳು ಪೈಪೋಟಿ ನಡೆಸಲಿವೆ.

ಸುಭ್ರಮಣ್ಯ ಬದರೀನಾಥ್ ನೇತೃತ್ವದ  ಬ್ಲೂ ತಂಡವು ಗ್ರೀನ್ ಬೌಲರ್‌ಗಳ ಬಿಗಿ ದಾಳಿ ಎದುರು ಸಂಕಷ್ಟದಲ್ಲಿ ಸಿಲುಕಿತು. ಸೌರಭ್ ತಿವಾರಿ (74) ಹೋರಾಟ ಸಾಕಾಗಲಿಲ್ಲ.

ದೊಡ್ಡ ಮೊತ್ತದ ಬಲವಿದ್ದರಿಂದ ಜಯ ತನ್ನದೆನ್ನುವ ಭರವಸೆಯಿಂದ ಬೀಗಿತು `ಭಜ್ಜಿ~ ಪಡೆ. ಅವರ ನಿರೀಕ್ಷೆ ನಿಜವಾಗುವ ಸ್ಪಷ್ಟ ಸಂಕೇತವೂ ಬೇಗನೇ ಸಿಕ್ಕಿತು. ಕಷ್ಟಪಡುತ್ತಾ ತನ್ನ ಖಾತೆಗೆ ರನ್‌ಗಳನ್ನು ಸೇರಿಸಿಕೊಳ್ಳತೊಡಗಿದ ಬ್ಲೂ ರನ್ ಗತಿಗೆ ವೇಗ ನೀಡಲು ಪರದಾಡಿತು.

ಇದಕ್ಕೂ ಮೊದಲು ಆಡಿದ ಗ್ರೀನ್ ತಂಡದ ಇನಿಂಗ್ಸ್ ಮಾತ್ರ ಭಾರಿ ಶಕ್ತಿಯೊಂದಿಗೆ ಹಿಗ್ಗಿತು. ತನ್ನ ಪಾಲಿನ ಐವತ್ತು ಓವರುಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡ 348 ರನ್‌ಗಳನ್ನು ಪೇರಿಸಿತು.  ಮೊದಲ ವಿಕೆಟ್ ಜೊತೆಯಾಟದಲ್ಲಿಯೇ ಶತಕ ವೀರರಾದ ರಾಬಿನ್ ಮತ್ತು ಅನಿರುಧ್ ಅವರು 228 ರನ್‌ಗಳನ್ನು ಕಲೆಹಾಕಿದರು.
 
ಆನಂತರ ಕ್ರೀಸ್‌ಗೆ ಬಂದವರ ಮೇಲೆ ಹೊರೆಯೇ ಇರಲಿಲ್ಲ. ಆದ್ದರಿಂದ ನಿರಾತಂಕವಾಗಿ ಬ್ಯಾಟ್ ಬೀಸಲು ಮುಂದಾದರು. ಇದರಿಂದಾಗಿ ವಿಕೆಟ್‌ಗಳೂ ಪತನವಾಗುತ್ತಾ ಸಾಗಿದವು. ಆದರೂ ರನ್ ಗತಿಯೇನು ಕುಗ್ಗಲಿಲ್ಲ. ಪ್ರದೀಪ್ ಸಂಗ್ವಾನ್ ದಾಳಿಯಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ಗ್ರೀನ್ ಕೊನೆಯಲ್ಲಿ ಉತ್ಸಾಹ ಕಳೆದುಕೊಳ್ಳಲಿಲ್ಲ. ರನ್ ಮೊತ್ತ ಮುನ್ನೂರರ ಗಡಿ ದಾಟಿದ್ದರಿಂದ ಈ ತಂಡದ ಆಟಗಾರರ ಮೊಗದಲ್ಲಿ ನಗು ನಲಿಯಿತು.

ಬೌಲಿಂಗ್‌ನಲ್ಲಿಯೂ ಗ್ರೀನ್ ಪ್ರಭಾವಿಯಾಗುವ ಪ್ರಯತ್ನ ಮಾಡಿತು. ಆಫ್ ಸ್ಪಿನ್ನರ್ ಹರಭಜನ್‌ಗೆ ಹೆಚ್ಚು ವಿಕೆಟ್‌ಗಳು ಸಿಗಲಿಲ್ಲವಾದರೂ ಅವರು ಬಿಗುವಿನಿಂದ ದಾಳಿ ನಡೆಸಿದರು. ಅಭಿಮನ್ಯು ಮಿಥುನ್ ಹಾಗೂ ಸಮದ್ ಫಲಾಹ್ ಅವರು ಮಾತ್ರ ಬ್ಲೂ ಪಡೆಯ ಸಂಕಷ್ಟ ಹೆಚ್ಚುವಂತೆ ಮಾಡಿದರು.

ಸ್ಕೋರ್ ವಿವರ:
ಭಾರತ ಗ್ರೀನ್: 50 ಓವರುಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 348 (ರಾಬಿನ್ ಉತ್ತಪ್ಪ 132, ಶ್ರೀಕಾಂತ್ ಅನಿರುಧ್ 111, ಮೊಹಮ್ಮದ್ ಕೈಫ್ 11, ಮುರಳೀಧರನ್ ಗೌತಮ್ 17, ಹರಭಜನ್ ಸಿಂಗ್ 18, ಸಮಿತ್ ನರ್ವಾಲ್ 17; ಪ್ರದೀಪ್ ಸಂಗ್ವಾನ್ 58ಕ್ಕೆ4, ಅಮಿತ್ ಮಿಶ್ರಾ 68ಕ್ಕೆ2, ಪ್ರಶಾಂತ್ ಪರಮೇಶ್ವರನ್ 63ಕ್ಕೆ2, ಮುರಳಿ ವಿಜಯ್ 23ಕ್ಕೆ1); ಭಾರತ ಬ್ಲೂ: 41.4 ಓವರುಗಳಲ್ಲಿ 269 (ಮುರಳಿ ವಿಜಯ್ 45, ಸೌರಭ್ ತಿವಾರಿ 74, ದಿನೇಶ್ ಕಾರ್ತಿಕ್ 49, ಮನೀಶ್ ಪಾಂಡೆ 32; ಅಭಿಮನ್ಯು ಮಿಥುನ್ 43ಕ್ಕೆ3, ಸಮದ್ ಫಲಾಹ್ 59ಕ್ಕೆ3, ಹರಭಜನ್ ಸಿಂಗ್ 40ಕ್ಕೆ2, ಇಕ್ಬಾಲ್ ಅಬ್ದುಲ್ಲಾ 60ಕ್ಕೆ2). ಫಲಿತಾಂಶ: ಭಾರತ ಗ್ರೀನ್‌ಗೆ 79 ರನ್‌ಗಳ ಜಯ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.