ADVERTISEMENT

ಕ್ರಿಕೆಟ್: ಭಾರತ ತಂಡಕ್ಕೆ ಗೆಲುವು ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಸಿಡ್ನಿ: ಕಳೆದ ಕೆಲ ದಿನಗಳಿಂದ ಅಂಗಳಕ್ಕೆ ಹೊರತಾದ ಕಾರಣಗಳಿಂದಾಗಿಯೇ ಸುದ್ದಿಯಾಗಿದ್ದ ಭಾರತದ ಕ್ರಿಕೆಟಿಗರು ಇದೀಗ ತಮ್ಮ ಪೂರ್ಣ ಗಮನವನ್ನು ಆಟದ ಮೇಲೆ ಕೇಂದ್ರೀಕರಿಸಬೇಕಾಗಿದೆ. ತ್ರಿಕೋನ ಏಕದಿನ ಕ್ರಿಕೆಟ್ ಟೂರ್ನಿಯಿಂದ ಹೊರಬೀಳುವ ಅಪಾಯದಲ್ಲಿರುವ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಇನ್ನುಳಿದ ಎರಡು ಪಂದ್ಯಗಳು ಮಹತ್ವದ್ದಾಗಿವೆ.

ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ಸವಾಲು ಎದುರಿಸಲಿದೆ. ತಂಡದಲ್ಲಿ ಒಡಕು ಮೂಡಿದೆ ಎಂಬ ಸುದ್ದಿ, ಕೆಲವು ಆಟಗಾರರು ನೀಡಿರುವ ತದ್ವಿರುದ್ಧ ಹೇಳಿಕೆ, ಹಿರಿಯ ಆಟಗಾರರ ಬಗ್ಗೆ ನಾಯಕ ಮಹೇಂದ್ರ ಸಿಂಗ್ ದೋನಿ ತಿಳಿಸಿದ ಅಭಿಪ್ರಾಯ, ಟೀಕೆಗೆ ಗುರಿಯಾದ ರೊಟೇಷನ್ ಪದ್ಧತಿ... ಹೀಗೆ ಸಾಕಷ್ಟು ವಿವಾದಗಳು ತಂಡವನ್ನು ಸುತ್ತಿಕೊಂಡಿವೆ.

ತಂಡದಲ್ಲಿ ಒಡಕು ಇದೆಯೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಆಟಗಾರರು ಮಾತ್ರ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಆಸೀಸ್ ವಿರುದ್ಧ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡುವುದು ಅಗತ್ಯ. ಇಲ್ಲದಿದ್ದರೆ ಫೈನಲ್ ಕನಸು ಹೆಚ್ಚುಕಡಿಮೆ ಅಸ್ತಮಿಸಲಿದೆ.

ಭಾರತ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಲೀಗ್‌ನಲ್ಲಿ ತಲಾ ಆರು ಪಂದ್ಯಗಳನ್ನು ಆಡಿದ್ದು, ಇನ್ನೆರಡು ಪಂದ್ಯಗಳನ್ನು ಆಡಬೇಕಿದೆ. ಪಾಯಿಂಟ್ ಪಟ್ಟಿಯಲ್ಲಿ ಲಂಕಾ (15) ಮತ್ತು ಆಸೀಸ್ (14) ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಭಾರತ (10) ಕೊನೆಯ ಸ್ಥಾನದಲ್ಲಿದೆ.

ಈ ಕಾರಣ `ಮಹಿ~ ಬಳಗಕ್ಕೆ ಕೊನೆಯ ಎರಡೂ ಪಂದ್ಯಗಳಲ್ಲಿ ಜಯ ಅನಿವಾರ್ಯ. ಆಸೀಸ್ ಎದುರು ಸೋಲು ಅನುಭವಿಸಿದರೆ, ಕೊನೆಯ ಪಂದ್ಯದಲ್ಲಿ ಲಂಕಾ ಎದುರು ಬೋನಸ್ ಪಾಯಿಂಟ್‌ನೊಂದಿಗೆ ಜಯ ಗಳಿಸಬೇಕು. ಅಷ್ಟು ಮಾತ್ರವಲ್ಲ ಆಸ್ಟ್ರೇಲಿಯಾ ತನ್ನ ಅಂತಿಮ ಪಂದ್ಯದಲ್ಲಿ ಲಂಕಾ ತಂಡವನ್ನು ಮಣಿಸಲೇಬೇಕು.

ಇಂತಹ ಲೆಕ್ಕಾಚಾರಕ್ಕೆ ಆಸ್ಪದ ನೀಡದೆ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯುವ ವಿಶ್ವಾಸದಲ್ಲಿ ಭಾರತ ಇದೆ. ಸಾಕಷ್ಟು ವಿವಾದಕ್ಕೆ ಕಾರಣವಾದ `ರೊಟೇಷನ್ ಪದ್ಧತಿ~ ಕೊನೆಗೊಂಡಿದೆ ಎಂದು ದೋನಿ ಶನಿವಾರ ಹೇಳಿದ್ದಾರೆ. ಈ ಕಾರಣ ಅನುಭವಿ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅಂತಿಮ ಹನ್ನೊಂದರಲ್ಲಿ ಕಾಣಿಸಿಕೊಳ್ಳುವುದು ಖಚಿತ.

ನಿಧಾನಗತಿ ಬೌಲಿಂಗ್‌ನಿಂದ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗ್ದ್ದಿದ ದೋನಿ ಕೂಡಾ ಆಡಲಿದ್ದಾರೆ. ಇದು ತಂಡಕ್ಕೆ ಹೊಸ ಹುರುಪು ನೀಡಿದೆ. ಗಂಭೀರ್ ಮತ್ತು ದೋನಿ ಅವರನ್ನು ಹೊರತುಪಡಿಸಿ ಇತರ ಬ್ಯಾಟ್ಸ್‌ಮನ್‌ಗಳು ಇದುವರೆಗೆ ಉತ್ತಮ ಪ್ರದರ್ಶನ ನೀಡಿಲ್ಲ. ಅದೇ ರೀತಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಇನಿಂಗ್ಸ್‌ಗೆ ಭದ್ರ ಬುನಾದಿ ಹಾಕದೇ ಇರುವುದು ಕೂಡಾ ವೈಫಲ್ಯಕ್ಕೆ ಕಾರಣ.

ಪ್ರಮುಖ ಬೌಲರ್ ಜಹೀರ್ ಖಾನ್ ಗಾಯದಿಂದ ಬಳಲುತ್ತಿದ್ದು, ಆಡುವುದು ಅನುಮಾನ. ಸ್ನಾಯು ಸೆಳೆತದಿಂದ ಬಳಲಿರುವ ವಿನಯ್ ಕುಮಾರ್ ಕೂಡಾ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ. ಹಾಗಾದಲ್ಲಿ ಪ್ರವೀಣ್ ಕುಮಾರ್ ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಬಹುದು. ಕೊನೆಯ ಓವರ್‌ಗಳಲ್ಲಿ ಎದುರಾಳಿಗಳಿಗೆ ಹೆಚ್ಚಿನ ರನ್ ಬಿಟ್ಟುಕೊಡುವ `ಹವ್ಯಾಸ~ವನ್ನು ನಿಲ್ಲಿಸಿದರೆ ಮಾತ್ರ ಭಾರತಕ್ಕೆ ಗೆಲುವಿನ ಕನಸು ಕಾಣಬಹುದು.

ಮತ್ತೊಂದೆಡೆ ಆಸ್ಟ್ರೇಲಿಯಾ ತಂಡ ಹೆಚ್ಚಿನ ಒತ್ತಡದಲ್ಲಿಲ್ಲ. ಫೈನಲ್ ಪ್ರವೇಶಿಸಬೇಕಾದರೆ ಇನ್ನುಳಿದ ಎರಡು ಲೀಗ್ ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಪಡೆದರೆ ಸಾಕು. ಕಳೆದ ಪಂದ್ಯದಲ್ಲಿ ಲಂಕಾ ಕೈಯಲ್ಲಿ ಎದುರಾದ ಸೋಲು ತಂಡದ ಆಟಗಾರರ ಆತ್ಮವಿಶ್ವಾಸಕ್ಕೇನೂ ಧಕ್ಕೆ ಉಂಟುಮಾಡಿಲ್ಲ.

ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಈ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯವನ್ನಾಡುವ ಸಾಧ್ಯತೆಯಿದೆ. ಆದರೆ ಅವರಿಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ನೀಡಲು ಯಾರನ್ನು ಕೈಬಿಡಬೇಕು ಎಂಬುದು ನಾಯಕ ಮೈಕಲ್ ಕ್ಲಾರ್ಕ್ ಚಿಂತೆಗೆ ಕಾರಣವಾಗಿದೆ.

ತಂಡಗಳು
ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಪಾರ್ಥಿವ್ ಪಟೇಲ್, ರಾಹುಲ್ ಶರ್ಮ, ಜಹೀರ್ ಖಾನ್, ಆರ್.ಅಶ್ವಿನ್, ಉಮೇಶ್ ಯಾದವ್, ಪ್ರವೀಣ್ ಕುಮಾರ್, ಆರ್.ವಿನಯ್ ಕುಮಾರ್, ಇರ್ಫಾನ್ ಪಠಾಣ್, ರವೀಂದ್ರ ಜಡೇಜಾ ಹಾಗೂ ಮನೋಜ್ ತಿವಾರಿ.

ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಶೇನ್ ವ್ಯಾಟ್ಸನ್, ಮ್ಯಾಥ್ಯೂ ವೇಡ್, ಪೀಟರ್ ಫಾರೆಸ್ಟ್, ಡೇವಿಡ್ ಹಸ್ಸಿ, ಮೈಕ್ ಹಸ್ಸಿ, ಡೇನಿಯಲ್ ಕ್ರಿಸ್ಟಿಯನ್, ಕ್ಲಿಂಟ್ ಮೆಕೇ, ಬ್ರೆಟ್ ಲೀ, ರ‌್ಯಾನ್ ಹ್ಯಾರಿಸ್, ಬೆನ್ ಹಿಲ್ಫೆನ್ಹಾಸ್, ಕ್ಸೇವಿಯರ್ ಡೊಹರ್ಟಿ.

ಅಂಪೈರ್: ಬಿಲಿ ಬೌಡೆನ್ ಮತ್ತು ಸೈಮನ್ ಟಫೆಲ್; ಮ್ಯಾಚ್ ರೆಫರಿ: ಕ್ರಿಸ್ ಬ್ರಾಡ್
ಪಂದ್ಯದ ಆರಂಭ: ಬೆಳಿಗ್ಗೆ 8.50 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.