ADVERTISEMENT

ಕ್ರಿಕೆಟ್: ಮಾರುವೇಷದ ಕಾರ್ಯಾಚರಣೆಯಲ್ಲಿ ಬಹಿರಂಗ:ಮೋಸದಾಟದಲ್ಲಿ ಅಂಪೈರ್‌ಗಳು ಭಾಗಿ?

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST

ನವದೆಹಲಿ (ಐಎಎನ್‌ಎಸ್/ಪಿಟಿಐ): ಹಣದ ಹೊಳೆ ಹರಿಸುತ್ತಿರುವ ಐಪಿಎಲ್‌ನಲ್ಲಿ ಕೆಲ ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಳ್ಳಲು ಮುಂದಾದ ಘಟನೆ ನಡೆದ ಕೆಲವೇ ತಿಂಗಳಲ್ಲಿ ಮತ್ತೊಂದು ಮೋಸದಾಟ ಪ್ರಕರಣ ಬಹಿರಂಗಗೊಂಡಿದೆ.

ಆದರೆ ಈ ಬಾರಿ ಮೋಸದಾಟದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದು ಅಂತರರಾಷ್ಟ್ರೀಯ ಅಂಪೈರ್‌ಗಳು. ಖಾಸಗಿ ವಾಹಿನಿಯೊಂದು ಮಾರುವೇಷದ ಕಾರ್ಯಾಚರಣೆಯಲ್ಲಿ ಈ ವಿಷಯ ಬಹಿರಂಗಪಡಿಸಿದೆ. ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಹಾಗೂ ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ನಡೆದ ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿ (ಎಸ್‌ಪಿಎಲ್) ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಒಟ್ಟು ಆರು ಅಂಪೈರ್‌ಗಳು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

`ಇಂಡಿಯಾ ಟಿ.ವಿ~ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಕೆಲ ಆಘಾತಕಾರಿ ಅಂಶಗಳು ಬಹಿರಂಗಗೊಂಡಿವೆ. ಬಾಂಗ್ಲಾದೇಶದ ನಾದೀರ್ ಷಾ, ಪಾಕಿಸ್ತಾನದ ನದೀಮ್ ಘೋರಿ, ಅನೀಸ್ ಸಿದ್ದಿಕಿ, ಶ್ರೀಲಂಕಾದ ಗಾಮಿನಿ ದಿಸ್ಸಾನಾಯಕೆ, ಮೌರಿಸ್ ವಿನ್‌ಸ್ಟನ್ ಹಾಗೂ ಸಾಗರ ಗಳಾಗೆ ಆ ಅಂಪೈರ್‌ಗಳು ಎಂಬುದು ತಿಳಿದುಬಂದಿದೆ. ಇವರಲ್ಲಿ ಕೆಲವರು ಐಸಿಸಿ ಅಂಪೈರ್‌ಗಳ `ಎಲೈಟ್~ ಸಮಿತಿಯಲ್ಲಿ ಹಿಂದೆ ಇದ್ದವರು ಎಂಬುದೂ ಗೊತ್ತಾಗಿದೆ.

*0 ಏಕದಿನ ಪಂದ್ಯಗಳು ಹಾಗೂ ಮೂರು ಟ್ವೆಂಟಿ-20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ನಾದೀರ್ ಷಾ ಮೋಸದಾಟ ನಡೆಸಲು ಸಿದ್ಧರಾಗಿದ್ದರು ಎಂದು ಸುದ್ದಿ ವಾಹಿನಿ ಹೇಳಿಕೊಂಡಿದೆ.
ಪಾಕಿಸ್ತಾನದ ಬ್ಯಾಟ್ಸ್‌ಮನ್ ನಾಸೀರ್ ಜೆಮ್‌ಶೆದ್ ಢಾಕಾದಲ್ಲಿ ನಡೆದ ಬಾಂಗ್ಲಾದೇಶ  ಪ್ರೀಮಿಯರ್ ಲೀಗ್‌ನಲ್ಲಿ ಮೋಸದಾಟ ನಡೆಸಿದ್ದರು ಎಂದು ಷಾ ಹೇಳಿದ್ದಾರೆ ಎಂಬುದನ್ನು ಸುದ್ದಿ ವಾಹಿನಿ ತಿಳಿಸಿದೆ.

ಲಂಕಾದ ಅಂಪೈರ್ ಸಾಗರ ಅವರು ಚುಟುಕು ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ನಡೆದ ಭಾರತ-ಪಾಕಿಸ್ತಾನ ನಡುವಿನ ಅಭ್ಯಾಸ ಪಂದ್ಯದ ಮಾಹಿತಿ ನೀಡಲು ಕೇವಲ 50 ಸಾವಿರ ರೂಪಾಯಿ ಮೊತ್ತಕ್ಕೆ ಒಪ್ಪಿಕೊಂಡಿದ್ದ ಅಂಶ ಬಹಿರಂಗಗೊಂಡಿದೆ.
 
ಕಣಕ್ಕಿಳಿಯಲಿರುವ ಉಭಯ ತಂಡಗಳ ಆಟಗಾರರು, ವಾತಾವರಣ, ಪಿಚ್ ಹಾಗೂ ಟಾಸ್ ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಅವರು ಆ ಪಂದ್ಯದಲ್ಲಿ ನಾಲ್ಕನೇ ಅಂಪೈರ್ ಆಗಿದ್ದರು. ಈ ಸುದ್ದಿ ವಾಹಿನಿಯ ವರದಿಗಾರರು ಅಂಪೈರ್‌ಗಳ ಹೇಳಿಕೆಯನ್ನು ಮಾರುವೇಷದಲ್ಲಿ ಕ್ಯಾಮೆರಾದಲ್ಲಿ ಸೆರೆ      ಹಿಡಿದಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ತಂಡದ ಅಧಿಕಾರಿಗಳಿಗೆ ಮದ್ಯ ನೀಡಿ ಯಾವುದೇ ಕೆಲಸವನ್ನು ಮಾಡಿಸಿಕೊಳ್ಳಬಹುದು ಎಂದು ಅಂಪೈರ್ ದಿಸ್ಸಾನಾಯಕೆ ಹೇಳಿದ್ದಾರೆ. ಪಾಕ್‌ನ ನದೀಮ್ ಕೂಡ ಹಣಕೊಟ್ಟರೆ ಯಾವುದೇ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ ಹಾಗೂ ಭಾರತದ ಪರವಾಗಿ ತೀರ್ಪು ನೀಡಲು ಅನೀಸ್ ಸಿದ್ದಿಕಿ ಸಿದ್ಧರಿದ್ದಾರೆ ಎಂಬುದನ್ನು ಸುದ್ದಿ ವಾಹಿನಿ ತಿಳಿಸಿದೆ.
 
ಅವರು *3 ಏಕದಿನ ಪಂದ್ಯ ಹಾಗೂ 1* ಟೆಸ್ಟ್‌ಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನೂ ಒಪ್ಪಿಸುವುದಾಗಿ ಅನೀಸ್ ಹೇಳಿದ್ದಾರೆ ಎನ್ನಲಾಗಿದೆ. ಆದರೆ ನದೀಮ್ ಸೇರಿದಂತೆ ಕೆಲ ಅಂಪೈರ್‌ಗಳುಈ ಆರೋಪವನ್ನು ಅಲ್ಲಗಳೆದಿದ್ದಾರೆ.

ಪೂರಕ ಮಾಹಿತಿಗಾಗಿ ಐಸಿಸಿ ಮನವಿ
ದುಬೈ ವರದಿ:  ಅಂಪೈರ್‌ಗಳು ಮೋಸದಾಟದಲ್ಲಿ ಪಾಲ್ಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ ನೀಡುವಂತೆ ಮಾರುವೇಷದ ಕಾರ್ಯಾಚರಣೆ ನಡೆಸಿರುವ ಸುದ್ದಿ ವಾಹಿನಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೇಳಿಕೊಂಡಿದೆ.

ಇದು ತನಿಖೆಗೆ ಸಹಾಯವಾಗಲಿದೆ ಎಂದು ಅದು ಹೇಳಿದೆ. `ಆಟಗಾರರೇ ಇರಲಿ ಅಥವಾ ಅಂಪೈರ್‌ಗಳೇ ಇರಲಿ ಭ್ರಷ್ಟಾಚಾರವನ್ನು ಸಹಿಸಲಾಗದು~ ಎಂದು ಐಸಿಸಿ ತಿಳಿಸಿದೆ.  ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಕೂಡ ಪ್ರಕರಣದ ತನಿಖೆಗೆ ಮುಂದಾಗಿದೆ.

ಆರೋಪ ನಿರಾಕರಣೆ: `ಮೋಸದಾಟ ಆರೋಪ ಸುಳ್ಳು.  ಪಾಕಿಸ್ತಾನದಿಂದ ಹೊರಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿಯೇ ಇಲ್ಲ~ ಎಂದು ಐಸಿಸಿ ಅಂತರರಾಷ್ಟ್ರೀಯ ಸಮಿತಿ ಅಂಪೈರ್ ಆಗಿರುವ ನದೀಮ್  ಘೌರಿ ನುಡಿದಿದ್ದಾರೆ.

ಮುಖ್ಯಾಂಶಗಳು
* ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾದ ಆರು ಅಂಪೈರ್‌ಗಳು
* ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದವರು
*ಚುಟುಕು ವಿಶ್ವಕಪ್‌ನ ಭಾರತ-ಪಾಕ್ ನಡುವಿನ ಅಭ್ಯಾಸ ಪಂದ್ಯ ಫಿಕ್ಸ್ ಮಾಡಲು ಹಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.