ADVERTISEMENT

`ಕ್ರಿಕೆಟ್ ಸಭ್ಯರ ಕ್ರೀಡೆಯಾಗಿ ಉಳಿದಿಲ್ಲ'

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 20:04 IST
Last Updated 3 ಜೂನ್ 2013, 20:04 IST

ನವದೆಹಲಿ (ಪಿಟಿಐ): ಚೆನ್ನೈನಲ್ಲಿ ಭಾನುವಾರ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿಯ ತುರ್ತುಸಭೆಯನ್ನು `ನಾಚಿಕೆಗೇಡು' ಎಂದಿರುವ ಮಾಜಿ ಆಫ್ ಸ್ಪಿನ್ನರ್ ಇ.ಎ.ಎಸ್. ಪ್ರಸನ್ನ, `ಕ್ರೀಡೆಯನ್ನು ಹಣ ಆಳುತ್ತಿದೆ ಮತ್ತು   ಕ್ರಿಕೆಟ್ ಸಭ್ಯರ ಆಟವಾಗಿ ಉಳಿದಿಲ್ಲ' ಎಂದು ಟೀಕಿಸಿದ್ದಾರೆ.

`ಭಾರತದಲ್ಲಿನ ಕ್ರಿಕೆಟ್ ಜನಪ್ರಿಯತೆಯ ಮೇಲೆ ಇಡೀ ವಿವಾದ ಪರಿಣಾಮ ಬೀರುತ್ತಿಲ್ಲ. ಐಪಿಎಲ್ ವೇಳೆ ಕ್ರೀಡಾಂಗಣ, ಜನರಿಂದ ಕಿಕ್ಕಿರಿದು ತುಂಬಿರುವುದನ್ನು ನಾವು ನೋಡಿದ್ದೇವೆ. ಇಲ್ಲಿ  ಅಪಾರ ಕ್ರೀಡಾಪ್ರೇಮಿಗಳಿದ್ದಾರೆ' ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

`ಇದೀಗ ಆಟವನ್ನು ಹಣ ಆಳುತ್ತಿದೆ. ಇದರಿಂದ ನೋವಾಗಿದೆ. ಕ್ರಿಕೆಟ್ ಅನಿಶ್ಚಿತತೆಯ ಅದ್ಭುತ ಆಟ. ನಮ್ಮ ಕಾಲದಲ್ಲಿ ಕೆಲ ತೀರ್ಪುಗಳ ಸಂಬಂಧ ಅಂಪೈರ್ ಸಂದಿಗ್ಧತೆಯಲ್ಲಿದ್ದಾಗ ಬ್ಯಾಟ್ಸ್‌ಮನ್‌ಗಳು ತಮ್ಮಷ್ಟಕ್ಕೆ ತಾವೇ ಮೈದಾನದಿಂದ ಹೊರ ನಡೆಯುತ್ತಿದ್ದರು. ಅದನ್ನು ಸಭ್ಯರ ಆಟ ಎಂದು ಕರೆಯುತ್ತಾರೆ. ಪ್ರಸ್ತುತ ಅಂತಹವರ ಸಂಖ್ಯೆ ಎಷ್ಟಿದೆ. ಯಾರೂ ಆ ಬಗ್ಗೆ ಈಗ ತಲೆಕೆಡಿಸಿಕೊಳ್ಳುತ್ತಿಲ್ಲ' ಎಂದೂ ಅವರು  ನುಡಿದಿದ್ದಾರೆ.

`ಅಂಪೈರ್‌ಗಳು ಚೆನ್ನಾಗಿ ಸಂಬಳ ಪಡೆಯುತ್ತಾರೆ. ಸೂಕ್ತ ತೀರ್ಪು ನೀಡುವುದು ಅವರ ಕರ್ತವ್ಯ ಎಂದು ಕ್ರಿಕೆಟಿಗರು ಭಾವಿಸುತ್ತಾರೆ. ಇಡೀ ಯೋಚನಾ ಲಹರಿಯೇ ಈಗ ಬದಲಾಗಿದೆ' ಎಂದು ಪ್ರಸನ್ನ ವಿಷಾದಿಸಿದರು.

“ಭಾನುವಾರ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನಗಳು ಪೂರ್ವ ನಿಯೋಜಿತ ಹಾಗೂ ನಾಚಿಕೆಗೇಡಿನ ಸಂಗತಿ. ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ರಾಜೀನಾಮೆ ನೀಡುವರು ಎಂದು    ನಿರೀಕ್ಷಿಸಲಾಗಿತ್ತು. ಆದರೆ ಅದು   ಸಂಭವಿಸಲಿಲ್ಲ. ಅವರು `ಬದಿಗೆ' ಸರಿದರು. ಅವರ ಅಧಿಕಾರಗಳೇನು ಎಂಬುದು ನನಗೆ ಗೊತ್ತಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.